ಬುಧವಾರ, ಜನವರಿ 20, 2021
17 °C
ಜಿಲ್ಲೆಯಲ್ಲಿ 2 ಹಂತದಲ್ಲಿ ಚುನಾವಣೆ: ರಾಜಕೀಯ ಚಟುವಟಿಕೆ ಬಿರುಸು

ಗ್ರಾ.ಪಂ ಚುನಾವಣೆ ಘೋಷಣೆ: ನೀತಿಸಂಹಿತೆ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯ 156 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.

ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಗ್ರಾಮಗಳಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ. ಸೋಮವಾರದಿಂದಲೇ (ನ.30) ಚುನಾವಣಾ ನೀತಿಸಂಹಿತೆ ಜಾರಿಯಾಗಿದ್ದು, ಗ್ರಾಮೀಣ ಭಾಗದಲ್ಲಿ ಚುನಾವಣಾ ಕಾವು ಜೋರಾಗಿದೆ.

ಮೊದಲ ಹಂತದಲ್ಲಿ ಡಿ.22ರಂದು ಕೋಲಾರ, ಮಾಲೂರು ಮತ್ತು ಶ್ರೀನಿವಾಸಪುರ ತಾಲ್ಲೂಕಿನ ವ್ಯಾಪ್ತಿಯ ಗ್ರಾ.ಪಂಗಳಿಗೆ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಡಿ.27ರಂದು ಮುಳಬಾಗಿಲು, ಬಂಗಾರಪೇಟೆ ಹಾಗೂ ಕೆಜಿಎಫ್‌ ತಾಲ್ಲೂಕು ವ್ಯಾಪ್ತಿಯ ಗ್ರಾ.ಪಂಗಳ ಚುನಾವಣೆ ನಡೆಯಲಿದೆ.

ಜಿಲ್ಲಾಧಿಕಾರಿಯು ಮೊದಲ ಹಂತದ ಚುನಾವಣೆಗೆ ಡಿ.7ರಂದು ಮತ್ತು ಎರಡನೇ ಹಂತ ಚುನಾವಣೆಗೆ ಡಿ.11ರಂದು ಅಧಿಸೂಚನೆ ಹೊರಡಿಸಲಿದ್ದಾರೆ. ಜಿಲ್ಲೆಯ 156 ಗ್ರಾ.ಪಂಗಳ 1,431 ಮಹಿಳಾ ಸದಸ್ಯರ ಮತ್ತು 1,358 ಸಾಮಾನ್ಯ ಸದಸ್ಯರ ಸ್ಥಾನ ಸೇರಿದಂತೆ 2,789 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಒಟ್ಟಾರೆ 8,78,788 ಮತದಾರರಿದ್ದಾರೆ. ಈ ಪೈಕಿ 4,41,885 ಮಂದಿ ಪುರುಷ, 4,36,851 ಮಂದಿ ಮಹಿಳಾ ಮತ್ತು 52 ಮಂದಿ ಇತರೆ ಮತದಾರರು ಸೇರಿದ್ದಾರೆ. ಒಟ್ಟು 1,573 ಮತಗಟ್ಟೆ ತೆರೆಯಲಾಗಿದೆ. ಪ್ರತಿ ಮತಗಟ್ಟೆಗೆ 4 ಮಂದಿಯಂತೆ 7 ಸಾವಿರ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ನಾಮಪತ್ರ ಸಲ್ಲಿಕೆ: ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿ.11 ಕಡೆಯ ದಿನವಾಗಿದೆ. ಎರಡನೇ ಹಂತದ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಲು ಡಿ.16 ಕೊನೆಯ ದಿನ. ಡಿ.12ರಂದು ಮೊದಲ ಹಂತದ ಚುನಾವಣೆಯ ಹಾಗೂ ಡಿ.17ರಂದು ಎರಡನೇ ಹಂತದ ಚುನಾವಣೆಯ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

ಮೊದಲ ಮತ್ತು ಎರಡನೇ ಹಂತದ ಚುನಾವಣೆಯ ಉಮೇದುವಾರಿಕೆ ಹಿಂಪಡೆಯಲು ಕ್ರಮವಾಗಿ ಡಿ.14 ಹಾಗೂ ಡಿ.19 ಕೊನೆಯ ದಿನವಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅಗತ್ಯವಿದ್ದರೆ ಮೊದಲನೇ ಹಂತಕ್ಕೆ ಡಿ.24ರಂದು ಮತ್ತು ಎರಡನೇ ಹಂತಕ್ಕೆ ಡಿ.29ರಂದು ನಡೆಸಲಾಗುತ್ತದೆ. ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಡಿ.30ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ತಂಡ ರಚನೆ: ಗ್ರಾ.ಪಂ ವ್ಯಾಪ್ತಿಯಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ತಡೆಗಾಗಿ ಹೋಬಳಿವಾರು ತಂಡ ರಚಿಸಲಾಗಿದೆ ಎಂದು ತಿಳಿಸಿದರು. ಅಲ್ಲದೇ, ತಾಲ್ಲೂಕು ಕಚೇರಿ ಮತ್ತು ಜಿಲ್ಲಾಡಳಿತ ಭವನದಲ್ಲಿ ದೂರು ನಿರ್ವಹಣಾ ಕೇಂದ್ರ ಸ್ಥಾಪಿಸಲಾಗಿದೆ. ಚುನಾವಣಾ ಅಕ್ರಮ ಅಥವಾ ನೀತಿಸಂಹಿತೆ ಉಲ್ಲಂಘನೆ ಸಂಬಂಧ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಯ 08152 243507 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು.

ಅಲ್ಲದೇ, ಕೋಲಾರ ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ 08152 222056, ಮುಳಬಾಗಿಲು ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ 08159 242049, ಬಂಗಾರಪೇಟೆ ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ 08153 255263, ಮಾಲೂರು ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ 08151 232699, ಶ್ರೀನಿವಾಸಪುರ ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ 08157 245060, ಕೆಜಿಎಫ್‌ ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ 08153 271674ಕ್ಕೆ ಕರೆ ಮಾಡಿ ದೂರು ಕೊಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.