ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆದ್ಲಿ ಗ್ರಾ.ಪಂ ಸದಸ್ಯ ಸ್ಥಾನ ಹರಾಜು

5 ಲಕ್ಷಕ್ಕೆ ಖರೀದಿ: ಹರಾಜು ಪ್ರಕ್ರಿಯೆಯ ವಿಡಿಯೋ ವೈರಲ್‌
Last Updated 10 ಡಿಸೆಂಬರ್ 2020, 15:19 IST
ಅಕ್ಷರ ಗಾತ್ರ

ಕೋಲಾರ: ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಹರಾಜು ಮಾಡದಂತೆ ರಾಜ್ಯ ಚುನಾವಣಾ ಆಯೋಗ ಖಡಕ್‌ ಎಚ್ಚರಿಕೆ ನೀಡಿದ್ದರೂ ತಾಲ್ಲೂಕಿನ ಮದ್ದೇರಿ ಗ್ರಾ.ಪಂ ವ್ಯಾಪ್ತಿಯ ಬೆದ್ಲಿ ಹಳ್ಳಿಯ ಒಂದು ಸದಸ್ಯ ಸ್ಥಾನವನ್ನು ₹ 5 ಲಕ್ಷಕ್ಕೆ ಹರಾಜು ಹಾಕಲಾಗಿದೆ.

ಬೆದ್ಲಿ ಗ್ರಾಮದ ಮುಖಂಡರು ದೇವಾಲಯದಲ್ಲಿ ಒಂದೆಡೆ ಸೇರಿ ಸದಸ್ಯ ಸ್ಥಾನದ ಬಹಿರಂಗ ಹರಾಜು ನಡೆಸಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮದ್ದೇರಿ ಗ್ರಾ.ಪಂಗೆ ಮೊದಲ ಹಂತದಲ್ಲಿ ಡಿ.22ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಉಮೇದುವಾರಿಕೆ ಸಲ್ಲಿಸಲು ಶುಕ್ರವಾರ (ಡಿ.11) ಕಡೆಯ ದಿನವಾಗಿದ್ದು, ಇದಕ್ಕೂ ಮೊದಲೇ ಸದಸ್ಯ ಸ್ಥಾನ ಹರಾಜು ಹಾಕಲಾಗಿದೆ.
ಚುನಾವಣೆ ಕಾರಣಕ್ಕೆ ಗ್ರಾಮದಲ್ಲಿ ರಾಜಕೀಯ ಜಿದ್ದಾಜಿದ್ದಿ ಏರ್ಪಟ್ಟರೆ ಗ್ರಾಮಸ್ಥರ ಒಗ್ಗಟ್ಟು ಹಾಳಾಗುತ್ತದೆ ಎಂದು ಭಾವಿಸಿ ಗ್ರಾಮಸ್ಥರು ಒಮ್ಮತದ ನಿರ್ಣಯ ಕೈಗೊಂಡು ಸದಸ್ಯ ಸ್ಥಾನದ ಹರಾಜಿನ ಮೊರೆ ಹೋಗಿದ್ದಾರೆ.

ಗ್ರಾಮದ ಹಿರಿಯರ ಮುಂದಾಳತ್ವದಲ್ಲಿ ಹರಾಜು ನಡೆದಿದ್ದು, ಚೀಟಿ ಕೂಗಿದಂತೆ ₹ 1.20 ಲಕ್ಷದಿಂದ ಆರಂಭವಾಗುವ ಹರಾಜು ಅಂತಿಮವಾಗಿ ₹ 5 ಲಕ್ಷಕ್ಕೆ ಬಂದು ನಿಂತಿದೆ. ಬೆದ್ಲಿಯ ಚೌಡರೆಡ್ಡಿ, ಇರಗಸಂದ್ರ ಗ್ರಾಮದ ಶ್ರೀನಿವಾಸಪ್ಪ ಮತ್ತು ಶ್ರೀರಾಮಪ್ಪ ಸೇರಿದಂತೆ 4 ಮಂದಿ ನಡುವೆ ಹರಾಜಿನಲ್ಲಿ ಪೈಪೋಟಿ ನಡೆದಿದೆ. ಅಂತಿಮವಾಗಿ ಶ್ರೀರಾಮಪ್ಪ ಹರಾಜಿನಲ್ಲಿ ಮೇಲುಗೈ ಸಾಧಿಸಿ ₹ 5 ಲಕ್ಷಕ್ಕೆ ಸದಸ್ಯ ಸ್ಥಾನ ಪಡೆದಿದ್ದಾರೆ.

ಶ್ರೀರಾಮಪ್ಪ ಅವರನ್ನು ಹೊರತುಪಡಿಸಿ ಬೇರೆಯವರು ನಾಮಪತ್ರ ಸಲ್ಲಿಸಬಾರದು. ಒಂದು ವೇಳೆ ಗ್ರಾಮಸ್ಥರ ನಿರ್ಧಾರ ಧಿಕ್ಕರಿಸಿ ಯಾರಾದರೂ ಉಮೇದುವಾರಿಕೆ ಸಲ್ಲಿಸಿ ಚುನಾವಣೆ ನಡೆದರೂ ಶ್ರೀರಾಮಪ್ಪ ಅವರನ್ನೇ ಬೆಂಬಲಿಸಬೇಕು ಎಂದು ಗ್ರಾಮದ ಮುಖಂಡರು ಹರಾಜಿನ ಕೊನೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.

ದೂರು ದಾಖಲಾಗಿಲ್ಲ: ಬೆದ್ಲಿ ಗ್ರಾಮವು ವೇಮಗಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿದೆ. ಸದಸ್ಯ ಸ್ಥಾನದ ಹರಾಜಿನ ಸಂಬಂಧ ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ. ಆದರೆ, ಈವರೆಗೆ ಯಾರೂ ದೂರು ದಾಖಲಿಸಿಲ್ಲ. ಸದಸ್ಯ ಸ್ಥಾನದ ಹರಾಜು ಕೂಗಿದ್ದರೂ ಕೆಲವರು ಇದನ್ನು ವಿರೋಧಿಸಿ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT