ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ದಿವಾಳಿಯಾದರೆ ದೇಶ ದಿವಾಳಿ: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಕಳವಳ

Last Updated 13 ಸೆಪ್ಟೆಂಬರ್ 2021, 16:04 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರಗಳು ರೈತ ಮುಖಂಡರನ್ನು ಮಾತುಕತೆಗೆ ಕರೆದು ಚಹಾ ಕುಡಿಸಿ ಕಳುಹಿಸುವ ಬದಲು ರೈತರೊಂದಿಗೆ ಹೃದಯ ಕೊಟ್ಟು ಮಾತನಾಡಲಿ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಸಲಹೆ ನೀಡಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಧ್ಯಯನ ಶಿಬಿರದಲ್ಲಿ ‘ಸಂವಿಧಾನ ಮತ್ತು ಕೃಷಿಕ’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

‘ಯಾವ ದೇಶದಲ್ಲಿ ರೈತರು ದಿವಾಳಿಯಾಗುತ್ತಾರೋ ಆ ದೇಶ ದಿವಾಳಿಯಾಗುತ್ತದೆ. ಯಾವ ದೇಶದ ರೈತರು ಭದ್ರವಾಗಿರುತ್ತಾರೋ ಆ ದೇಶ ಭದ್ರವಾಗಿರುತ್ತದೆ. ಕೇಂದ್ರದ ಕೃಷಿ ವಿರೋಧಿ ಕಾನೂನುಗಳ ವಿರುದ್ಧ ರೈತರು ಹಲವು ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಈವರೆಗೆ ರೈತರ ಹೋರಾಟಕ್ಕೆ ಸ್ಪಂದಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪಾಳೇಗಾರಿಕೆ, ಜೋಡಿದಾರರ ವ್ಯವಸ್ಥೆಯಲ್ಲಿ ಕೇಂದ್ರಿಕೃತವಾಗಿದ್ದ ಭೂಮಿಯು ದೇಶದ ಸ್ವಾತಂತ್ರ್ಯ ವಿಕೇಂದ್ರೀಕರಣವಾಗಿ ಸಣ್ಣ ಹಿಡುವಳಿದಾರರ ಕೈಸೇರಿದೆ. ಹೀಗಾಗಿ ಸ್ವಾತಂತ್ರ್ಯ ಸಮಯದಲ್ಲಿ ತಲೆದೋರಿದ್ದ ಆಹಾರದ ಕೊರತೆ ನೀಗಿದೆ. 50 ದಶಲಕ್ಷ ಮೆಟ್ರಿಕ್ ಟನ್ ಇದ್ದ ಆಹಾರ ಉತ್ಪಾದನೆ ಇಂದು 290 ದಶಲಕ್ಷ ಮೆಟ್ರಿಕ್‌ ಟನ್‌ಗೆ ಏರಿಕೆಯಾಗಿದೆ. ಭೂಮಿ ವಿಕೇಂದ್ರೀಕರಣವು ಇದಕ್ಕೆ ಮುಖ್ಯ ಕಾರಣ’ ಎಂದರು.

‘ಇಂದು ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಸಲಕರಣೆಗಳನ್ನು ಅವೈಜ್ಞಾನಿಕವಾಗಿ ಬಳಸುತ್ತಿರುವುದು ಕೃಷಿ ಬಿಕ್ಕಟ್ಟಿಗೆ ಮೂಲ ಕಾರಣ. ರೈತರ ಹಿತ ಕಾಯಬೇಕಾದ ಸರ್ಕಾರಗಳು ಪೂರಕ ಯೋಜನೆ ಹಾಗೂ ಕಾನೂನುಗಳನ್ನು ರೂಪಿಸಬೇಕಿತ್ತು. ಆದರೆ, ಸರ್ಕಾರ ಕಲ್ಯಾಣ ರಾಜ್ಯವೆಂಬ ಭಾರತ ಸಂವಿಧಾನದ ಮೂಲತತ್ವವನ್ನು ಪಕ್ಕಕ್ಕೆ ಸರಿಸಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಇಚ್ಛಾಶಕ್ತಿ ಕೊರತೆ: ‘ಕೃಷಿ ಕಾನೂನುಗಳ ರಚನೆಯು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಸೇರಿದ್ದರೂ ಕೇಂದ್ರವು ಸಂವಿಧಾನದ ನಿಯಮಗಳನ್ನು ಮೀರಿ ಸ್ವೇಚ್ಛಾಚಾರದಿಂದ ಕಾನೂನು ರೂಪಿಸುತ್ತಿದೆ. ಆಳುವ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣ ರೈತರು ಕಣ್ಣೀರಿಡುವ ಪರಿಸ್ಥಿತಿ ಎದುರಾಗಿದೆ’ ಎಂದು ವಿಷಾದಿಸಿದರು.

‘ಸರ್ಕಾರಗಳ ಕೃಷಿ ವಿರೋಧಿ ನೀತಿಗಳಿಂದ ಕಳೆದ 2 ದಶಕದಲ್ಲಿ ದೇಶದಲ್ಲಿ ಸುಮಾರು 3.50 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಗಳು ಈವರೆಗೆ ಭೂಸುಧಾರಣೆ ಮಾತ್ರ ತಂದಿವೆ. ಆದರೆ, ಭೂಮಿ ಸುಧಾರಣೆ ತಂದಿಲ್ಲ. ಈ ಕಾರಣದಿಂದ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಿದೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಕೃಷಿ ಸುಧಾರಣೆ ಸಂಬಂಧಿತ ನಿರ್ವಹಣಾ ವ್ಯವಸ್ಥೆ ಹಾಗೂ ತಾಲ್ಲೂಕ ಮಟ್ಟದಲ್ಲೇ ಕೃಷಿಗೆ ಸಂಬಂಧಿಸಿದ ಕ್ರಿಯಾಯೋಜನೆಗಳು ಇಲ್ಲದೆ ರೈತರು ದಿವಾಳಿಯಾಗುತ್ತಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.

ಹೆಚ್ಚು ಲಾಭದಾಯಕ: ‘ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಇಲ್ಲದ ಕಾರಣ ಕೃಷಿ ಕ್ಷೇತ್ರದಲ್ಲಿ ಆರ್ಥಿಕ ಕ್ಷೀಣತೆ ಹೆಚ್ಚಿ ಭೂಮಾಫಿಯಾ, ರಿಯಲ್ ಎಸ್ಟೇಟ್ ದಂದೆ ಆರಂಭವಾಗಿದೆ. ಈ ಹಿಂದೆ ಜಾರಿಯಲ್ಲಿದ್ದ ಒಣ ಬೇಸಾಯ ಹಾಗೂ ಮಳೆಯಾಶ್ರಿತ ಬೆಳೆಗಳಿಗಿಂತ ತೋಟಗಾರಿಕೆ ಬೆಳೆಗಳು ಮತ್ತು ಕುರಿ -ಮೇಕೆ ಸಾಕಾಣಿಕೆಯು ರೈತರಿಗೆ ಹೆಚ್ಚು ಲಾಭದಾಯಕ’ ಎಂದು ಸಲಹೆ ನೀಡಿದರು.

ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಿದ್ಧವೀರಪ್ಪ, ಪ್ರಧಾನ ಕಾರ್ಯದರ್ಶಿ ಶಿವಪ್ಪ, ಉಪಾಧ್ಯಕ್ಷ ಬೈಚೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆನಂದ್‌ಕುಮಾರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT