ಮಂಗಳವಾರ, ನವೆಂಬರ್ 19, 2019
23 °C
ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಸಂಸದ ಮುನಿಸ್ವಾಮಿ ಕೆಂಡಾಮಂಡಲ

ಬಡವರಿಗೆ ಸಾಲ ಕೊಡಲು ಹಿಂದೇಟು

Published:
Updated:
Prajavani

ಕೋಲಾರ: ‘ಕೇಂದ್ರ ಸರ್ಕಾರದ ಯೋಜನೆಗಳಡಿ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಿರುವ ಬಗ್ಗೆ 10 ದಿನದೊಳಗೆ ಮಾಹಿತಿ ನೀಡಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಶುಕ್ರವಾರ ನಡೆದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಕೇಂದ್ರವು ಜನರ ಅನುಕೂಲಕ್ಕಾಗಿ ಮುದ್ರಾ ಯೋಜನೆ ಜಾರಿಗೊಳಿಸಿದೆ. ಆದರೆ, ಬ್ಯಾಂಕ್ ವ್ಯವಸ್ಥಾಪಕರು ಯೋಜನೆ ಅನುಷ್ಠಾನಕ್ಕೆ ಗಮನ ಕೊಡುತ್ತಿಲ್ಲ. ಬ್ಯಾಂಕ್‌ ಅಧಿಕಾರಿಗಳು ಬಡವರಿಗೆ ಸಾಲ ಕೊಡುವುದಿಲ್ಲ. ಕಳ್ಳರು ಮತ್ತು ದೇಶ ಬಿಟ್ಟು ಹೋಗುವವರಿಗೆ ಎಷ್ಟು ಬೇಕಾದರೂ ಸಾಲ ಕೊಡುತ್ತಾರೆ’ ಎಂದು ಕಿಡಿಕಾರಿದರು.

‘ಮುದ್ರಾ ಯೋಜನೆಯಲ್ಲಿ ಬೇರೆ ಜಿಲ್ಲೆಗಳಲ್ಲಿ 1.50 ಲಕ್ಷ ಮಂದಿಗೆ ಸಾಲ ಕೊಡಲಾಗಿದೆ. ಆದರೆ, ಕೋಲಾರ ಜಿಲ್ಲೆಯಲ್ಲಿ 14 ಸಾವಿರ ಮಂದಿಗೆ ಮಾತ್ರ ಸಾಲ ವಿತರಣೆಯಾಗಿದೆ. ಬಡವರಿಗೆ ಸಾಲ ಕೊಡಲು ನಿಮಗೆ ಮನಸ್ಸಿಲ್ಲವೇ? ಬಡವರು ಉದ್ಧಾರ ಆಗುವುದು ಇಷ್ಟವಿಲ್ಲವೇ?’ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

‘ಶೋಷಿತ ವರ್ಗದವರ ಏಳಿಗೆ ಅಧಿಕಾರಿಗಳಿಗೆ ಬೇಕಿಲ್ಲ. ಸದಾ ಹಿಂದೆ ತಿರುಗಾಡುವವರು, ಮಧ್ಯವರ್ತಿಗಳು, ಗುತ್ತಿಗೆದಾರರಿಗೆ ಕೇಳಿದಷ್ಟು ಸಾಲ ಕೊಡುತ್ತೀರಿ. ಬಡವರು ಬಂದರೆ ಬ್ಯಾಂಕ್‌ನಿಂದ ಹೊರ ಕಳುಹಿಸುತ್ತೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರಗಳು ರೈತರು, ಮಹಿಳೆಯರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ಸಾಲ ಯೋಜನೆ ಜಾರಿಗೆ ತಂದಿವೆ. ಬ್ಯಾಂಕ್‌ಗಳು ರೈತರಿಗೆ ಕೃಷಿ ಸಾಲ ನೀಡಿ ಅವರನ್ನು ಆರ್ಥಿಕವಾಗಿ ಸಶಕ್ತರಾಗಿಸಬೇಕು. ಆದರೆ, ಶೇ 29ರಷ್ಟು ಕೃಷಿ ಸಾಲ ನೀಡಿದರೆ ರೈತರು ಆರ್ಥಿಕ ಸ್ಥಿತಿ ಸುಧಾರಿಸುವುದು ಹೇಗೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ತಬ್ಬಿಬ್ಬು: ‘ಮಕ್ಕಳ ವಿದ್ಯಾಬ್ಯಾಸಕ್ಕೆ ಸಾಲ ಮತ್ತು ಸಹಾಯಧನ ನೀಡುವ ವ್ಯವಸ್ಥೆ ಸರ್ಕಾರದಲ್ಲಿದೆ. ಎಷ್ಟು ಮಂದಿಗೆ ಈ ಸವಲತ್ತು ಕಲ್ಪಿಸಿದ್ದೀರಿ ಎಂಬ ವಿವರ ಕೊಡಿ’ ಎಂದು ಸಂಸದರು ಕೇಳಿದಾಗ ಬ್ಯಾಂಕ್ ಅಧಿಕಾರಿಗಳು ತಬ್ಬಿಬ್ಬಾದರು. ಇದರಿಂದ ಕೆಂಡಾಮಂಡಲರಾದ ಸಂಸದರು, ‘3 ತಿಂಗಳಿಂದ ಕೇವಲ 3 ಸಾವಿರ ಮಕ್ಕಳಿಗೆ ಮಾತ್ರ ಸಾಲ ಕೊಟ್ಟಿದ್ದೀರಿ. ಉಳಿದ ವಿದ್ಯಾರ್ಥಿಗಳ ಪಾಡೇನು’ ಎಂದು ಗುಡುಗಿದರು.

‘ಜಿಲ್ಲೆಯು ಬರಪೀಡಿತ ಪ್ರದೇಶ. ಇಲ್ಲಿ 14 ವರ್ಷಗಳಿಂದ ಉತ್ತಮ ಮಳೆಯಾಗಿಲ್ಲ. ರೈತರು, ದಲಿತರು ಹಾಗೂ ಬಡವರ ಪರ ಕೆಲಸ ಮಾಡದ ಬ್ಯಾಂಕ್‌ಗಳು ನಮಗೆ ಬೇಕಿಲ್ಲ. ಜನಪರವಾಗಿ ಕೆಲಸ ಮಾಡದ ಬ್ಯಾಂಕ್‌ಗಳಿಂದ ಏನು ಪ್ರಯೋಜನ. ಜನರಿಗಾಗಿ ಬ್ಯಾಂಕ್‌ಗಳೇ ಹೊರತು ಬ್ಯಾಂಕ್‌ಗಳಿಗಾಗಿ ಜನರಲ್ಲ’ ಎಂದು ಸಿಡಿಮಿಡಿಗೊಂಡರು.

ಕ್ರಿಮಿನಲ್ ಪ್ರಕರಣ: ‘ಬ್ಯಾಂಕ್‌ಗಳು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಕೇವಲ 16 ಸಾವಿರ ಮಂದಿಯಿಂದ ಬೆಳೆ ವಿಮೆ ಮಾಡಿಸಿರುವುದು ಸರಿಯಲ್ಲ. ಜಿಲ್ಲೆಯಲ್ಲಿ ಕನಿಷ್ಠ 1 ಲಕ್ಷ ಮಂದಿಯಿಂದ ಬೆಳೆ ವಿಮೆ ಮಾಡಿಸಬೇಕಿತ್ತು. ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಕಿಸಾಸ್ ಕ್ರೆಡಿಟ್ ಕಾರ್ಡ್ ಕೊಟ್ಟಿದ್ದೀರಿ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಪ್ರಶ್ನಿಸಿದರು.

‘ಬ್ಯಾಂಕ್‌ಗಳು ಜಿಲ್ಲೆಯ ಸ್ಥಿತಿಗತಿಗೆ ಸ್ಪಂದಿಸುತ್ತಿಲ್ಲ. ನಾನು ಸಮಯಕ್ಕೆ ಕಾಯುತ್ತಿದ್ದೇನೆ. ಕರ್ತವ್ಯ ಲೋಪವಾದರೆ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹೊಸಮಠ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)