ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: ಬೆಂಕಿಯಿಂದ ಸುಟ್ಟು ಕರಕಲಾದ 120 ಮಾವಿನ ಮರ

Published 11 ಮಾರ್ಚ್ 2024, 13:29 IST
Last Updated 11 ಮಾರ್ಚ್ 2024, 13:29 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಮಲ್ಲೆಕುಪ್ಪ ಗ್ರಾಮದ ರೈತರ ಮಾವಿನ ತೋಪಿಗೆ ಭಾನುವಾರ ಮಧ್ಯಾಹ್ನ ಬೆಂಕಿ ಬಿದ್ದು ಎರಡು ಎಕರೆಯಲ್ಲಿದ್ದ 120 ಮಾವಿನ ಮರಗಳು ಸುಟ್ಟು ನಾಶವಾಗಿವೆ.

ಮಲ್ಲೆಕುಪ್ಪ ಗ್ರಾಮದ ಎಂ.ಎಲ್.ಮಧುಬಾಬು ಅವರಿಗೆ ದೊಡ್ಡ ಗೊಲ್ಲಹಳ್ಳಿ ಬಳಿ ಮೂರು ಎಕರೆ ಜಮೀನಿದ್ದು ಅದರಲ್ಲಿ ಮಾವಿನ ಗಿಡಗಳನ್ನು ನಾಟಿ ಮಾಡಲಾಗಿತ್ತು. ಆದರೆ, ಭಾನುವಾರ ಯಾರೋ ಕಿಡಿಗೇಡಿಗಳು ಗ್ರಾಮದ ಹೊರವಲಯದ ಮರದ ಕೆಳಗಡೆ ಬೀಡಿ ಸೇದಿ ಬೆಂಕಿಯನ್ನು ನಂದಿಸದೆ ಬಿಸಾಡಿದ್ದಾರೆ. ಅದು ಸುಮಾರು ಐದರಿಂದ ಆರು ಎಕರೆ ಬಯಲಿನಲ್ಲಿದ್ದ ಹುಲ್ಲು ಹಾಗೂ ಕಸಕಡ್ಡಿ ಸುಟ್ಟು ಬೆಂಕಿ ವ್ಯಾಪಿಸುತ್ತಾ ಹೋಗಿದ್ದು, ಮಧುಬಾಬು ಅವರ ಮಾವಿನ ತೋಪಿಗೆ ತಗುಲಿ ತೋಪಿನಲ್ಲಿದ್ದ 120 ಮರಗಳು ಸುಟ್ಟು ಕರಕಲಾಗಿವೆ.

ಬೆಂಕಿಯ ಜ್ವಾಲೆ ವ್ಯಾಪಿಸುತ್ತಿದ್ದಂತೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರೂ, ಸಂಪೂರ್ಣವಾಗಿ ನಂದಿಸಲು ಆಗಲಿಲ್ಲ ಎಂದು ಸ್ಥಳೀಯರು ತಿಳಿಸಿದರು.

ಮಾವಿನ ತೋಪು ನಿರ್ವಹಣೆಗಾಗಿ ₹4 ಲಕ್ಷ ಸಾಲ ಮಾಡಿದ್ದು, ಅದನ್ನು ಯಾವ ರೀತಿ ಮರುಪಾವತಿ ಮಾಡುವುದು ಎಂಬುದು ರೈತ ಎಂ.ಎಲ್‌.ಮಧುಬಾಬು ಅವರ ಅಳಲಾಗಿದೆ.

ಈ ಬಾರಿ ಮಾವಿಗೆ ಒಳ್ಳೆ ಬೆಲೆ ಸಿಕ್ಕಿದ್ದರೆ ಸುಮಾರು ₹9 ರಿಂದ ₹10 ಲಕ್ಷ ಲಾಭ ಬರುವ ನಿರೀಕ್ಷೆ ಇತ್ತು. ಆದರೆ, ಲಾಭವೂ ಇಲ್ಲದೆ ಸಾಲದ ಹೊರೆಯಿಂದ ಕಂಗೆಡುವಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನೂ ಬೇಸಿಗೆಯಲ್ಲಿ ಬೀಡಿ ಸಿಗರೇಟು ಸೇದಿ ಅಲ್ಲಲ್ಲಿ ಬೆಂಕಿ ನಂದಿಸದೆ ಹಾಕುತ್ತಿರುವುದರಿಂದ ಈಗಾಗಲೇ ಹಳೆಕುಪ್ಪ, ಗುಡಿಪಲ್ಲಿ, ತಾಯಲೂರು ರಸ್ತೆ ಪಕ್ಕದಲ್ಲಿನ ಗಿಡಗಂಟೆಗಳು ಸುಟ್ಟು ಭಸ್ಮವಾಗಿದೆ. ಹಾಗಾಗಿ ಅಗ್ನಿಶಾಮಕ ಸಿಬ್ಬಂದಿಗೆ ಮತ್ತಷ್ಟು ವಾಹನಗಳನ್ನು ಇಲಾಖೆ ಒದಗಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT