ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಮತ್ತೆ ಕೋಲಾರ ಜಿಲ್ಲೆಯ ಕಾಲ್ಚಳಕ!

ಅಂತರ ಜಿಲ್ಲಾ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್‌ ಅಪ್‌; ಮೂಡಿದ ಭರವಸೆ
Last Updated 5 ಜುಲೈ 2022, 4:22 IST
ಅಕ್ಷರ ಗಾತ್ರ

ಕೋಲಾರ: ಫುಟ್‌ಬಾಲ್‌ ಆಟದಲ್ಲಿ ಒಂದು ಕಾಲದಲ್ಲಿ ಮಿಂಚು ಹರಿಸಿದ್ದ ಜಿಲ್ಲೆಯು ಈಗ ಮತ್ತೆ ಕಾಲ್ಚಳಕ ತೋರುತ್ತಿದೆ.

ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ) ಆಯೋಜಿಸಿದ್ದ ಅಂತರ ಜಿಲ್ಲಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕೋಲಾರ ತಂಡ ರನ್ನರ್‌ ಅಪ್‌ ಸ್ಥಾನ ಪಡೆದುಕೊಂಡಿದೆ.

ಕೋಚ್‌ ವಿಮಲ್‌ ಮಾರ್ಗದರ್ಶನದ ತಂಡ ಫೈನಲ್‌ನಲ್ಲಿ 0–2 ಗೋಲುಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಎದುರು ಪರಾಭವಗೊಂಡಿದ್ದರೂ ಹೊಸ ಭರವಸೆ ಮೂಡಿಸಿದೆ.

ವಿಮಲ್‌ ಸೇರಿದಂತೆ ಹಲವು ಆಟಗಾರರು ಈಗಾಗಲೇ ರಾಜ್ಯ ತಂಡ ಪ್ರತಿನಿಧಿಸಿ ಜಿಲ್ಲೆಗೆ ಹೆಸರು ತಂದಿದ್ದರು. ಆ ಬಳಿಕ ಅಂಥ ಸಾಧನೆ ಮೂಡಿಬಂದಿರಲಿಲ್ಲ. ಈಗ ಮಾಜಿ ಆಟಗಾರರೇ ಉತ್ತಮ ತಂಡ ಕಟ್ಟುವ ಉತ್ಸಾಹದೊಂದಿಗೆ ಮುಂದೆ ಬಂದಿದ್ದಾರೆ. ಇದರ ಫಲವೇ ಮೊದಲ ಯಶಸ್ಸು ಲಭಿಸಿದೆ.

‘ಕೆಜಿಎಫ್‌ ಲೀಗ್‌ನಲ್ಲಿ ಎಂಟು ತಂಡಗಳು ಪಾಲ್ಗೊಂಡಿದ್ದವು. ಆ ಪಂದ್ಯಗಳನ್ನು ವೀಕ್ಷಿಸಿ 25 ಆಟಗಾರರ ಪಟ್ಟಿ ಮಾಡಿಕೊಂಡೆವು. ಬಳಿಕ ಟ್ರಯಲ್ಸ್‌ ಮೂಲಕ ಟೂರ್ನಿಗೆ 18 ಆಟಗಾರರನ್ನು ಆಯ್ಕೆ ಮಾಡಿದೆವು’ ಎಂದು ಕೋಚ್‌ ವಿಮಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಟೂರ್ನಿಯಲ್ಲಿ 28 ಜಿಲ್ಲೆಗಳು ಪಾಲ್ಗೊಂಡಿದ್ದವು. ತುಮಕೂರಿನಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಕೋಲಾರ ತಂಡ ವಿಜಯಶಾಲಿಯಾಗಿ ಲೀಗ್‌ ಕಮ್‌ ನಾಕ್‌ಔಟ್‌ ಹಂತ ಪ್ರವೇಶಿಸಿತು. ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ 2–0 ಗೋಲುಗಳಿಂದ ಹಾಸನ ವಿರುದ್ಧ ಗೆಲುವು ಲಭಿಸಿತು. ಕಲಬುರಗಿ ವಿರುದ್ಧ 2–2 ಗೋಲುಗಳಿಂದ ಡ್ರಾ ಸಾಧಿಸಿ ಅಂತಿಮಘಟ್ಟ ತಲುಪಿದರು. ಆದರೆ, ಫೈನಲ್‌ನಲ್ಲಿ 0–2ರಲ್ಲಿ ದಕ್ಷಿಣ ಕನ್ನಡ ಎದುರು ಪರಾಭವಗೊಂಡರು.

‘ನಾವೇ ಹಣ ಹಾಕಿ, ನಾವೇ ಸಮವಸ್ತ್ರ ಹಾಗೂ ಪರಿಕರ ಕೊಡಿಸಿ ಆಡಿಸುತ್ತಿದ್ದೇವೆ. ಮಕ್ಕಳು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕ್ರೀಡೆಗೆ ಕರೆತಂದರೆ ಶಿಸ್ತು ಮೂಡಲಿದೆ ಎಂಬುದು ನಮ್ಮ ಉದ್ದೇಶ’ ಎಂದರು.

‘ಕೆಜಿಎಫ್‌ನಲ್ಲಿ ಈಚೆಗೆ ತರಬೇತಿ ಶಿಬಿರ ನಡೆಸಿದೆವು. ವಿವಿಧ ವಯೋಮಿತಿಯ 250 ಮಕ್ಕಳು ಪಾಲ್ಗೊಂಡಿದ್ದರು. ರಾಜ್ಯ ಒಲಿಂಪಿಕ್‌ ಕ್ರೀಡಾಕೂಟದಲ್ಲಿ 14 ವರ್ಷದೊಳಗಿನವರ ವಿಭಾಗದಲ್ಲಿ ಜಿಲ್ಲೆ ತಂಡವು ಉತ್ತಮ ಪ್ರದರ್ಶನ ತೋರಿತು’ ಎಂದು ಹೇಳಿದರು.

‘ಎಲ್ಲರೂ ಪ್ರತಿಭಾವಂತ ಆಟಗಾರರು. ವೃತ್ತಿಪರ ತರಬೇತಿ ನೀಡಿದರೆ ಉತ್ತಮ ಆಟಗಾರರಾಗಿ ಹೊರಹೊಮ್ಮುತ್ತಾರೆ. ಅವರಿಗೆ ಪ್ರಾಯೋಜಕತ್ವ ಬೇಕಿದೆ. ಪೋಷಕಾಂಶ, ಪರಿಕರ ಕೊಟ್ಟರೆ ಇನ್ನೂ ಚೆನ್ನಾಗಿ ಆಡಬಲ್ಲರು. ಈ ಆಟಗಾರರ ಪೋಷಕರು ದಿನಗೂಲಿಕಾರರು. ಹೀಗಾಗಿ, ಅವರಿಗೆ ಖರ್ಚು ಭರಿಸುವ ಶಕ್ತಿ ಇಲ್ಲ’ ಎಂದರು

ಅಂತರ ಜಿಲ್ಲಾ ಫುಟ್‌ಬಾಲ್‌ ಟೂರ್ನಿಯಲ್ಲಿ ಜಿಲ್ಲೆಯ ಸುನಿಲ್‌ (ಗೋಲ್‌ ಕೀಪರ್‌), ದೀಪು, ಪವನ್‌, ರಂಜಿತ್‌, ದಿನೇಶ್‌ (ಡಿಫೆನ್ಸ್‌), ಸುನಿಲ್‌ ಕುಮಾರ್‌ (ನಾಯಕ), ಕಾರ್ತಿಗೇಯನ್‌, ನಿತಿಶ್‌, ಮಣಿಕಂಠನ್‌ (ಮಿಡ್‌ ಫೀಲ್ಡರ್‌), ಲೆನಾಡ್‌, ಅಭಿಷೇಕ್‌ (ಸ್ಟ್ರೈಕರ್ಸ್‌) ಗಮನ ಸೆಳೆದರು. ಇವರಲ್ಲದೇ, ರಾಜೇಶ್‌, ಮೋಹನ್‌, ಸುನಿಲ್‌, ಅಜಯ್‌, ಕನ್ವೀಶರನ್‌, ಮೋಹನ್‌, ಗೌತಮ್‌ ತಂಡದಲ್ಲಿದ್ದರು. ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ ಅಧ್ಯಕ್ಷ ಶೇಗರನ್‌ ತಂಡದ ವ್ಯವಸ್ಥಾಪಕರಾಗಿದ್ದರು.

‘ಮುಂದಿನ ದಿನಗಳಲ್ಲಿ ಬೇರೆ ಬೇರೆ ಟೂರ್ನಿಗೂ ಕರೆದುಕೊಂಡು ಹೋಗುತ್ತೇವೆ. ಈಗಾಗಲೇ ಕೆಲ ಆಟಗಾರರು ಬೆಂಗಳೂರಿನಲ್ಲಿ ಸೂಪರ್‌ ಡಿವಿಷನ್‌, ಎ, ಬಿ ಡಿವಿಷನ್‌ನಲ್ಲಿ ಆಡುತ್ತಿದ್ದಾರೆ. ಜಿಲ್ಲೆಯ ಮೂವರು ಆಟಗಾರರು ರಾಜ್ಯ ತಂಡದ ಕ್ಯಾಂಪ್‌ಗೆ ಆಯ್ಕೆಯಾಗುವ ನಿರೀಕ್ಷೆ ಇದೆ’ ಎಂದು ವಿಮಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT