ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೈರ್ಯವಿದ್ದರೆ ಯತ್ನಾಳ ವಿರುದ್ಧ ಕ್ರಮ ಜರುಗಿಸಲಿ: ಬಸವರಾಜ ಹೊರಟ್ಟಿ ಸವಾಲು

Last Updated 24 ಅಕ್ಟೋಬರ್ 2020, 16:43 IST
ಅಕ್ಷರ ಗಾತ್ರ

ಕೋಲಾರ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಿಸಲು ಬಿಜೆಪಿ ಕೇಂದ್ರ ನಾಯಕರಿಗೆ ಒಲವಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರೋಕ್ಷವಾಗಿ ಅವರ ವರಿಷ್ಠರ ನಿರ್ಧಾರ ಹೇಳಿದ್ದಾರೆ. ಬಿಜೆಪಿ ವರಿಷ್ಠರಿಗೆ ಧೈರ್ಯವಿದ್ದರೆ ಯತ್ನಾಳ ಅವರ ವಿರುದ್ಧ ಕ್ರಮ ಜರುಗಿಸಲಿ’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಸವಾಲು ಹಾಕಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಯತ್ನಾಳ ಅವರು ಸುಮ್ಮನೆ ಯಡಿಯೂರಪ್ಪರನ್ನು ಮುಖ್ಯಮಂತ್ರಿಗಾದಿಯಿಂದ ಕೆಳಗಿಳಿಸುವ ಬಗ್ಗೆ ಮಾತನಾಡಿಲ್ಲ. ಅವರಿಗೆ ಕೇಂದ್ರ ನಾಯಕರ ಬೆಂಬಲ ಇರುವುದರಿಂದ ಆ ಬಗ್ಗೆ ಮಾತನಾಡಿದ್ದಾರೆ’ ಎಂದು ಹೇಳಿದರು.

‘ಬಿಜೆಪಿಯಲ್ಲಿ ಸ್ವಲ್ಪವೂ ಶಿಸ್ತಿಲ್ಲ. ಬಿಜೆಪಿಯ ಯಾವುದೇ ನಾಯಕರಿಗೆ ಯತ್ನಾಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಧೈರ್ಯವಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಬಿಜೆಪಿ ಸರ್ಕಾರವಲ್ಲ. ಬದಲಿಗೆ ಜೆಸಿಬಿ ಸರ್ಕಾರ. ಇದೊಂದು ಪರ್ಸೆಂಟೇಜ್ ಸರ್ಕಾರ. ಸಚಿವರ ನಡುವೆ ಹೊಂದಾಣಿಕೆಯಿಲ್ಲ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ಸರ್ಕಾರ ಜನರ ಹಿತ ಕಡೆಗಣಿಸಿ ದುರಾಡಳಿತ ನಡೆಸುತ್ತಿದೆ’ ಎಂದು ಟೀಕಿಸಿದರು.

‘ದೇಶದ ಜನ ಕೊರೊನಾ ಲಸಿಕೆ ಇಲ್ಲದೆ ಆತಂಕದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಯು ಬಿಹಾರ ಮತ್ತು ತಮಿಳುನಾಡು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಕೊರೊನಾಗೆ ಉಚಿತವಾಗಿ ಲಸಿಕೆ ಕೊಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿರುವುದು ನಾಚಿಕೆಗೇಡು. ಬಿಜೆಪಿ ಮುಖಂಡರು ಕೊರೊನಾ ಲಸಿಕೆ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟಿರುವುದು ಶೋಭೆಯಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಕೋವಿಡ್ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸೂಕ್ತವಲ್ಲ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ನಂತರ ಚುನಾವಣೆ ನಡೆಸಬಹುದಿತ್ತು. ಆದರೆ, ಬಿಜೆಪಿ ಮುಖಂಡರಿಗೆ ಜನರ ಪ್ರಾಣಕ್ಕಿಂತ ಅಧಿಕಾರ ಮುಖ್ಯವಾಗಿರುವ ಕಾರಣಕ್ಕೆ ಚುನಾವಣೆ ನಡೆಸುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿಕ್ಷಕರು ಬೀದಿ ಪಾಲು: ‘ಬಿಜೆಪಿ ಸರ್ಕಾರದ ಬೇಜವಾಬ್ದಾರಿಯಿಂದ ಖಾಸಗಿ ಶಾಲಾ ಶಿಕ್ಷಕರು ಬೀದಿ ಪಾಲಾಗಿದ್ದಾರೆ. ಶಿಕ್ಷಕರ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಮಸ್ಯೆ ಪರಿಹಾರಕ್ಕೆ ಶಿಕ್ಷಕರು ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

‘ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ವಿದ್ಯಾಗಮ ಆರಂಭಿಸಿ 72 ಶಿಕ್ಷಕರನ್ನು ಬಲಿ ಪಡೆಯಿತು. ಹಲವು ಶಿಕ್ಷಕರಿಗೆ ಕೊರೊನಾ ಸೋಂಕು ಹರಡಿದೆ. ಆದರೂ ಸರ್ಕಾರ ವಿದ್ಯಾಗಮ ಸ್ಥಗಿತಗೊಳಿಸಲಿಲ್ಲ. ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾದ ಕಾರಣಕ್ಕೆ ವಿದ್ಯಾಗಮ ನಿಲ್ಲಿಸಿತು’ ಎಂದು ತಿಳಿಸಿದರು.

ಸ್ವಾಗತಾರ್ಹ: ನ.17ರಿಂದ ಕಾಲೇಜು ಆರಂಭಿಸುತ್ತಿರುವುದು ಸ್ವಾಗತಾರ್ಹ. ಆದರೆ, ಕಾಲೇಜುಗಳಲ್ಲಿ ಕೋವಿಡ್ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ತೂಪಲ್ಲಿ ಆರ್‌.ಚೌಡರೆಡ್ಡಿ, ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಉಪಾಧ್ಯಕ್ಷ ಗೋಪಾಲ್, ಕಾರ್ಯಾಧ್ಯಕ್ಷ ನಟರಾಜ್, ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ಬಾಬುಮೌನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT