ಶನಿವಾರ, ಸೆಪ್ಟೆಂಬರ್ 25, 2021
26 °C
ನಬಾರ್ಡ್ ಸಹಾಯಕ ಪ್ರಧಾನ ವ್ಯವಸ್ಥಾಪಕ ನಟರಾಜನ್ ಹೇಳಿಕೆ

ಇ–ಶಕ್ತಿ: 40 ಸಾವಿರ ಸ್ತ್ರೀಶಕ್ತಿ ಸಂಘಗಳ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮೊದಲ ಹಂತದ ಇ-ಶಕ್ತಿ ಅನುಷ್ಠಾನದಲ್ಲಿ ಯಶಸ್ಸಿನತ್ತ ಸಾಗುತ್ತಿರುವ ಕೋಲಾರ–ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ಗೆ 2ನೇ ಹಂತದಲ್ಲಿ 40 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗುವುದು’ ಎಂದು ನಬಾರ್ಡ್ ಸಹಾಯಕ ಪ್ರಧಾನ ವ್ಯವಸ್ಥಾಪಕ (ಎಜಿಎಂ) ನಟರಾಜನ್ ತಿಳಿಸಿದರು.

ಇ-ಶಕ್ತಿ ಅನುಷ್ಠಾನ ಸಂಬಂಧ ಇಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಮೊದಲ ಹಂತದಲ್ಲಿ 7,330 ಮಹಿಳಾ ಸ್ವಸಹಾಯ ಸಂಘಗಳನ್ನು ಇ-ಶಕ್ತಿ ವ್ಯಾಪ್ತಿಗೆ ತರಲಾಗಿದೆ. ಆನ್‌ಲೈನ್‌ ಚಟುವಟಿಕೆ ಆಧಾರಿತವಾಗಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಆಗಸ್ಟ್ ಅಂತ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

‘2ನೇ ಹಂತದಲ್ಲಿ ಇ-ಶಕ್ತಿ ವ್ಯಾಪ್ತಿಗೆ ಅವಿಭಜಿತ ಕೋಲಾರ ಜಿಲ್ಲೆಯ ಎಲ್ಲಾ 40 ಸಾವಿರ ಮಹಿಳಾ ಸ್ವಸಹಾಯ ಸಂಘಗಳನ್ನು ತರಲು ನಬಾರ್ಡ್ ಆರ್ಥಿಕ ನೆರವು ಒದಗಿಸಲಿದೆ. ದೇಶದಲ್ಲಿ ಪ್ರಾಯೋಗಿಕವಾಗಿ ಬೀದರ್ ಹಾಗೂ ಕೋಲಾರ ಡಿಸಿಸಿ ಬ್ಯಾಂಕ್‌ನಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ’ ಎಂದು ವಿವರಿಸಿದರು.

‘ಇ-ಶಕ್ತಿ ಅನುಷ್ಠಾನದಿಂದ ಭದ್ರತೆ ಇಲ್ಲದೆ ಸಾಲ ಪಡೆಯುವ ಮಹಿಳಾ ಸಂಘಗಳ ಚಟುವಟಿಕೆಗಳ ಮೇಲೆ ಬ್ಯಾಂಕ್ ಸದಾ ನಿಗಾ ವಹಿಸಲು ಸಾಧ್ಯವಾಗುತ್ತದೆ. ಇದರಿಂದ ಭ್ರಷ್ಟಾಚಾರ ತಡೆ ಜತೆಗೆ ಸಾಲ ಮರುಪಾವತಿಯಲ್ಲಿನ ವಿಳಂಬ, ಎನ್‌ಪಿಎ ತಪ್ಪಲಿದೆ’ ಎಂದು ಹೇಳಿದರು.

‘ಇ-ಶಕ್ತಿ ವ್ಯಾಪ್ತಿಯಲ್ಲಿ ಸಂಘಗಳ ವಾರದ ಮತ್ತು ಮಾಸಿಕ ಸಭೆಗಳ ಮಾಹಿತಿ, ಉಳಿತಾಯ, ಸಾಲ ಮರುಪಾವತಿ ಎಲ್ಲವೂ ಕಾಲಕಾಲಕ್ಕೆ ಆನ್‌ಲೈನ್‌ನಲ್ಲಿ ದಾಖಲಾಗುವುದರಿಂದ ಸಂಘದ ಯಾವುದೇ ಸದಸ್ಯೆ ಮರುಪಾವತಿಯಲ್ಲಿ ವಂಚನೆ ಮಾಡಲು ಸಾಧ್ಯವಿಲ್ಲ. ಇದರಿಂದ ಬ್ಯಾಂನ್‌ನ ಆರ್ಥಿಕ ಪರಿಸ್ಥಿತಿ ಸುಭದ್ರವಾಗುತ್ತದೆ. ಇ-ಶಕ್ತಿ ಡಿಸಿಸಿ ಬ್ಯಾಂಕ್‌ನ ಪಾಲಿಗೆ ಪರಾಶಕ್ತಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ನಂಬಿಕೆ ಬಲಗೊಳ್ಳುತ್ತದೆ: ‘ಬಡ ಜನರಲ್ಲಿ ನಿಯತ್ತಿದೆ. ಅವರು ಸಾಲ ಮರುಪಾವತಿಯಲ್ಲಿ ವಂಚಿಸುವುದಿಲ್ಲ. ಸೊಸೈಟಿಗಳ ಗಣಕೀಕರಣ, ಮಹಿಳಾ ಸಂಘಗಳನ್ನು ಇ-ಶಕ್ತಿ ವ್ಯಾಪ್ತಿಗೆ ತರುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ. ಇದರಿಂದ ಮಹಿಳೆಯರಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಥವಾ ಬ್ಯಾಂಕ್ ಕುರಿತ ನಂಬಿಕೆ ಬಲಗೊಳ್ಳುತ್ತದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.

‘ಬ್ಯಾಂಕ್ ಅಥವಾ ಸೊಸೈಟಿಯಿಂದ ಸಾಲ ಪಡೆಯುವ ಮಹಿಳಾ ಸ್ವಸಹಾಯ ಸಂಘಗಳ ಪ್ರತಿ ಸದಸ್ಯರೂ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆಯುವುದು ಕಡ್ಡಾಯ. ಬ್ಯಾಂಕ್ ಸಿಬ್ಬಂದಿ ಇಚ್ಛಾಶಕ್ತಿ ತೋರಿದರೆ ಎಲ್ಲಾ ಸದಸ್ಯರು ಇತರೆ ಬ್ಯಾಂಕ್‌ಗಳಲ್ಲಿ ಇಟ್ಟಿರುವ ತಮ್ಮ ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕ್‌ಗೆ ತರಲು ಮನವೊಲಿಸಬಹುದು’ ಎಂದು ಸಲಹೆ ನೀಡಿದರು.

‘ಸಾಲ ನೀಡಿಕೆಯಲ್ಲಿ ಬ್ಯಾಂಕ್ ಪಾರದರ್ಶಕತೆ ಕಾಪಾಡಿದೆ. ಸಾಲದ ಹಣವನ್ನು ಸದಸ್ಯರ ಉಳಿತಾಯ ಖಾತೆಗೆ ತುಂಬುತ್ತಿದ್ದು, ಅವರು ಎಟಿಎಂ ಮೂಲಕವೇ ಹಣ ಡ್ರಾ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನಬಾರ್ಡ್ ಒದಗಿಸಿರುವ ಸಂಚಾರಿ ಎಟಿಎಂ ವಾಹನ ಸೊಸೈಟಿಗಳ ಆವರಣಕ್ಕೆ ಹೋಗುತ್ತಿದ್ದು, ಅಲ್ಲೇ ಹಣ ಡ್ರಾ ಮಾಡಿಕೊಳ್ಳಬಹುದು. ಜತೆಗೆ ಮೈಕ್ರೋ ಎಟಿಎಂ ವ್ಯವಸ್ಥೆ ಜಾರಿಯಾಗಿದ್ದು, ಸಾಲದ ಹಣ ಡ್ರಾ ಹಾಗೂ ಮರುಪಾವತಿಗೂ ಅವಕಾಶ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಪ್ಪ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಖಲೀಮ್‌ ಉಲ್ಲಾ, ಶಿವಕುಮಾರ್, ಹುಸೇನ್ ದೊಡ್ಡಮನಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು