ಭಾನುವಾರ, ಆಗಸ್ಟ್ 14, 2022
21 °C
ಮೊದಲ ಹಂತದ ಗ್ರಾ.ಪಂ ಚುನಾವಣೆ: 118 ಸ್ಥಾನಕ್ಕೆ ಅವಿರೋಧ ಆಯ್ಕೆ

ಅಂತಿಮ ಕಣದಲ್ಲಿ 3,555 ಅಭ್ಯರ್ಥಿಗಳು

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಕಾವು ಏರಿದ್ದು, ಮೊದಲ ಹಂತದ ಚುನಾವಣೆ ನಡೆಯಲಿರುವ 3 ತಾಲ್ಲೂಕುಗಳಲ್ಲಿ 3,555 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಕೋಲಾರ, ಮಾಲೂರು ಮತ್ತು ಶ್ರೀನಿವಾಸಪುರ ತಾಲ್ಲೂಕಿನ ವ್ಯಾಪ್ತಿಯ ಗ್ರಾ.ಪಂಗಳಿಗೆ ಡಿ.22ರಂದು ಚುನಾವಣೆ ನಡೆಯಲಿದೆ. ಈ ಮೂರು ತಾಲ್ಲೂಕುಗಳ ವ್ಯಾಪ್ತಿಯ 85 ಗ್ರಾ.ಪಂಗಳಲ್ಲಿ 1,520 ಸದಸ್ಯ ಸ್ಥಾನಗಳಿದ್ದು, ಈ ಪೈಕಿ 118 ಸ್ಥಾನಗಳಿಗೆ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.

1,402 ಸದಸ್ಯ ಸ್ಥಾನಗಳಿಗಾಗಿ 3,555 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ಅನುಸೂಚಿತ ಜಾತಿಯ 1,109, ಅನುಸೂಚಿತ ಪಂಗಡದ 300, ಹಿಂದುಳಿದ ವರ್ಗ (ಅ) 255, ಹಿಂದುಳಿದ ವರ್ಗ (ಬಿ) 55, ಸಾಮಾನ್ಯ 1,836 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕೋಲಾರ ತಾಲ್ಲೂಕಿನಲ್ಲಿ ಒಟ್ಟು 32 ಗ್ರಾ.ಪಂಗಳಿದ್ದು, 569 ಸದಸ್ಯ ಸ್ಥಾನಗಳಿವೆ. 59 ಸದಸ್ಯರು ಅವಿರೋಧ ಆಯ್ಕೆಯಾಗಿದ್ದು, 510 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅನುಸೂಚಿತ ಜಾತಿ 454, ಅನುಸೂಚಿತ ಪಂಗಡ 76, ಹಿಂದುಳಿದ ವರ್ಗ (ಅ) 99, ಹಿಂದುಳಿದ ವರ್ಗ (ಬಿ) 23, ಸಾಮಾನ್ಯ 684 ಅಭ್ಯರ್ಥಿಗಳು ಸೇರಿದಂತೆ ಒಟ್ಟು 1,336 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಮಾಲೂರು ತಾಲ್ಲೂಕಿನಲ್ಲಿ ಒಟ್ಟು 28 ಗ್ರಾ.ಪಂಗಳಿದ್ದು, 505 ಸದಸ್ಯ ಸ್ಥಾನಗಳಿವೆ. ಈ ಪೈಕಿ 43 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 462 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅನುಸೂಚಿತ ಜಾತಿ 368, ಅನುಸೂಚಿತ ಪಂಗಡ 116, ಹಿಂದುಳಿದ ವರ್ಗ (ಅ) 99, ಹಿಂದುಳಿದ ವರ್ಗ (ಬಿ) 14, ಸಾಮಾನ್ಯ 646 ಅಭ್ಯರ್ಥಿಗಳು ಸೇರಿದಂತೆ ಒಟ್ಟು 1,243 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಒಟ್ಟು 25 ಗ್ರಾ.ಪಂಗಳಿದ್ದು, 446 ಸದಸ್ಯ ಸ್ಥಾನಗಳಿವೆ. ಈ ಪೈಕಿ 16 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 430 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅನುಸೂಚಿತ ಜಾತಿ 287, ಅನುಸೂಚಿತ ಪಂಗಡ 108, ಹಿಂದುಳಿದ ವರ್ಗ (ಅ) 57, ಹಿಂದುಳಿದ ವರ್ಗ (ಬಿ) 18, ಸಾಮಾನ್ಯ 506 ಅಭ್ಯರ್ಥಿಗಳು ಸೇರಿದಂತೆ ಒಟ್ಟು 976 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಚಿಹ್ನೆ ಹಂಚಿಕೆ: ಈಗಾಗಲೇ ರಾಜ್ಯ ಚುನಾವಣಾ ಆಯೋಗವು ಗ್ರಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ಅಧಿಕೃತ ಚಿಹ್ನೆಗಳನ್ನು ಪ್ರಕಟಿಸಿದೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಈ ಚಿಹ್ನೆಗಳಲ್ಲಿ ಯಾವುದಾರೂ 3 ಚಿಹ್ನೆಗಳನ್ನು ಅಭ್ಯರ್ಥಿಗಳು ಹೆಸರಿಸಿದ್ದರು. ಇದರಲ್ಲಿ ಹಂಚಿಕೆಯಾಗದೆ ಇರುವ ಒಂದು ಚಿಹ್ನೆಯನ್ನು ಉಮೇದುವಾರಿಕೆ ಹಿಂಪಡೆಯುವ ಗಡುವು ಪೂರ್ಣಗೊಂಡ ಬಳಿಕ ಅಭ್ಯರ್ಥಿಗಳಿಗೆ ಸೋಮವಾರ ಹಂಚಿಕೆ ಮಾಡಲಾಯಿತು. ಬುಧವಾರ ಬ್ಯಾಲೆಟ್‌ ಪ್ರತಿಗಳ ಮುದ್ರಣ ಪ್ರಕ್ರಿಯೆ ನಡೆಯಲಿದೆ.

ನಿಯಂತ್ರಣ ಕೊಠಡಿ: ಗ್ರಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಹಂಚಿಕೆ, ತೆರಿಗೆರಹಿತ ಮದ್ಯ ಮತ್ತು ನಕಲಿ ಮದ್ಯ ಮತ್ತು ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಮಾರಾಟ ಹಾಗೂ ಸಾಗಾಣಿಕೆಗೆ ಸಂಬಂಧಪಟ್ಟ ದೂರುಗಳ ನಿರ್ವಹಣೆಗೆ ಅಬಕಾರಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ.

ಅಬಕಾರಿ ಅಕ್ರಮ ಚಟುವಟಿಕೆ ಕಂಡುಬಂದಲ್ಲಿ ಅಥವಾ ಆ ಬಗ್ಗೆ ಸುಳಿವು ಸಿಕ್ಕಿದರೆ ಸಾರ್ವಜನಿಕರು ಅಬಕಾರಿ ನಿಯಂತ್ರಣ ಕೊಠಡಿ ಸಂಖ್ಯೆ 08152 222115ಕ್ಕೆ ಅಥವಾ 9449597040 ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು