ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಸ್ವಾತಂತ್ರ್ಯ ಬಂದರೂ ಬೈರತನಹಳ್ಳಿಗೆ ಬಸ್‌ ಬಂದಿಲ್ಲ!

Published 15 ಆಗಸ್ಟ್ 2023, 6:57 IST
Last Updated 15 ಆಗಸ್ಟ್ 2023, 6:57 IST
ಅಕ್ಷರ ಗಾತ್ರ

ಮಾಲೂರು: ಸ್ವಾತಂತ್ರ್ಯ ಬಂದಗಿಂದಲೂ ತಾಲ್ಲೂಕಿನ ಬೈರತನಹಳ್ಳಿ ಗ್ರಾಮ ಕೆಂಪು ಬಸ್‌ ಮುಖವನ್ನೇ ನೋಡಿಲ್ಲ.ಗ್ರಾಮ ರೂಪುಗೊಂಡಗಿಂದಲೂ ಗ್ರಾಮಸ್ಥರು ಬೇರೆ ಊರು, ಪಟ್ಟಣ ಮತ್ತು ನಗರಗಳಿಗೆ ತೆರಳ ಬೇಕಾದರೆ ಅಕ್ಕಪಕ್ಕದ ಗ್ರಾಮಗಳಲ್ಲಿ ತೆರಳಿ ಬಸ್‌ ಹಿಡಿಯುತ್ತಿದ್ದಾರೆ.

ತಾಲ್ಲೂಕು ಕೇಂದ್ರದಿಂದ ಹತ್ತು ಕಿ.ಮೀ ಅಂತರದಲ್ಲಿರುವ ಕೊಂಡಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರತನಹಳ್ಳಿಯಲ್ಲಿ ಸುಮಾರು 150 ಕುಟುಂಬಗಳಿವೆ. 590 ಮತದಾರರು ಇದ್ದಾರೆ.

ಇಲ್ಲಿ ಬಡ ಮತ್ತು ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸವಿದ್ದು, ಬಸ್‌ಗಾಗಿ ನಡೆದುಕೊಂಡು ಪಕ್ಕದ ಕುಂತೂರಿಗೆ ಹೋಗಬೇಕು. ಮಳೆ,ಗಾಳಿ ಮತ್ತು ಬಿಸಲು ಎನ್ನದೆ 75 ವರ್ಷದಿಂದಲೂ ನಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆ–ಕಾಲೇಜಿಗೆ ಹೋಗಲು ಪರದಾಡುವಂತಾಗಿದೆ.

ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮುಗಿಸಿದ ಗ್ರಾಮದ ಸುಮಾರು 20 ಮಕ್ಕಳು ಎರಡು ಕಿ.ಮೀ ದೂರದ ಚಿಕ್ಕ ಕುಂತೂರು ಗ್ರಾಮದಲ್ಲಿ ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿ ದಿನ ಮಳೆ, ಗಾಳಿ–ಬಿಸಿಲು ಏನೇ ಬರಲಿ ಕಾಲು ನಡುಗೆಯಲ್ಲೇ ಸಾಗಬೇಕು. ಗ್ರಾಮದಲ್ಲಿ ಉಳ್ಳುವರು ದ್ವಿಚಕ್ರ ವಾಹನಗಳಲ್ಲಿ ಓಡಾಡುತ್ತಾರೆ.

ಗ್ರಾಮದಿಂದ ಇಬ್ಬರು ಗ್ರಾ.ಪಂ ಸದಸ್ಯರು ಆಯ್ಕೆಯಾಗಿದ್ದು, ಈ ಬಾರಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿಯೂ ಆಯ್ಕೆ ಆಗಿದ್ದಾರೆ. ಆದರೆ ಗ್ರಾಮಕ್ಕೆ ಸಾರಿಗೆ ಮತ್ತು ಮನುಷ್ಯರ ವಾಸಕ್ಕೆ ಬೇಕಾದ ಯಾವ ಮೂಲ ಸೌಕರ್ಯವು ಇಲ್ಲ.

ಸುಮಾರು 35 ವರ್ಷಗಳಿಂದ ಸೂರು ಇಲ್ಲದೇ ಬಹುತೇಕ ಕುಟುಂಬಗಳು ಗುಡಿಸಲಿನನಲ್ಲೇ ಜೀವನ ಸಾಗಿಸುತ್ತಿವೆ ಎನ್ನುತ್ತಾರೆ ನಾಯಕ ಜನಾಂಗದ ವೆಂಕಟಮ್ಮ. ಕೂಲಿ ನಾಲಿ ಮಾಡಿ ಜೀವನ ಸಾಗಿಸುವ ವೆಂಕಟಮ್ಮ ಕುಟುಂಬಕ್ಕೆ ಇಲ್ಲಿಯವೆರಗೂ ಪಂಚಾಯತಿ ವತಿಯಿಂದ ಸೂರು ಕಲ್ಪಿಸಿಲ್ಲ ಎಂಬುವುದು ಅವರ ಅಳಲು.

ಕುಡಿಯುವ ನೀರಿನ ಸೌಕರ್ಯ, ಚರಂಡಿ ಮತ್ತು ರಸ್ತೆ ಇಲ್ಲದೆ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಚರಂಡಿ ಇದ್ದರು ಇಲ್ಲದಂತಾಗಿದ್ದು, ಗಬ್ಬು ನಾರುತ್ತಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿದೆ. ಸಮರ್ಪಕ ರಸ್ತೆಗಳು ಇಲ್ಲ. ಸ್ವಚ್ಛತೆ ನಿರ್ವಹಣೆ ಮಾಡದೆ ಗ್ರಾಮದಲ್ಲಿ ತಿಪ್ಪೆಗುಂಡಿಗಳದ್ದೇ ಕಾರು ಬಾರು. ಗ್ರಾಮಕ್ಕೆ ಬರುತ್ತಿದ್ದಂತೆ ತಿಪ್ಪೆ ಗುಂಡಿಗಳು ಸ್ವಾಗತ ಮಾಡುತ್ತವೆ. ಇದರಿಂದ ಸಾಂಕ್ರಾಮಿಕ ಕಾಯಿಲೆ ಭೀತಿಯಲ್ಲಿ ಗ್ರಾಮಸ್ಥರು.

ಕೊಂಡಶೆಟ್ಟಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಗ್ರಾಮದ ಸದಸ್ಯೆ ಅರ್ಚನಾ ಅವರು ಗ್ರಾಮಸ್ಥರ ಸಮಸ್ಯೆ ನೀಗಿಸುವರೆ ಎಂಬುವುದನ್ನು ಕಾದು ನೋಡಬೇಕಾಗಿದೆ.

ಚರಂಡಿಗಳಲ್ಲಿ ಸ್ವಚ್ಚತೆ ಕೊರೆತಯಿಂದ ಗಬ್ಬು ನಾರುತ್ತಿರುವುದು
ಚರಂಡಿಗಳಲ್ಲಿ ಸ್ವಚ್ಚತೆ ಕೊರೆತಯಿಂದ ಗಬ್ಬು ನಾರುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT