ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್‌: ಬಾಗಿಲು ಇಲ್ಲದ ಶಾಲಾ ಕೊಠಡಿಗಳು

ಶಾಲೆಯಲ್ಲಿ ಬೆಳಗ್ಗೆ ಮಕ್ಕಳಿಗೆ ಪಾಠ: ರಾತ್ರಿ ಮದ್ಯವ್ಯಸನಿಗಳ ಆಟ
ಕೃಷ್ಣಮೂರ್ತಿ
Published 25 ಜೂನ್ 2024, 6:01 IST
Last Updated 25 ಜೂನ್ 2024, 6:01 IST
ಅಕ್ಷರ ಗಾತ್ರ

ಕೆಜಿಎಫ್‌: ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ರಾಬರ್ಟಸನ್‌ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದುರಸ್ತಿಗೊಳಿಸದೆ ಬ್ರಿಟಿಷರ ಪಳೆಯುಳಿಕೆಯಂತೆ ಕಾಣುತ್ತಿದ್ದು, ಶಾಲೆಯ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು ಎದ್ದು ಕಾಣುತ್ತಿದೆ.

ನಲಿಕಲಿಗೆಂದು ಮೀಸಲಾಗಿಟ್ಟಿರುವ ಶಾಲೆಯ ಕೊಠಡಿ ಒಂದು ಬಾಗಿಲು ಮುರಿದು ಹೋಗಿದ್ದು, ಅದನ್ನು ಸರಿಪಡಿಸುವ ಗೋಜಿಗೆ ಶಿಕ್ಷಣ ಇಲಾಖೆ ಹೋಗಿಲ್ಲ. ರಾತ್ರಿ ವೇಳೆ ಇದೇ ಕೊಠಡಿ ಕಿಡಿಗೇಡಿಗಳ ಮದ್ಯಸೇವನೆಯ ತಾಣವಾಗಿ ಮಾರ್ಪಟ್ಟಿದೆ. ಪ್ರತಿದಿನ ಮುಂಜಾನೆ ಶಾಲಾ ಸಿಬ್ಬಂದಿಗೆ ಬಿದ್ದಿರುವ ಮದ್ಯದ ಬಾಟಲಿ, ಪಾನ್‌, ಗುಟ್ಕಾ ಪಾಕೆಟ್‌ ಸ್ವಚ್ಛ ಮಾಡುವುದೇ ಕೆಲಸವಾಗಿದೆ. ಈಚೆಗೆ ಕಳ್ಳರು ಮತ್ತೊಂದು ಕೊಠಡಿ ಬಾಗಿಲು ಮುರಿದು ಒಳಗೆ ಇದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದರು.

ನಗರಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರಾದಾಗ, ಇದೇ ಜಾಗದಲ್ಲಿ ಕಾಲೇಜು ಪ್ರಾರಂಭವಾಯಿತು. ದಿನೇ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ನಗರದ ಹೊರವಲಯದ ರಾಜೀವ್ ಗಾಂಧಿ ಬಡಾವಣೆಯಲ್ಲಿ ಸ್ವಂತ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಗೊಂಡಿತು. ಆಗ ಕಾಲೇಜು ಆಡಳಿತ ವರ್ಗ ಮಾಡಿಕೊಂಡ ದುರಸ್ತಿಯಿಂದಾಗಿ ಕಟ್ಟಡ ಸ್ವಲ್ಪ ಮಟ್ಟಿಗೆ ಕೆಲ ಕಡೆ ದುರಸ್ತಿಗೊಂಡಿದೆ. ಆದರೆ, ಕಾರಿಡಾರ್ ಸೇರಿದಂತೆ ಕೊಠಡಿಗಳು ತೀರಾ ಅಧ್ವಾನವಾಗಿದೆ.

ಶಾಲೆಯ ಆವರಣದಲ್ಲಿ ಸುಮಾರು ವರ್ಷಗಳ ಕಾಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಕಚೇರಿ ಆವರಣದಲ್ಲಿಯೇ ಇದ್ದ ಶಾಲೆಯನ್ನು ದುರಸ್ತಿ ಮಾಡಬೇಕು ಎನ್ನುವ ಯೋಚನೆ ಅಧಿಕಾರಿಗಳಿಗೆ ಬಂದಿರಲಿಲ್ಲ ಎಂದು ಸುತ್ತಮುತ್ತಲಿನ ನಿವಾಸಿಗಳು ಹೇಳುತ್ತಾರೆ.

ಪ್ರಸ್ತುತ ಒಂದರಿಂದ ಏಳನೇ ತರಗತಿವರೆವಿಗೂ ಶಾಲೆಯಲ್ಲಿ 26 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅವರಿಗೆ ಮೂವರು ಶಿಕ್ಷಕರು ಇದ್ದಾರೆ. ಶಾಲೆಗೆ ಬರುತ್ತಿರುವ ಮಕ್ಕಳೆಲ್ಲರೂ ತೀರಾ ಆರ್ಥಿಕವಾಗಿ ಬಡತನದಲ್ಲಿ ಇರುವವರು ಮತ್ತು ಬಹುತೇಕರ ಮಾತೃಭಾಷೆ ತಮಿಳಾಗಿದೆ.

ಶಾಲೆಯ ದುರಸ್ತಿ ಮಾಡಬೇಕಾಗಿದೆ. ಅನುದಾನಕ್ಕೆ ಶಾಸಕರಿಗೆ ಕೋರಿಕೆ ಸಲ್ಲಿಸಲಾಗುವುದು.
ಮುನಿವೆಂಕಟರಾಮಾಚಾರಿ,ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT