ಗುರುವಾರ , ಸೆಪ್ಟೆಂಬರ್ 23, 2021
28 °C

ಎದುರಾಳಿಗಳ ಆಶೀರ್ವಾದದಲ್ಲೇ ಗೆಲ್ಲುತ್ತೇನೆ: ಮುನಿಯಪ್ಪ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನನಗೆ ಟಿಕೆಟ್ ತಪ್ಪಿಸಲು ಕೆಲವರು ದೆಹಲಿಗೆ ಹೋಗಿಬರುವ ಮೂಲಕ ಅನುಕೂಲ ಮಾಡಿದ್ದಾರೆ. ಅವರ ಆಶೀರ್ವಾದದಲ್ಲೇ ಈ ಬಾರಿಯೂ ಗೆದ್ದು ಇತಿಹಾಸ ಸೃಷ್ಟಿಸುತ್ತೇನೆ’ ಎಂದು ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಏ.13ರಂದು ನಡೆಯಲಿರುವ ಚುನಾವಣಾ ಪ್ರಚಾರ ಸಭೆಯ ಸಿದ್ಧತೆಗಳನ್ನು ಶುಕ್ರವಾರ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ದೊಡ್ಡ ಪಕ್ಷದಲ್ಲಿ ಭಿನ್ನಾಭಿಪ್ರಾಯ ಸಹಜ. ಪ್ರತಿ ಚುನಾವಣೆ ವೇಳೆ ನನಗೆ ಟಿಕೆಟ್ ತಪ್ಪಿಸಲು ವಿರೋಧಿಗಳು ಗೊತ್ತಾಗದಂತೆ ದೆಹಲಿಗೆ ಹೋಗಿ ಬರುವುದು ಸಾಮಾನ್ಯವಾಗಿದ್ದು, ಈ ಕುತಂತ್ರ ಒಳಗೊಳಗೆ ನಡೆಯುತ್ತದೆ. ಈಗ ಈ ಗುಟ್ಟು ರಟ್ಟಾಗಿರುವುದರಿಂದ ವಿರೋಧಿ ಬಣದಲ್ಲಿ ಯಾರಿದ್ದಾರೆ ಎಂಬುದು ಗೊತ್ತಾಗಿದೆ. ಹೀಗಾಗಿ ನಾವೆಲ್ಲಾ ಎಚ್ಚರಿಕೆಯಿಂದ ಕೆಲಸ ಮಾಡಲು ಅನುಕೂಲವೇ ಆಗಿದೆ’ ಎಂದರು.

‘ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದಿಂದ ನನಗೆ ಸಂಪೂರ್ಣ ಸಹಕಾರವಿದ್ದು, ಶಾಸಕ ಶ್ರೀನಿವಾಸಗೌಡ ಹಾಗೂ ಮಾಜಿ ಶಾಸಕ ಮಂಜುನಾಥಗೌಡರು ಕೊಂಚ ಮುನಿಸಿಕೊಂಡಿದ್ದಾರೆ. ಸೀಟು ಹಂಚಿಕೆ ವಿಚಾರದಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗಿಲ್ಲ ಎಂಬುದು ಅವರ ಮುನಿಸಿಗೆ ಕಾರಣ. ಈ ಸಂಗತಿ ಎರಡೂ ಪಕ್ಷಗಳ ವರಿಷ್ಠರ ಗಮನಕ್ಕೆ ಹೋಗಿದೆ’ ಎಂದು ಮಾಹಿತಿ ನೀಡಿದರು.

‘ಕೋಮುವಾದಿ ಶಕ್ತಿಗಳಿಂದ ದೇಶದಲ್ಲಿ ಶಾಂತಿ ಇಲ್ಲವಾಗಿದೆ. ದೇಶದ 130 ಕೋಟಿ ಜನರ ಪೈಕಿ ಯಾವುದೇ ಸಣ್ಣ ವರ್ಗಕ್ಕೂ ಸೌಲಭ್ಯ ಕಲ್ಪಿಸದ ಪ್ರಧಾನಿ ಮೋದಿಯವರಿಗೆ ಈಗಾಗಲೇ 3 ರಾಜ್ಯಗಳ ಚುನಾವಣೆಯಲ್ಲಿ ಜನ ಉತ್ತರ ಕೊಟ್ಟಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಗೆ ವಿರೋಧ: ‘ರಾಹುಲ್‌ ಗಾಂಧಿ ನುಡಿದಂತೆಯೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಕೋಮುವಾದಿ ಶಕ್ತಿಗಳು ಬೆಳೆಯದಂತೆ ಎಚ್ಚರ ವಹಿಸಿ ಈಗಾಗಲೇ ಜಾತ್ಯತೀತ ಪಕ್ಷಗಳು ಒಗ್ಗೂಡಿದ್ದು, ರಾಷ್ಟ್ರದ ಉದ್ದಗಲಕ್ಕೂ ಬಿಜೆಪಿಗೆ ವಿರೋಧ ವ್ಯಕ್ತವಾಗಿದೆ’ ಎಂದರು.

‘ಕಾಂಗ್ರೆಸ್ ಈ ಚುನಾವಣೆಯಲ್ಲಿ ಮತ್ತೊಮ್ಮೆ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ರಾಹುಲ್‌ ಗಾಂಧಿ ಪ್ರಧಾನಿಯಾಗುತ್ತಾರೆ. ಯಡಿಯೂರಪ್ಪ ವೈಯಕ್ತಿಕವಾಗಿ ಏನೇನೋ ಮಾತನಾಡಿರುವುದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ, ಅವರಿಗೆ ಜನರೇ ತಕ್ಕ ಉತ್ತರ ಕೊಡುತ್ತಾರೆ’ ಎಂದು ತಿಳಿಸಿದರು.

ಸುಮ್ಮನೆ ಬಿಡುವುದಿಲ್ಲ: ‘ಕೆ.ಸಿ ವ್ಯಾಲಿ ಯೋಜನೆ ಅನುಷ್ಠಾನದಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳುತ್ತಿರುವವರಿಗೆ ಈಗ ಉತ್ತರ ಕೊಡುವುದಿಲ್ಲ. ಏ.18ರ ಬಳಿಕವೂ ನಾನು ಸಂಸದನಾಗಿಯೇ ಇರುತ್ತಾನೆ, ಆಗ ನೋಡಿಕೊಳ್ಳುತ್ತೇನೆ, ಸುಮ್ಮನೆ ಬಿಡುವುದಿಲ್ಲ’ ಎಂದು ಹರಿಹಾಯ್ದರು.

‘ನಾನು ಸಚಿವನಾಗಿದ್ದಾಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಎತ್ತಿನಹೊಳೆ, ಕೆ.ಸಿ ವ್ಯಾಲಿ, ಎಚ್‍.ಎನ್‌ ವ್ಯಾಲಿ ಯೋಜನೆ ಸಂಬಂಧ 3 ಬಾರಿ ಸಭೆ ನಡೆಸಿ ಹಣಕಾಸು ಬಿಡುಗಡೆ ಮಾಡಿಸಲು ಕಾರಣಕರ್ತನಾಗಿದ್ದೇನೆ. ಈಗ ಮಾತನಾಡುತ್ತಿರುವವರ ಪೈಕಿ ಯಾರೂ ಸಹ ಯೋಜನೆ ತಂದವರೂ, ಆರಂಭಿಸಿದವರೂ, ಹಣ ಮಂಜೂರು ಮಾಡಿಸಿದವರಲ್ಲ’ ಎಂದು ಟೀಕಿಸಿದರು.

ಬಯಲು ಮಾಡುತ್ತೇನೆ: ‘ರಾಜಕೀಯ ವಿರೋಧಿಗಳು ಪ್ರಚಾರಕ್ಕಾಗಿ ಏನೇನೋ ಮಾತನಾಡಿದರೆ ನಾನು ಉತ್ತರ ಕೊಡುವುದಿಲ್ಲ. ಅಲ್ಲದೇ, ಜನರೇ ನನಗೆ ವಿರೋಧಿಗಳ ಬಗ್ಗೆ ಮಾತನಾಡದಂತೆ ಹೇಳಿದ್ದಾರೆ. ಹೀಗಾಗಿ ಏ.18ರವರೆಗೆ ಮಾತನಾಡುವುದಿಲ್ಲ. ಬಳಿಕ ದಾಖಲೆಪತ್ರ ಸಮೇತ ಎದುರಾಳಿಗಳ ಬಂಡವಾಳ ಬಯಲು ಮಾಡುತ್ತೇನೆ’ ಎಂದು ಸವಾಲು ಹಾಕಿದರು.

ವಿಧಾನ ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ್, ಮಾಜಿ ಸಚಿವ ನಿಸಾರ್‍ ಅಹಮ್ಮದ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಖಜಾಂಜಿ ರಾಮ್‌ಪ್ರಸಾದ್, ಮುಳಬಾಗಿಲು ಕ್ಷೇತ್ರದ ಚುನಾವಣಾ ಉಸ್ತುವಾರಿ ವಸಂತ ಕವಿತಾ, ವಕ್ತಾರ ರಾಜೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅತಾವುಲ್ಲಾ ಖಾನ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು