ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು| ತಾಲ್ಲೂಕುವಾರು ಹಾಸ್ಟೆಲ್‌ ನಿರ್ಮಾಣ

ಮಾಲೂರು ತಾಲ್ಲೂಕು ಯಾದವ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ನಿರ್ಧಾರ
Last Updated 12 ಮಾರ್ಚ್ 2023, 5:41 IST
ಅಕ್ಷರ ಗಾತ್ರ

ಮಾಲೂರು: ‘ಯಾದವ ಸಮಾಜ ಶೈಕ್ಷಣಿಕ, ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಸಮಾಜದ ಅಭಿವೃದ್ಧಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಯಾದವ ಸಮಾಜದ ಜಿಲ್ಲಾ ಅಧ್ಯಕ್ಷ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಹಾರೋಹಳ್ಳಿ ರಸ್ತೆ ಬಳಿಯ ಬೆನಕ ಬಡಾವಣೆಯಲ್ಲಿ ಶನಿವಾರ ತಾಲ್ಲೂಕು ಯಾದವ ಗೊಲ್ಲ ಸಂಘಕ್ಕೆ ಯೋಜನಾ ಪ್ರಾಧಿಕಾರ ಮಂಜೂರು ಮಾಡಿರುವ ಸಂಘದ ನಿವೇಶನದಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆ ಹಾಗೂ ಗಣ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಘವು ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ. ಸಮಾಜದಲ್ಲಿ ಸಣ್ಣ ಸಮುದಾಯಗಳನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ರಾಜಕೀಯವಾಗಿ ಗುರುತಿಸಿಕೊಂಡಿರುವವರು ಸಮುದಾಯದ ವಿಚಾರ ಬಂದಾಗ ಒಗ್ಗಟ್ಟು ಪ್ರದರ್ಶಿಸಬೇಕು. ದೊಡ್ಡ ಸಮುದಾಯಗಳಲ್ಲಿ ಇರುವ ಒಗ್ಗಟ್ಟು ನಮ್ಮಲ್ಲೂ ಇರಬೇಕು ಎಂದು ಹೇಳಿದರು.

ಸಮುದಾಯದ ವಿಚಾರ ಬಂದಾಗ ರಾಜಕೀಯ ಬದಿಗೊತ್ತಿ ಒಗ್ಗಟ್ಟು ಕಾಪಾಡಿಕೊಳ್ಳಬೇಕು. ಯಾದವ ಸಮಾಜದವರು ಸ್ವಾಭಿಮಾನ ಬಿಟ್ಟು ಬದುಕುವುದು ಬೇಡ. ಸಮಾಜದಲ್ಲಿ ಅನುಸರಿಸಿಕೊಂಡು ಬದುಕಬೇಕು. ಪೋಷಕರು ಮಕ್ಕಳಿಗೆ ಶಿಕ್ಷಣ ನೀಡಿದಾಗ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.

ತಾಲ್ಲೂಕು ಅಧ್ಯಕ್ಷ ಗೋವಿಂದಪ್ಪ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನದ ಕಟ್ಟಡಕ್ಕೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಲಾಗುವುದು ಎಂದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್ ಬಾಬು, ಯಾದವ ಗೊಲ್ಲ ಸಂಘದ ತಾಲ್ಲೂಕು ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ಹಲವು ದಿನಗಳ ಕನಸು ನನಸಾಗಿದೆ. ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ವಿದ್ಯಾರ್ಥಿ ನಿಲಯ, ಸಮುದಾಯ ಭವನ ನಿರ್ಮಾಣಕ್ಕೆ ಯೋಜನಾ ಪ್ರಾಧಿಕಾರದಿಂದ ನಿವೇಶನ ಪಡೆದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.‌

ತಾಲ್ಲೂಕಿನಾದ್ಯಂತ ಪ್ರವಾಸ ಕೈಗೊಂಡು ಸಮುದಾಯದವರ ಸಮೀಕ್ಷೆ ನಡೆಸಿ ವಂತಿಗೆ ಸಂಗ್ರಹಿಸಲಾಗಿದೆ. ಕೆಲವೇ ದಿನಗಳಲ್ಲಿ ನಿವೇಶನವನ್ನು ನೋಂದಣಿ ಮಾಡಿಸಲಾಗುವುದು. ಸಮುದಾಯದವರು ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡಬೇಕು. ಮುಂದಿನ ವರ್ಷದೊಳಗೆ ಕಟ್ಟಡ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸತೀಶ ಆರಾಧ್ಯ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್ ಬಾಬು, ತಾಲ್ಲೂಕು ಯಾದವ ಸಂಘದ ಖಜಾಂಚಿ ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ನಟರಾಜ್, ಗೌರವಾಧ್ಯಕ್ಷ ಎಂ.ಎ. ವೆಂಕಟಸ್ವಾಮಿ, ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಅಶ್ವತ್ ನಾರಾಯಣ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಸತೀಶ ಆರಾಧ್ಯ, ಸಂಘದ ಪದಾಧಿಕಾರಿಗಳಾದ ಚಂದ್ರಶೇಖರ್ ಬಾಬು, ಚಿಕ್ಕವೆಂಕಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT