ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೇರಿದ ಗ್ರಾಮ ಪಂಚಾಯಿತಿ ಚುನಾವಣಾ ಕಣ

ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ನಡುವೆ ಅಧಿಕಾರಕ್ಕಾಗಿ ಕಸರತ್ತು
Published 3 ಆಗಸ್ಟ್ 2023, 13:33 IST
Last Updated 3 ಆಗಸ್ಟ್ 2023, 13:33 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಆಗಸ್ಟ್‌ 7 ಮತ್ತು 9ರಂದು ಮುಹೂರ್ತ ಫಿಕ್ಸ್‌ ಆಗಿದ್ದು, ಅಕಾಂಕ್ಷಿಗಳು ಅಧಿಕಾರ ಚುಕ್ಕಾಣಿ ಹಿಡಿಯಲು ನಾನಾ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ಮೂವತ್ತು ಗ್ರಾಮ ಪಂಚಾಯಿತಿಗಳಿದ್ದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲನೇ ಹಂತದಲ್ಲಿ ಆಗಸ್ಟ್ 7 ರಂದು 15 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಆಗಸ್ಟ್‌ 9ರಂದು ಇನ್ನುಳಿದ 15 ಪಂಚಾಯಿತಿಗಳಿಗೆ ಮತದಾನ ನಡೆಯಲಿದೆ.  

ಇನ್ನೂ ಚುನಾವಣೆಗೆ ಮೂರು ದಿನಗಳು ಬಾಕಿ ಇದ್ದು, ಎಲ್ಲ ಗ್ರಾಮ ಪಂಚಾಯತಿ ಸದಸ್ಯರು ಮೀಸಲಾತಿ ಆಧರಿಸಿಕೊಂಡು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಅಕಾಂಕ್ಷಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. 

ಎಲ್ಲಾ ಪಂಚಾಯಿತಿ ಕೇಂದ್ರಗಳಲ್ಲಿ ಈಗಾಗಲೇ ಆಕಾಂಕ್ಷಿಗಳು ಯಾರು ಎಂಬುವುದನ್ನು ನಿರ್ಧರಿಸಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳು ಅಧಿಕಾರಕ್ಕಾಗಿ ಹಪ ಹಪಿಸುತ್ತಿದ್ದಾರೆ. ಯಾವ ರೀತಿ ಅಧಿಕಾರ ಪಡೆಯಬಹುದು ಎಂದು ಕೆಲವರಿಗೆ ಹಣದ ನೀಡಿ ಸದಸ್ಯರನ್ನು ಸೆಳೆಯಲು ಪ್ರಯತ್ನಿಸಿದರೆ, ಇನ್ನೂ ಕೆಲವರು ತಮ್ಮ ಪಕ್ಷಗಳ ಸದಸ್ಯರನ್ನು ಒಂದು ಕಡೆ ಸೇರಿಸಿ ಬೇರೆ ಪಕ್ಷದ ಸದಸ್ಯರನ್ನು ಯಾವ ರೀತಿ ಸೆಳೆಯುವುದು ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ.

ತಾಲ್ಲೂಕಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜಿದ್ದಾ ಜಿದ್ದಾ ಜಿದ್ದಿಗೆ ಬಿದ್ದಿದ್ದು, ಎರಡು ಪಕ್ಷಗಳ ನಡುವೆ ಸಮಬಲ ಹೋರಾಟ ನಡೆಯುತ್ತಿದೆ. ಆದರೆ, ಬಿಜೆಪಿ ಒಂದು ಪಂಚಾಯಿತಿಯಲ್ಲೂ ಅಧಿಕಾರ ಹಿಡಿಯುವ ಯಾವುದೇ ಕುರುಹು ಕಾಣಿಸುತ್ತಿಲ್ಲ.

ತಾಲ್ಲೂಕಿನ ನಂಗಲಿ, ಎಚ್.ಗೊಲ್ಲಹಳ್ಳಿ, ಎಮ್ಮೇನತ್ತ, ತಾಯಲೂರು, ಆವಣಿ, ಮುಷ್ಟೂರು, ಗುಮ್ಮಕಲ್ಲು, ಊರುಕುಂಟೆ ಮಿಟ್ಟೂರು, ಉತ್ತನೂರು, ಸೊಣ್ಣವಾಡಿ, ತಿಮ್ಮರಾವುತ್ತನಹಳ್ಳಿ, ಪಿಚ್ಚಗುಂಟ್ಲಹಳ್ಳಿ, ಬಲ್ಲ, ಹೆಬ್ಬಣಿ, ರಾಜೇಂದ್ರ ಹಳ್ಳಿ, ಗುಡಿಪಲ್ಲಿ, ಮುಡಿಯನೂರು, ದೇವರಾಯ ಸಮುದ್ರ, ಅಂಗೊಂಡಹಳ್ಳಿ ಹಾಗೂ ಬಹುತೇಕ ಎಲ್ಲ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಈಗಾಗಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಕಣ ರಂಗೇರಿದೆ.

ಚುನಾವಣೆಗೆ ಮೂರೇ ದಿನ ಬಾಕಿ ಉಳಿದಿದ್ದು, ಎಲ್ಲ ಸದಸ್ಯರಿಗೆ ಭಾರೀ ಬೇಡಿಕೆಗಳಿವೆ. ಕೆಲವು ಸದಸ್ಯರು ಸ್ವ ಪಕ್ಷದ ಅಭ್ಯರ್ಥಿಯನ್ನು ಬಿಟ್ಟು ಪಕ್ಷದಲ್ಲಿಯೇ ಇದ್ದು ಕೊಂಡು ವಿರೋಧ ಪಕ್ಷಗಳಿಗೆ ಮತ ಹಾಕುವ ಕುರಿತು ಪ್ರಮಾಣ, ಮಾತುಕತೆ ನಡೆಸುತ್ತಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಭಾರೀ ರಂಗೇರಿದೆ.

ಇನ್ನು ತಾಲ್ಲೂಕಿನ ಎರಡು ಮೂರು ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸ್ಥಳೀಯ ಮುಖಂಡರ ಮಾತಿನಂತೆ ಹಾಗೂ ಸದಸ್ಯರ ಕೆಲವು ಒಪ್ಪಂದಗಳಂತೆ ಅವಿರೋಧವಾಗಿ ಆಯ್ಕೆಯೂ ನಡೆದಿದ್ದು, ಬಹಿರಂಗಗೊಳಿಸುವುದೊಂದು ಬಾಕಿ ಉಳಿದಿದೆ. ಅವಿರೋಧವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರು ತಮ್ಮ ಪಾಡಿಗೆ ತಮ್ಮ ಕೆಲಸದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT