ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಗಾಂಧೀಜಿ ತತ್ವಾದರ್ಶ ಸಮಾಜಕ್ಕೆ ದಾರಿದೀಪ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಅಭಿಪ್ರಾಯ
Last Updated 2 ಅಕ್ಟೋಬರ್ 2021, 13:54 IST
ಅಕ್ಷರ ಗಾತ್ರ

ಕೋಲಾರ: ‘ರಕ್ತಪಾತವಿಲ್ಲದೆ ಅಹಿಂಸೆಯ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿಯ ತತ್ವಾದರ್ಶ ಸಮ ಸಮಾಜ ನಿರ್ಮಾಣಕ್ಕೆ ದಾರಿದೀಪ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್.ನಾಗರಾಜ ಅಭಿಪ್ರಾಯಪಟ್ಟರು.

75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯತೆ ಜಾಗೃತಿ ಮತ್ತು ಅಪರಿಮಿತ ಕಾನೂನು ಅರಿವು ನೆರವು, ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಪರಕೀಯರ ಆಡಳಿತಕ್ಕೆ ಒಳಪಟ್ಟಿದ್ದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಗಾಂಧೀಜಿ ಪ್ರಮುಖ ಪಾತ್ರ ವಹಿಸಿದರು. ಅವರ ತತ್ವಾದರ್ಶ ಇಂದಿಗೂ ಪ್ರಸ್ತುತ. ಸರಳ ವ್ಯಕ್ತಿತ್ವದ ಗಾಂಧೀಜಿಯ ನೆನಪು ಜನಮಾನಸದಲ್ಲಿ ಶಾಶ್ವತವಾಗಿದೆ. ದೇಶದ ಅಸ್ತಿತ್ವ ಇರುವವರೆಗೂ ಅವರ ಹೆಸರು ಶಾಶ್ವತವಾಗಿರುತ್ತದೆ. ಅವರ ತತ್ವಾದರ್ಶ, ನಡೆ, ನುಡಿ ಮತ್ತು ಜೀವನ ಶೈಲಿಯನ್ನು ಎಲ್ಲರೂ ಅನುಸರಿಸಬೇಕು’ ಎಂದು ಸಲಹೆ ನೀಡಿದರು.

‘ಗಾಂಧೀಜಿ ಇಡೀ ಜಗತ್ತೇ ಗುರುತಿಸಿರುವ ಮಹಾನ್ ನಾಯಕ. ಯಾವುದೇ ಕೆಲಸಕ್ಕೆ ತಾಳ್ಮೆ, ಶ್ರಮ ಅಗತ್ಯ. ಬೇಗ ಪ್ರತಿಫಲ ಸಿಗಬೇಕೆಂದು ಹಿಂಸಾತ್ಮಕ ಮಾರ್ಗ ಅಥವಾ ಅಡ್ಡದಾರಿ ಹಿಡಿಯುವುದು ಸರಿಯಲ್ಲ. ಗಾಂಧೀಜಿ ಸಿದ್ಧಾಂತದಂತೆ ಅಹಿಂಸೆ ಮಾರ್ಗದಲ್ಲಿ ಸಾಗಿದರೆ ಖಂಡಿತ ಯಶಸ್ಸು ಸಿಗುತ್ತದೆ. ನಾಗರಿಕ ಪ್ರಬುದ್ಧ ಪ್ರಜಾಪ್ರಭುತ್ವ ಸಮಾಜ ನಿರ್ಮಿಸಿದರೆ ದೇಶ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ’ ಎಂದರು.

‘ಗಾಂಧೀಜಿ ತತ್ವಗಳಾದ ಸತ್ಯ, ಅಹಿಂಸೆ, ಪ್ರಾಮಾಣಿಕತೆ, ಸ್ವಚ್ಛತೆ, ರಾಮರಾಜ್ಯದ ಕನಸು ನನಸಾಗದೆ ಉಳಿದಿದೆ. ಮಕ್ಕಳನ್ನು ಪ್ರಜ್ಞಾವಂತ ನಾಗರಿಕರಾಗಿ ಮಾಡಿದರೆ ಭ್ರಷ್ಟಾಚಾರರಹಿತ ಸಮಾಜ, ಭ್ರಷ್ಟಾಚಾರರಹಿತ ಆಡಳಿತ ವ್ಯವಸ್ಥೆ, ಸ್ವಚ್ಛ ಭಾರತ ನಿರ್ಮಾಣವಾಗಿ ಗಾಂಧೀಜಿ ಕನಸು ನನಸಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ಸಂವಿಧಾನ ಕೈಗನ್ನಡಿ: ‘ದೇಶದ ಪ್ರತಿ ಪ್ರಜೆಯೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಸಂವಿಧಾನ ಪ್ರಜಾಪ್ರಭುತ್ವ ಆಡಳಿತದ ಕೈಗನ್ನಡಿ. ಸಂವಿಧಾನದಡಿ ಎಲ್ಲಾ ಕಾನೂನು ರಚನೆಯಾಗುತ್ತವೆ. ಸಂವಿಧಾನದ ಅನುಚ್ಛೇದ 39ಎ ಅಡಿ ಎಲ್ಲಾ ನಾಗರಿಕರಿಗೆ ಉಚಿತ ಕಾನೂನು ಸೇವೆ ನೀಡಲಾಗುತ್ತದೆ ಎಂದು ಘೋಷಿಸಲಾಗಿದೆ’ ಎಂದು ವಿವರಿಸಿದರು.

‘ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಅ.2ರಿಂದ ನ.14ರವರೆಗೆ ಕಾನೂನು ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಕಾನೂನು ಸಾರ್ವಭೌಮತ್ವವಾಗಿರುತ್ತದೆ. ಸರ್ವರಿಗೂ ಸಮಬಾಳು ಎಂದು ಸಂವಿಧಾನದಲ್ಲಿ ಘೋಷಣೆ ಮಾಡಲಾಗಿದೆ. ಸಮಾನತೆ ಹೊಂದಬೇಕಾದರೆ ಪ್ರತಿಯೊಬ್ಬರು ತಮ್ಮ ಹಕ್ಕು ತಿಳಿಯಬೇಕು’ ಎಂದು ಹೇಳಿದರು.

ಕಾನೂನಿನ ಅರಿವು: ‘ಗಾಂಧೀಜಿ ದುರ್ಬಲ ವರ್ಗಗಳ ಏಳಿಗೆಗೆ ಹೋರಾಟ ಮಾಡಿದರು. ನಾಗರಿಕ ಸಮುದಾಯಕ್ಕೆ ಕಾನೂನಿನ ಅರಿವು ಇರಬೇಕು. ಜನರು ತಮ್ಮ ತೊಂದರೆಗಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ನೆರವು ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್, ಉಪ ವಿಭಾಗಾಧಿಕಾರಿ ಅನಂದ್‌ಪ್ರಕಾಶ್ ಮೀನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಬಿ.ಎಂ.ಮುನಿರಾಜಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀಧರ್‌, ಪ್ರಧಾನ ಕಾರ್ಯದರ್ಶಿ ರಘುಪತಿಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT