ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಕುಟುಂಬಕ್ಕೆ ಸಜೀವ ದಹನದ ಬೆದರಿಕೆ: ಗ್ರಾಮದಿಂದ ಬಹಿಷ್ಕಾರ

ಉಟ್ಟ ಬಟ್ಟೆಯಲ್ಲಿ ಊರು ತೊರೆದ ದಂಪತಿ
Last Updated 17 ಸೆಪ್ಟೆಂಬರ್ 2020, 2:52 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಬಸವನಪಲ್ಲಿ ಗ್ರಾಮದಲ್ಲಿ ಅಸ್ಪೃಶ್ಯತೆಯ ಬೇರು ಜೀವಂತವಾಗಿದ್ದು, ಗ್ರಾಮದ ಒಕ್ಕಲಿಗ ಸಮುದಾಯದವರು ಪರಿಶಿಷ್ಟ ಜಾತಿಯ ಕುಟುಂಬವೊಂದರ ಮೇಲೆ ದೌರ್ಜನ್ಯ ನಡೆಸಿ ಊರಿನಿಂದ ಬಹಿಷ್ಕಾರ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗ್ರಾಮದ ಒಕ್ಕಲಿಗ ಸಮುದಾಯದವರು ಪರಿಶಿಷ್ಟ ಜಾತಿಯ ನರಸಿಂಹಯ್ಯ ಮತ್ತು ಅವರ ಪತ್ನಿ ಲಕ್ಷ್ಮಿ ಅವರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ನರಸಿಂಹಯ್ಯ ಕುಟುಂಬವು ಜೀವ ಭಯದಲ್ಲಿ ಹುಟ್ಟೂರು ತೊರೆದು 5 ತಿಂಗಳಿಂದ ಊರೂರು ಅಲೆಯುತ್ತಿದೆ.

ರೈತರಾದ ನರಸಿಂಹಯ್ಯ ಕೃಷಿಯ ಜತೆಗೆ ಕಾಡುಗಳಲ್ಲಿ ಸಿಗುವ ಜೇನು ಕಿತ್ತು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಒಕ್ಕಲಿಗ ಸಮುದಾಯದವರು ದಂಪತಿಯ ಜಮೀನಿನಲ್ಲಿದ್ದ ಹುಣಸೆ, ಮಾವು, ರಕ್ತಚಂದನ ಮರಗಳಿಗೆ ಹಾಗೂ ಬೆಳೆಗೆ ಬೆಂಕಿ ಹಚ್ಚಿದ್ದಾರೆ.

ಈ ದೌರ್ಜನ್ಯ ಪ್ರಶ್ನಿಸಿದ ಕಾರಣಕ್ಕೆ ದಂಪತಿ ಮೇಲೆ ಹಲ್ಲೆ ನಡೆಸಿ ಜೀವಂತ ಸುಡುವುದಾಗಿ ಬೆದರಿಕೆ ಹಾಕಿದ್ದಾರೆ. ಘಟನೆ ಸಂಬಂಧ ದಲಿತರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ, ಹಲ್ಲೆ, ಆಸ್ತಿ ನಷ್ಟ ಹಾಗೂ ಜಾತಿನಿಂದನೆ ಆರೋಪದಡಿ ರಾಜಾರೆಡ್ಡಿ, ಸುರೇಂದ್ರರೆಡ್ಡಿ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿರುವ ರಾಯಲ್ಪಾಡು ಠಾಣೆ ಪೊಲೀಸರು ಈವರೆಗೂ ಆರೋಪಿಗಳನ್ನು ಬಂಧಿಸಿಲ್ಲ.

ಬೆಂಕಿ ಹಚ್ಚಿಕೊಳ್ಳುತ್ತೇವೆ: ನರಸಿಂಹಯ್ಯ ಅವರ ಮೊಬೈಲ್‌ಗೆ ಪದೇಪದೇ ಕರೆ ಮಾಡುತ್ತಿರುವ ಆರೋಪಿಗಳು ಊರಿಗೆ ಕಾಲಿಟ್ಟರೆ ಜೀವಂತ ಸುಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಗೊತ್ತಾಗಿದೆ. ಉಟ್ಟ ಬಟ್ಟೆಯಲ್ಲಿ ರಾತ್ರೋರಾತ್ರಿ ಮನೆ ಬಿಟ್ಟು ಬಂದಿರುವ ದಂಪತಿಯು ಹಣವಿಲ್ಲದೆ ತುತ್ತು ಅನ್ನಕ್ಕೂ ಪರಿತಪಿಸುತ್ತಿದ್ದಾರೆ.

ಊರಿಗೂ ಹಿಂದಿರುಗಲಾಗದೆ ಪೊಲೀಸ್‌ ರಕ್ಷಣೆಯೂ ಇಲ್ಲದೆ ಅತಂತ್ರರಾಗಿರುವ ದಂಪತಿಯು ತಮಗೆ ರಕ್ಷಣೆ ಕೊಡದಿದ್ದರೆ ಸಾರ್ವಜನಿಕವಾಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಜಿಲ್ಲಾ ಮೇಲ್ವಿಚಾರಣಾ ಮತ್ತು ಬಲವರ್ಧನಾ ಸಮಿತಿ ಅಧ್ಯಕ್ಷರೂ ಆದ ಉಪ ವಿಭಾಗಾಧಿಕಾರಿ ಬಳಿ ಅಳಲು ತೋಡಿಕೊಂಡಿದ್ದಾರೆ.

ತುತ್ತಿನ ಚೀಲ ತುಂಬಿಸಲು ಅಲೆಮಾರಿಗಳಂತೆ ಊರೂರು ಅಲೆಯುತ್ತಿರುವ ದಂಪತಿಯು ಆರೋಪಿಗಳ ಬೆದರಿಕೆಗೆ ಹೆದರಿ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದು, ‘ಪ್ರಜಾವಾಣಿ’ಯ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT