ಮಂಗಳವಾರ, ಏಪ್ರಿಲ್ 13, 2021
22 °C
ಚೌಡದೇನಹಳ್ಳಿಯಲ್ಲಿ ಅಟಲ್‌ ಭೂ ಜಲ ಯೋಜನೆಗೆ ಚಾಲನೆ

ಕೋಲಾರ: ಅಂತರ್ಜಲ ಅಭಿವೃದ್ಧಿಗೆ ಮೌಲ್ಯಮಾಪನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯ ಕೆಲವು ಆಯ್ದ ಗ್ರಾಮಗಳಲ್ಲಿ ಅಂತರ್ಜಲ ಮೌಲ್ಯಮಾಪನ ಮಾಡಲಾಗುವುದು’ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

ತಾಲ್ಲೂಕಿನ ನರಸಾಪುರ ಹೋಬಳಿಯ ಚೌಡದೇನಹಳ್ಳಿಯಲ್ಲಿ ಶನಿವಾರ ಅಟಲ್‌ ಭೂ ಜಲ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಸರ್ಕಾರವು ಅಂತರ್ಜಲ ಅಭಿವೃದ್ಧಿಗೆ ಕ್ರಮಕೈಗೊಂಡಿದೆ. ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳನ್ನು ಕೊರೆದು ಅಂತರ್ಜಲ ಮೌಲ್ಯಮಾಪನ ಮಾಡಲಾಗುವುದು. ಮೌಲ್ಯಮಾಪನ ಮಾಡಿದ ವರದಿಯನ್ನು ಕೇಂದ್ರ ಸರ್ಕಾರದ ಪರಿಶೀಲನೆಗೆ ಕಳಿಸಲಾಗುವುದು ಎಂದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ‘ಕೆಸಿ ವ್ಯಾಲಿ ನೀರಿನಿಂದ ಜಿಲ್ಲೆಯ ಬಹುತೇಕ ಕಡೆ ಅಂತರ್ಜಲ ಹೆಚ್ಚಾಗಿದೆ. ರೈತರ ಕೊಳವೆಬಾವಿಗಳಲ್ಲಿ ಕೂಡ ನೀರು ಹೆಚ್ಚಾಗಿ ಸಿಗುತ್ತಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳು ಕೂಡ ಸರಾಗವಾಗಿ ನಡೆಯುತ್ತಿದೆ ನಮ್ಮ ಜಿಲ್ಲೆಯ ರೈತರು ಕಷ್ಟ ಜೀವಿಗಳು, ಬಿಸಿಲು ಗಾಳಿ ಎನ್ನದೆ ರೆಟ್ಟೆ ಮುರಿದು ಕೆಲಸ ಮಾಡುವವರು. ಇಂತಹ ಭೂಮಿಯಲ್ಲಿ ಮಳೆಯಿಲ್ಲದೆ ಕಳೆದ 15 ವರ್ಷಗಳು ಬರಗಾಲದಿಂದಾಗಿ ತುಂಬಾ ಕಷ್ಟವನ್ನು ಎದುರಿಸಿದರು. ಆದರೂ ಎದೆಗುಂದದೆ ಕೆಲಸ ಮಾಡಿದ್ದರಿಂದ ಈಗ ಪ್ರತಿಫಲ ಸಿಕ್ಕಿದೆ’ ಎಂದರು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಹಿರಿಯ ಭೂ ವಿಜ್ಞಾನಿ ತಿಪ್ಪೇಸ್ವಾಮಿ ಮಾತನಾಡಿ, ಅಟಲ್ ಭೂ ಜಲ್ ಯೋಜನೆ ಅಡಿಯಲ್ಲಿ ಅಂತರ್ಜಲ ಸಂಪನ್ಮೂಲಗಳನ್ನು ಅಭಿವೃದ್ಧಿಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೊಂದಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಒಟ್ಟು ₹2.32 ಕೋಟಿಯಲ್ಲಿ ಕೊಳವೆ ಬಾವಿಗಳನ್ನು ಕೊರೆಯುವ ಮೂಲಕ ಅಂತರ್ಜಲ ಮೌಲ್ಯಮಾಪನ ಮತ್ತು ವಿಶ್ಲೇಷಣೆ ಮಾಡಲು ಉದ್ದೇಶಿಸಲಾಗಿದೆ ಎಂದರು.

ಸಣ್ಣ ನೀರಾವರಿ ಇಲಾಖೆಯ ಇ.ಇ ಸುರೇಶ್ ಕುಮಾರ್, ನೋಡಲ್ ಅಧಿಕಾರಿ ಬಸೇಗೌಡ, ಪಿಡಿಒ ಮುನಿರಾಜು, ಮುಖಂಡ ಜಿ.ಶಾಮಣ್ಣ, ಮೋಹನ್ ಗೌಡ, ನಾಗನಾಳ ಸೋಮಣ್ಣ, ಮಮತಾ, ಸಿ.ಡಿ.ರಾಮ ಚಂದ್ರೇಗೌಡ, ಓಹಿಲೇಶ್ವರ್, ಶ್ರೀನಿವಾಸಪ್ಪ, ಮುರಗೇಶ್, ಬಸೇಗೌಡ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು