ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತಳಿ ರೇಷ್ಮೆ ಬೆಳೆ ಹೆಚ್ಚು ಲಾಭದಾಯಕ

ಗ್ರಾಮ ಮಟ್ಟದ ರೈತರ ತರಬೇತಿ ಕಾರ್ಯಕ್ರಮ
Last Updated 18 ಫೆಬ್ರುವರಿ 2021, 4:51 IST
ಅಕ್ಷರ ಗಾತ್ರ

ಬಂಗಾರಪೇಟೆ: ‘ದ್ವಿತಳಿ ರೇಷ್ಮೆ ಹುಳು ಸಾಕಣೆಗೆ ರೈತರು ಒಲವು ತೋರಬೇಕು. ಗೂಡಿನ ಧಾರಣೆ ಸಹ ಹೆಚ್ಚಾಗುತ್ತಿದ್ದು, ಗುಣಮಟ್ಟದ ಜತೆಗೆ ಉತ್ತಮ ಲಾಭ ಗಳಿಸಬಹುದು’ ಎಂದು ಜಿಲ್ಲಾ ರೇಷ್ಮೆ ಉಪ ನಿರ್ದೇಶಕ ಆಂಜನೇಯಗೌಡ ಹೇಳಿದರು.

ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಕನಮನಹಳ್ಳಿ ಗ್ರಾಮದಲ್ಲಿ ರೇಷ್ಮೆ ಇಲಾಖೆ ಹಾಗೂ ಕೇಂದ್ರ ರೇಷ್ಮೆ ಮಂಡಳಿ ಸಹಯೋಗದಲ್ಲಿ ಏರ್ಪಡಿಸಿದ್ದ ಗ್ರಾಮ ಮಟ್ಟದ ರೈತರ ತರಬೇತಿ ಕಾರ್ಯಕ್ರಮದಲ್ಲಿ
ಮಾತನಾಡಿದರು.

ತರಕಾರಿಗೆ ಹೋಲಿಕೆ ಮಾಡಿದಲ್ಲಿ ರೇಷ್ಮೆಯಲ್ಲಿ ಏರಿಳಿತಗಳು ಕಡಿಮೆ. ಈಚೆಗೆ ಅಭಿವೃದ್ಧಿ ಪಡಿಸಿರುವ ದ್ವಿತಳಿಗೆ ತಾಂತ್ರಿಕತೆ ಅಳವಡಿಸಿ ಇಳುವರಿ ಪಡೆಯಬಹುದು ಎಂದರು.

ದ್ವಿತಳಿ ಸಾಕಣೆಗೆ ಅವಶ್ಯವಿರುವ ಸೋಂಕು ನಿವಾರಕಗಳನ್ನು ಸರಬರಾಜು ಮಾಡಲಾಗುತ್ತದೆ. ರಿಯಾಯಿತಿ ದರದಲ್ಲಿ ಗುಣಮಟ್ಟದ ಚಾಕಿ ಸಿಗಲಿದೆ. ಆರಂಭದಲ್ಲಿ ಸಾಕಣೆ ವಿಧಾನಗಳ ಕುರಿತು ಅಧಿಕಾರಿಗಳು ಮಾರ್ಗದರ್ಶನ ನೀಡಲಿದ್ದಾರೆ. ಅಲ್ಲದೆ ದ್ವಿತಳಿ ರೇಷ್ಮೆ ಬೆಳೆಗಾರರಿಗೆ ಎಲ್ಲಾ ರೀತಿಯ ಸಹಾಯಧನ ನೀಡಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಬಹು ಮುಖ್ಯವಾಗಿ ಮಣ್ಣಿನ ಆರೋಗ್ಯ ಕಾಪಾಡಬೇಕು. ಪೋಷಕಾಂಶಗಳು ಕೊರೆತೆ ಆಗದಂತೆಫಲವತ್ತತೆ ಕಾಪಾಡಿದಲ್ಲಿ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ಉತ್ಪಾದನೆಯಾಗಲಿದೆ
ಎಂದರು.

ಕೆವಿಕೆ ವಿಜ್ಞಾನಿ ಡಾ.ಶಶಿಧರ್, ಕೇಂದ್ರ ರೇಷ್ಮೆ ಮಂಡಳಿಯ ಕ್ಲಸ್ಟರ್ ವಿಜ್ಞಾನಿ ಡಾ.ನರೇಂದ್ರ ಕುಮಾರ್ ಮಾತನಾಡಿ, ದ್ವಿತಳಿ ರೇಷ್ಮೆ ಹುಳು ಸಾಕಣೆಯಲ್ಲಿ ಕಂಡುಬರುವ ರೋಗಗಳು ಹಾಗೂ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ರೇಷ್ಮೆ ಹುಳು ಸಾಕಣೆಯಲ್ಲಿ ಹೆಚ್ಚಾಗಿ ಗಾಳಿ ಬಿಡಬೇಕು. ಉಷ್ಣಾಂಶ, ಶೈತ್ಯಾಂಶವನ್ನು ನಿರ್ವಹಣೆ ಮಾಡುವುದು ಮುಖ್ಯ. ಸುಣ್ಣ ಹೆಚ್ಚಾಗಿ ಬಳಕೆ ಮಾಡಬೇಕು. ಕಾಲಕಾಲಕ್ಕೆ ಬರುವ ರೋಗಗಳ ಬಗ್ಗೆ ಅಧಿಕಾರಿಗಳು ಮತ್ತು ವಿಜ್ಞಾನಿಗಳಿಂದ ಮಾಹಿತಿ ಪಡೆದು ಮುಂಜಾಗ್ರತೆ ವಹಿಸಿದರೆನಿಯಂತ್ರಣ ಸುಲಭ ಎಂದರು.

ಹಿಪ್ಪುನೇರಳೆ ತೋಟಗಳಿಗೆ ಕಂಡು ಬಂದಿರುವ ನುಸಿರೋಗಕ್ಕೆ ಬೇವಿನ ಎಣ್ಣೆ ಮತ್ತು ಸೋಪಿನ ಎಣ್ಣೆ ಮಿಶ್ರಣ ಅಥವಾ ಗಂಧಕದ ಪುಡಿ ಸಿಂಪಡಣೆ ಮಾಡಬೇಕು. ಪ್ರತಿ ಲೀಟರ್ ನೀರಿನಲ್ಲಿ 3 ಗ್ರಾಂ ಪುಡಿಯನ್ನ ಮಿಶ್ರಣ ಮಾಡಿ ಸಿಂಪಡಿಸಬೇಕು ಎಂದರು.

ರೇಷ್ಮೆ ಸಹಾಯಕ ನಿರ್ದೇಶಕ ಶ್ರೀನಿವಾಸ, ರೇಷ್ಮೆ ವಿಸ್ತರಣಾಧಿಕಾರಿ ಜಯಶ್ರೀನಿವಾಸ, ಬಲಮಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ವಿ.ರಾಮಪ್ಪ,
ಮೂತನೂರು ವೆಂಕಟೇಶ್,ಬಲಮಂದೆ ಪೆದ್ದಣ್ಣ, ಯಶವಂತರಾವ್, ಕಾಶಿನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT