ಶುಕ್ರವಾರ, ಸೆಪ್ಟೆಂಬರ್ 24, 2021
26 °C
ಸರ್ಕಾರಕ್ಕೆ ರಾಜಧನ ವಂಚನೆ: ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸದಸ್ಯರ ಆರೋಪ

ಅಕ್ರಮ ಕಲ್ಲು ಗಣಿಗಾರಿಕೆ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಾಲ್ಲೂಕಿನ ವೇಮಗಲ್‌ ಹೋಬಳಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ನಿಯಂತ್ರಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ಮಾಡಿದರು.

‘ವೇಮಗಲ್‌ ಸುತ್ತಮುತ್ತ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಹಣದಾಸೆಗೆ ಈ ಅಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ. ಕಲ್ಲು ಗಣಿಗಾರಿಕೆಯಿಂದ ಪರಿಸರ ಹಾಳಾಗುತ್ತಿದೆ ಮತ್ತು ಸ್ಥಳೀಯ ಜನರಿಗೆ ಸಮಸ್ಯೆ ಆಗುತ್ತಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಕಲ್ಲು ಗಣಿಗಾರಿಕೆಗೆ ಪರವಾನಗಿ ಪಡೆದಿರುವ ಗುತ್ತಿಗೆದಾರರು ಗೋಮಾಳ, ಬೆಟ್ಟ ಗುಡ್ಡಗಳಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಜತೆಗೆ ಜಿಲ್ಲಾಡಳಿತ ನಿಗದಿಪಡಿಸಿದ ಪ್ರಮಾಣಕ್ಕಿಂತಲೂ ಹೆಚ್ಚು ಕಲ್ಲು ತೆಗೆದು ಕದ್ದುಮುಚ್ಚಿ ಹೊರ ರಾಜ್ಯಗಳಿಗೆ ಸಾಗಿಸುತ್ತಿದ್ದಾರೆ. ಅಲ್ಲದೇ, ಸರ್ಕಾರಕ್ಕೆ ರಾಜಧನ ವಂಚಿಸುತ್ತಿದ್ದಾರೆ’ ಎಂದು ಸಮಿತಿ ಅಧ್ಯಕ್ಷ ಜಿ.ಯಲ್ಲಪ್ಪ ಆರೋಪಿಸಿದರು.

‘ಗಣಿ ಗುತ್ತಿಗೆದಾರರು ಕಲ್ಲು ಬಂಡೆಗಳನ್ನು ಸ್ಫೋಟಿಸಲು ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಿದ್ದಾರೆ. ಇದರಿಂದ ಅಕ್ಕಪಕ್ಕದ ಗ್ರಾಮಗಳ ಜನರಿಗೆ ಪ್ರಾಣಾಪಾಯವಾಗುವ ಮತ್ತು ಮನೆಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಈ ಸಂಗತಿ ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಮೌನಕ್ಕೆ ಶರಣಾಗಿದ್ದಾರೆ’ ಎಂದು ದೂರಿದರು.

‘ನಿಯಮಬಾಹಿರವಾಗಿ ಹಗಲು ವೇಳೆಯಲ್ಲೂ ಗಣಿಗಾರಿಕೆ ನಡೆಸಲಾಗುತ್ತಿದೆ. ಕಲ್ಲು ಗಣಿಗಾರಿಕೆ ಸ್ಥಳದ ಸುತ್ತಮುತ್ತ ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತಿದೆ. ಗಣಿಗಾರಿಕೆ ದೂಳಿನಿಂದ ಬೆಳೆಗಳು ಹಾಳಾಗುತ್ತಿವೆ. ಕಲ್ಲು ಬಂಡೆ ಸ್ಫೋಟಿಸಲು ಸ್ಫೋಟಕಗಳನ್ನು ಬಳಸುತ್ತಿರುವುದರಿಂದ ಗ್ರಾಮಗಳಲ್ಲಿ ಮನೆಗಳು ಬಿರುಕು ಬಿಟ್ಟಿವೆ’ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್ ಕಿಡಿಕಾರಿದರು.

ಕ್ರಿಮಿನಲ್ ಪ್ರಕರಣ: ‘ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ಮತ್ತು ನಿಯಮಬಾಹಿರವಾಗಿ ಜಿಲೆಟಿನ್‌ ದಾಸ್ತಾನು ಮಾಡಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಜಿಲೆಟಿನ್‌ ಸಂಗ್ರಹಣೆ ಮತ್ತು ಸಾಗಾಟ ಪತ್ತೆಗೆ ಗಣಿ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಒಟ್ಟಾಗಿ ಕಾರ್ಯಾಚರಣೆ ನಡೆಸಬೇಕು’ ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.

‘ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವವರನ್ನು ಶೀಘ್ರವೇ ಗುರುತಿಸಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಬೇಕು. ಅಕ್ರಮ ಗಣಿಗಾರಿಕೆ ತಕ್ಷಣವೇ ಬಂದ್ ಆಗಬೇಕು. ತಹಶೀಲ್ದಾರ್‌ ಸೇರಿದಂತೆ ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಆಧಿಕಾರಿಗಳು ಎಚ್ಚರ ವಹಿಸಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

ಸಮಿತಿಯ ಖಜಾಂಚಿ ಬಿ.ನಾಗರಾಜ, ಸಂಘಟನಾ ಕಾರ್ಯದರ್ಶಿಗಳಾದ ವೆಂಕಟೇಶ್, ಮುನಿರಾಜು, ಸದಸ್ಯರಾದ ನರಸಿಂಹ, ಕೃಷ್ಣಪ್ಪ, ನಾರಾಯಣಸ್ವಾಮಿ, ರತ್ನಮ್ಮ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು