ಭಾನುವಾರ, ಸೆಪ್ಟೆಂಬರ್ 19, 2021
29 °C
ಅನ್ನದಾತರಿಗೆ ವರುಣಾಘಾತ

ಕೋಲಾರ ಜಿಲ್ಲೆಯಲ್ಲಿ ಮಹಾ ಮಳೆಗೆ ಜನಜೀವನ ತತ್ತರ, ನೆಲಕಚ್ಚಿದ ಬೆಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಲ್ಲಿ ಮಂಗಳವಾರ ಗುಡುಗು, ಬಿರುಗಾಳಿ ಸಹಿತ ಸುರಿದ ಮಹಾ ಮಳೆಗೆ ಜನಜೀವನ ತತ್ತರಿಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ.

ಜಿಲ್ಲಾ ಕೇಂದ್ರ ಸೇರಿದಂತೆ ಕೆಜಿಎಫ್‌, ಬಂಗಾರಪೇಟೆ, ಮಾಲೂರು, ಮುಳಬಾಗಿಲು ತಾಲ್ಲೂಕಿನಲ್ಲಿ ಸಾಕಷ್ಟು ಮನೆಗಳಿಗೆ ಮಳೆ ನೀರು ನುಗ್ಗಿದೆ. ಚರಂಡಿ, ರಾಜಕಾಲುವೆ, ಉದ್ಯಾನ, ಮೈದಾನಗಳಲ್ಲಿ ನೀರು ತುಂಬಿಕೊಂಡಿದೆ. ಮಳೆಯ ತೀವ್ರತೆಗೆ ಹಳೆಯ ಕಟ್ಟಡಗಳು ಶಿಥಿಲಗೊಂಡಿವೆ.

ತಗ್ಗು ಪ್ರದೇಶದಲ್ಲಿ ಅಂಗಡಿಗಳಿಗೆ ನೀರು ನುಗ್ಗಿದೆ. ಸುಮಾರು 100 ವಿದ್ಯುತ್‌ ಕಂಬಗಳು ಧರೆಗುರುಳಿವೆ. 80ಕ್ಕೂ ಹೆಚ್ಚು ಮರಗಳು ವಿದ್ಯುತ್‌ ಕಂಬ ಹಾಗೂ ಮನೆಗಳ ಮೇಲೆ ಉರುಳಿ ಬಿದ್ದಿವೆ. ವಿದ್ಯುತ್‌ ತಂತಿಗಳು ತುಂಡಾಗಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ರಾತ್ರಿಯಿಡೀ ವಿದ್ಯುತ್‌ ಕಡಿತಗೊಂಡಿತು. ಹಲವೆಡೆ ಬುಧವಾರ ರಾತ್ರಿವರೆಗೂ ವಿದ್ಯುತ್‌ ಪೂರೈಕೆಯಾಗಿಲ್ಲ.

ಮಹಾ ಮಳೆಗೆ ರಸ್ತೆಗಳ ಚಿತ್ರಣವೇ ಬದಲಾಗಿದೆ. ರಸ್ತೆ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಗಳು ರಾಡಿಯಾಗಿವೆ. ರೈಲ್ವೆ ಕೆಳ ಸೇತುವೆಗಳು ಹಾಗೂ ತಗ್ಗು ಪ್ರದೇಶದ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ನಿಂತಿದ್ದು, ಅಕ್ಕಪಕ್ಕದ ಬಡಾವಣೆಗಳಿಗೆ ಸಂಪರ್ಕ ಕಡಿತಗೊಂಡಿದೆ.

ಜಿಲ್ಲಾ ಕೇಂದ್ರದ ಶಾಂತಿನಗರ, ರಹಮತ್‌ನಗರದ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ನೀರಿನಿಂದ ಪೀಠೋಪಕರಣಗಳು, ವಿದ್ಯುತ್‌ ಉಪಕರಣಗಳಿಗೆ ಹಾನಿಯಾಗಿದೆ. ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌, ನೀರೆತ್ತುವ ಮೋಟರ್‌ನಂತಹ ವಿದ್ಯುತ್‌ ಉಪಕರಣಗಳು ಸುಟ್ಟು ಹೋಗಿವೆ.

ಮನೆಯಲ್ಲಿದ್ದ ಬಟ್ಟೆ, ಹಾಸಿಗೆ, ಅಕ್ಕಿ, ರಾಗಿ, ಬೇಳೆ ಕಾಳು ಮೂಟೆಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ. ನಿವಾಸಿಗಳಿಗೆ ಇಡೀ ದಿನ ಮಳೆ ನೀರನ್ನು ಮನೆಯಿಂದ ಹೊರ ಹಾಕುವುದೇ ಕೆಲಸವಾಯಿತು. ಮಳೆ ನೀರಿನಿಂದ ಒದ್ದೆಯಾಗಿರುವ ದಿನಸಿ ಪದಾರ್ಥ, ಬಟ್ಟೆ ಮತ್ತು ಹಾಸಿಗೆಗಳನ್ನು ಮನೆಯ ಮುಂದೆ ಒಣಗಲು ಇಟ್ಟಿದ್ದ ದೃಶ್ಯ ಕಂಡುಬಂತು.

ವಿದ್ಯುತ್‌ ಕಂಬಗಳು ಉರುಳಿ ಬಿದ್ದು ಬೈಕ್‌ಗಳು ಜಖಂಗೊಂಡಿವೆ ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ. ಬೆಸ್ಕಾಂ ಸಿಬ್ಬಂದಿ ಹೊಸ ಕಂಬ ಹಾಗೂ ವಿದ್ಯುತ್ ತಂತಿ ಅಳವಡಿಕೆಗೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದರು. ಅರಣ್ಯ ಹಾಗೂ ಅಗ್ನಿಶಾಮಕ ಇಲಾಖೆ ಸಿಬ್ಬಂದಿಯು ರಸ್ತೆಗೆ ಉರುಳಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಸಮಸ್ಯೆಗೆ ಸ್ಪಂದಿಸಲಿಲ್ಲ: ಚರಂಡಿ, ರಾಜಕಾಲುವೆಗಳಲ್ಲಿ ಕಸ ಕಟ್ಟಿಕೊಂಡಿದ್ದರಿಂದ ನೀರಿನ ಹರಿವಿಗೆ ಅಡ್ಡಿಯಾಗಿ ಅಕ್ಕಪಕ್ಕದ ಮನೆಗಳಿಗೆ ನುಗ್ಗಿದೆ. ಈ ಸಂಬಂಧ ಸ್ಥಳೀಯರು ನಗರಸಭೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡಿದರೂ ಸಿಬ್ಬಂದಿ ಸಮಸ್ಯೆಗೆ ಸ್ಪಂದಿಸಲಿಲ್ಲ. ನಗರಸಭೆ ಸಿಬ್ಬಂದಿಯನ್ನು ಕಾದು ಹೈರಾಣಾದ ಸ್ಥಳೀಯರು ಸ್ವತಃ ಚರಂಡಿಗೆ ಇಳಿದು ಸ್ವಚ್ಛಗೊಳಿಸಿದರು. ಮ್ಯಾನ್‌ಹೋಲ್‌ಗಳಲ್ಲಿ ಕಟ್ಟಿಕೊಂಡಿದ್ದ ಕಸ ಹೊರತೆಗೆದರು.

310 ಹೆಕ್ಟೇರ್‌ ಬೆಳೆ ನಾಶ: ಆಕಾಶಕ್ಕೆ ತೂತು ಬಿದ್ದಂತೆ ಎಡಬಿಡದೆ ಸುರಿದ ಮಳೆರಾಯ ರೈತರಿಗೆ ಕಣ್ಣೀರು ತರಿಸಿದ್ದಾನೆ. ಒಂದೇ ರಾತ್ರಿಗೆ 310 ಹೆಕ್ಟೇರ್‌ ಬೆಳೆ ನಾಶವಾಗಿದೆ. ಗಾಳಿಯ ತೀವ್ರತೆಗೆ ಮಾವಿನ ತೋಪುಗಳಲ್ಲಿ ಕಾಯಿಗಳು ರಾಶಿ ರಾಶಿಯಾಗಿ ಉದುರಿವೆ. ಮತ್ತೊಂದಡೆ ಮರದ ಕೊಂಬೆಗಳು ತುಂಡಾಗಿ ಬಿದ್ದಿವೆ. ಮಾವಿನ ತೋಪುಗಳಲ್ಲಿ ಮರದ ಕೆಳಗೆ ಕಾಯಿಗಳು ರಾಶಿಯಾಗಿ ಬಿದ್ದಿರುವ ದೃಶ್ಯ ಸಾಮಾನ್ಯವಾಗಿದೆ. ಪಪ್ಪಾಯ (ಪರಂಗಿ), ಬಾಳೆ ಗಿಡಗಳು ಸಂಪೂರ್ಣ ನೆಲಕಚ್ಚಿವೆ. ಟೊಮೆಟೊ, ಕೋಸು, ಬೀನ್ಸ್‌, ಕಲ್ಲಂಗಡಿ, ದಪ್ಪ ಮೆಣಸಿನಕಾಯಿ ಬೆಳೆ ನಾಶವಾಗಿದೆ.

ಕಣ್ಣೀರಿಟ್ಟ ಅನ್ನದಾತರು: ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ನಾಶವಾಗಿರುವ ಜಮೀನುಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರನ್ನು ಭೇಟಿಯಾದ ಅಧಿಕಾರಿಗಳು ಬೆಳೆಗೆ ಮಾಡಿದ್ದ ಖರ್ಚು ಮತ್ತು ಮಳೆಯಿಂದ ಆಗಿರುವ ನಷ್ಟದ ಬಗ್ಗೆ ಮಾಹಿತಿ ಕಲೆ ಹಾಕಿದರು.

ಬರ ಪರಿಸ್ಥಿತಿ ನಡುವೆಯೂ ರೈತರು ಟ್ಯಾಂಕರ್‌ ಮತ್ತು ಕೃಷಿ ಹೊಂಡದ ನೀರು ಬಳಸಿಕೊಂಡು ಬೆಳೆ ಬೆಳೆದಿದ್ದರು. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ಆಘಾತ ನೀಡಿದೆ. ಬರದಿಂದ ಬೆಳೆ ನಷ್ಟ ಅನುಭವಿಸಿದ್ದ ರೈತರು ಈಗ ಮಳೆಯಿಂದ ಬೆಳೆ ಕಳೆದುಕೊಂಡು ಅಧಿಕಾರಿಗಳ ಎದುರು ಕಣ್ಣೀರಿಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು