ಮಂಗಳವಾರ, ಡಿಸೆಂಬರ್ 1, 2020
26 °C
ರಾಜಕಾಲುವೆ, ಸರ್ಕಾರಿ ಜಮೀನು ಸಂರಕ್ಷಿಸಲು ರೈತ ಸಂಘ ಒತ್ತಾಯ

‘ಒತ್ತುವರಿ ತೆರವಿಗೆ ತಂಡ ರಚಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ತಾಲ್ಲೂಕಿನಲ್ಲಿ ಕಣ್ಮರೆಯಾಗಿರುವ ಕೆರೆ, ರಾಜಕಾಲುವೆ, ಸರ್ಕಾರಿ ಜಮೀನನ್ನು ಪತ್ತೆಹಚ್ಚಿ ಸಂರಕ್ಷಣೆ ಮಾಡಬೇಕು. ಅದಕ್ಕಾಗಿ ವಿಶೇಷ ತಂಡ ರಚಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರು ಹಂಚಾಳ ಗೇಟ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ನೂರಾರು ಎಕರೆ ಗಾಲ್ಫ್ ಕ್ರೀಡಾಂಗಣದಲ್ಲಿ ಸರ್ಕಾರಿ ಕೆರೆ, ಗುಂಡು ತೋಪು, ರಾಜಕಾಲುವೆಗಳಿವೆ. ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸುವಂತೆ ಅಂದಿನ ಜಿಲ್ಲಾಧಿಕಾರಿ ಡಿ.ಕೆ.ರವಿ ಆದೇಶ ಮಾಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನೆಯ ನೇತೃತ್ವ  ವಹಿಸಿದ್ದ ರೈತ ಸಂಘದ ರಾಜ್ಯ ಘಟಕ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರು ಮೇಯಿಸಲು ಗೋಮಾಳವಿಲ್ಲದೆ ತೊಂದರೆಯಾಗಿದೆ. ಸರ್ಕಾರಿ ಗೋಮಾಳ, ಗುಂಡುತೋಪು, ಕೆರೆ, ರಾಜಕಾಲುವೆಗಳಿಗೆ ನಕಲಿ ದಾಖಲೆ ಸೃಷ್ಟಿಸುವ ದೊಡ್ಡ ಜಾಲವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದೆ. ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ, ರಾಜಕಾರಣಿಗಳ ಬೆಂಬಲಿಗರು ಸರ್ಕಾರಿ ಜಮೀನಿನಲ್ಲಿ ದೊಡ್ಡದೊಡ್ಡ ಮನೆ, ಮದುವೆ ಮಂಟಪಗಳನ್ನು ಕಟ್ಟಿದ್ದಾರೆ. ಅವರ ವಿರುದ್ಧ ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ನೂರಾರು ಎಕರೆ ಜಮೀನಿನಲ್ಲಿ ನಿರ್ಮಿಸಿರುವ ಎಸ್‌ಎನ್‌ಸಿಟಿ ಲೇಔಟ್ ಅಭಿವೃದ್ಧಿಪಡಿಸುವ ಮೊದಲು ಸರ್ವೇ ನಂ.35ರ ಬ್ಲಾಕ್ 2 ನಲ್ಲಿರುವ 36.8 ಗುಂಟೆ ಜಮೀನು ಸಾರ್ವಜನಿಕ ರಸ್ತೆಗೆ ಬರೆದುಕೊಟ್ಟಿದ್ದಾರೆ. ಅಲ್ಲದೆ ಪೊಲೀಸ್ ಠಾಣೆ ನಿರ್ಮಿಸಲು ಮಂಜೂರಾಗಿರುವ ಸ.ನಂ.36ರಲ್ಲಿ 35 ಗುಂಟೆ ಗುಂಡುತೋಪಿನಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.

ತಾಲ್ಲೂಕಿನಲ್ಲಿ ಮಾಯವಾಗಿರುವ ಕೆರೆ, ರಾಜಕಾಲುವೆ, ಸರ್ಕಾರಿ ಜಮೀನು ಹುಡುಕಿಕೊಡಲು ವಿಶೇಷ ತಂಡ ರಚನೆ ಮಾಡಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ದಯಾನಂದ ಅವರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮುಖಂಡರಾದ ನಳಿನಿಗೌಡ, ಉಮಾಗೌಡ, ವಿ.ನಳಿನಿ, ಬಂಗವಾದಿ ನಾಗರಾಜಗೌಡ, ಕೆ.ಶ್ರೀನಿವಾಸಗೌಡ, ಈಕಂಬಳ್ಳಿ ಮಂಜುನಾಥ್, ಚಾಂದ್‌ಪಾಷ, ಸ್ವಸ್ತಿಕ್‌ ಶಿವು, ಮಂಗಸಂದ್ರ ತಿಮ್ಮಣ್ಣ, ಜಮೀರ್‌ ಪಾಷ, ಶೇಕ್ ಬಾಬಜಾನ್, ಕಿರಣ್, ಜಾವೇದ್, ಜಮೀರ್, ಸಲೀಮ್, ಮುಬಾರಕ್, ನವಾಜ್, ಆರೀಪ್, ಆಮೀನ್, ಆಸ್ಸೀಮ್, ಶಮೀರ್, ನಸ್ಸೀಮ್, ಜಾಕೀರ್, ವೆಂಕಟೇಶ್, ಸುಪ್ರಿಂ ಚಲ, ಸುಬ್ರಮಣಿ, ಲೋಕೇಶ್ ವಕ್ಕಲೇರಿ ಹನುಮಯ್ಯ ನವೀನ್, ಮಹೇಶ್, ಜಗದೀಶ್, ವೇಣು, ವಿನೋದ್, ಅಂಬರೀಶ್, ಸುನಿಲ್, ಅಶೋಕ್, ಭರತ್, ಸುಬ್ಬು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.