ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಕುಂಬಾರ ನಿಗಮ ಸ್ಥಾಪಿಸಿ: ನಾಗರಾಜ್ ಆಗ್ರಹ

Last Updated 1 ಫೆಬ್ರುವರಿ 2021, 15:11 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಕುಂಬಾರ ಸಮುದಾಯದ ಏಳಿಗೆಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು’ ಎಂದು ಕುಂಬಾರ ಸಮುದಾಯದ ಮುಖಂಡ ಕೆ.ನಾಗರಾಜ್ ಆಗ್ರಹಿಸಿದರು.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಕ್ಷ್ಮೀಪುರ ಸ್ವಸಹಾಯ ಸಂಘ ಉದ್ಘಾಟನೆ ಹಾಗೂ ಕುಂಬಾರ ವೃತ್ತಿಪರರಿಗೆ ಉಚಿತ ತರಬೇತಿ ಶಿಬಿರ ಯಂತ್ರೋಪಕರಣ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕುಂಬಾರ ಅಭಿವೃದ್ಧಿ ಮಂಡಳಿಯು ದೇವರಾಜ ಅರಸು ನಿಗಮದಲ್ಲಿದ್ದು, ಇದನ್ನು ಕುಂಬಾರರ ಅಭಿವೃದ್ಧಿ ನಿಗಮವಾಗಿ ಪ್ರತ್ಯೇಕಿಸಿ ಮಂಡಳಿ ಸ್ಥಾಪಿಸಬೇಕು. ಕುಂಬಾರ ಸಮುದಾಯದವರಿಗೆ ಹೆಚ್ಚಿನ ಸರ್ಕಾರಿ ಸೌಲಭ್ಯ ನೀಡಬೇಕು’ ಎಂದು ಮನವಿ ಮಾಡಿದರು.

‘ಸಮುದಾಯದ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರದ ಮೇಲೆ ಹಲವು ಬಾರಿ ಒತ್ತಡ ಹಾಕಿದ್ದರೂ ಈವರೆಗೆ ನಿಗಮ ಸ್ಥಾಪನೆಯಾಗಿಲ್ಲ. ಹಿಂದುಳಿದಿರುವ ಕುಂಬಾರ ಸಮುದಾಯಕ್ಕೆ ಪ್ರತ್ಯೇಕ ನಿಗಮ ಹೆಚ್ಚಿನ ಅನುದಾನ ನೀಡಿ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು. ಸಮುದಾಯವು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು’ ಎಂದು ಹೇಳಿದರು.

ಸೌಲಭ್ಯ ಸಿಗುತ್ತಿಲ್ಲ: ‘ಕುಂಬಾರ ಸಮುದಾಯವು ಮೀಸಲಾತಿಯಲ್ಲಿ 112 ಜಾತಿಗಳ ಮಧ್ಯೆ ಸ್ಪರ್ಧೆ ಮಾಡುವುದರಿಂದ ಅವಕಾಶಗಳಿಂದ ವಂಚಿತವಾಗುತ್ತಿದೆ. 2ಎ ಮೀಸಲಾತಿಯಡಿ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಮಾಜದಲ್ಲಿ ದಿನದಿಂದ ದಿನಕ್ಕೆ ಕುಂಬಾರ ವೃತ್ತಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಮುದಾಯವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸವಲತ್ತು ಬಳಸಿಕೊಂಡು ಸ್ವಾವಲಂಬನೆ ಸಾಧಿಸುವಂತೆ ಆಗಬೇಕು. ಜನಾಂಗದ ಮುಖಂಡರು ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳನ್ನು ತಲುಪಿಸಬೇಕು. ಸರ್ಕಾರದಿಂದ ಮತ್ತಷ್ಟು ಸೌಲಭ್ಯ ಕೇಳಲು ಮುಖಂಡರು ಸಂಘಟಿತರಾಗಬೇಕು’ ಎಂದು ಸಲಹೆ ನೀಡಿದರು.

ಪಾಠ ಕಲಿಸಬೇಕು: ‘ಕುಂಬಾರ ಸಮುದಾಯದ ಜನಸಂಖ್ಯೆ ಕಡಿಮೆ ಇರುವುದರಿಂದ ಏನೂ ಮಾಡಲ್ಲ ಎಂಬ ಕಾರಣಕ್ಕೆ ರಾಜಕಾರಣಿಗಳು, ಅಧಿಕಾರಿಗಳು ನಮ್ಮ ಸಮುದಾಯ ಕಡೆಗಣಿಸಿದ್ದಾರೆ. ಸಮುದಾಯದ ಜನರ ಸಂಘಟಿತರಾಗಿ ಮುಂಬರುವ ಚುನಾವಣೆಯಲ್ಲಿ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಜಿಲ್ಲಾ ಕುಂಬಾರ ಸಾರ್ವಜನಿಕ ವಿದ್ಯಾರ್ಥಿನಿಲಯದ ಅಧ್ಯಕ್ಷ ನಾರಾಯಣಪ್ಪ ಗುಡುಗಿದರು.

ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಶ್ರೀನಿವಾಸಪ್ಪ, ಉಪಾಧ್ಯಕ್ಷ ನಂಜುಂಡಪ್ಪ, ಕುಂಬಾರ ಸಮುದಾಯದ ಮುಖಂಡರಾದ ಲಕ್ಕಣ್ಣ, ಗಂಗರಾಜ, ನಾಗೇಶ್, ಅನಂತಪದ್ಮನಾಭ, ನಾರಾಯಣಸ್ವಾಮಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT