ಗುರುವಾರ , ಆಗಸ್ಟ್ 11, 2022
24 °C

ದಾಖಲೆಪತ್ರಗಳಿಲ್ಲದೆ ಅಕ್ರಮವಾಗಿ ಹಣ ಸಾಗಣೆ: ₹ 2.95 ಕೋಟಿ ಜಪ್ತಿ

ಪ್ರಜಾವಾಣಿ ವಾರ್ತೆ‌‌ Updated:

ಅಕ್ಷರ ಗಾತ್ರ : | |

ಕೋಲಾರ: ದಾಖಲೆಪತ್ರಗಳಿಲ್ಲದೆ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಆರೋಪದ ಮೇಲೆ ಮಂಗಳವಾರ ರಾತ್ರಿ ಇಬ್ಬರನ್ನು ಬಂಧಿಸಿರುವ ಜಿಲ್ಲೆಯ ಶ್ರೀನಿವಾಸಪುರ ಠಾಣೆ ಪೊಲೀಸರು ₹ 2.95 ಕೋಟಿ ವಶಪಡಿಸಿಕೊಂಡಿದ್ದಾರೆ.

ಕೋಲಾರದ ಅಮರನಾಥ್‌ (51) ಮತ್ತು ಚಂದ್ರಶೇಖರ್‌ (41) ಬಂಧಿತರು. ಪ್ರಕರಣದ ಮತ್ತೊಬ್ಬ ಆರೋಪಿ ಮುಳಬಾಗಿಲು ತಾಲ್ಲೂಕಿನ ರಾಮಪ್ಪ ಎಂಬಾತ ಪರಾರಿಯಾಗಿದ್ದಾನೆ.

‘ಈ ಮೂವರು ಮಂಗಳವಾರ ರಾತ್ರಿ ಕಾರಿನಲ್ಲಿ ಹಣ ತೆಗೆದುಕೊಂಡು ಶ್ರೀನಿವಾಸಪುರದ ಕಡೆಗೆ ಹೊರಟಿದ್ದರು. ಈ ಬಗ್ಗೆ ಬಾತ್ಮಿದಾರರು ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಶ್ರೀನಿವಾಸಪುರ ಪೊಲೀಸರು ರೋಜರನಹಳ್ಳಿ ಗೇಟ್‌ ಬಳಿ ಆರೋಪಿಗಳನ್ನು ಬಂಧಿಸಿ ಹಣ ಜಪ್ತಿ ಮಾಡಿದ್ದಾರೆ’ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಣಕ್ಕೆ ಸಂಬಂಧಪಟ್ಟಂತೆ ಬಂಧಿತರು ಯಾವುದೇ ದಾಖಲೆಪತ್ರ ನೀಡಿಲ್ಲ. ಸ್ನೇಹಿತರಿಂದ ಹಣ ಸಾಲ ಪಡೆದುಕೊಂಡಿದ್ದಾಗಿ ಬಂಧಿತರು ಹೇಳಿಕೆ ನೀಡಿದ್ದಾರೆ. ಹವಾಲಾ, ಡಬ್ಲಿಂಗ್‌ ದಂಧೆ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

‘ಪರಾರಿಯಾಗಿರುವ ಆರೋಪಿ ರಾಮಪ್ಪ ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದಾನೆ. ಆತ ಅಮರನಾಥ್‌ ಮತ್ತು ಚಂದ್ರಶೇಖರ್‌ರಿಂದ ಬೇರೊಬ್ಬರಿಗೆ ಹಣ ಕೊಡಿಸಲು ಕರೆದುಕೊಂಡು ಹೋಗಿದ್ದ ಎಂದು ಗೊತ್ತಾಗಿದೆ. ಆತನನ್ನು ಬಂಧಿಸಿ ವಿಚಾರಣೆ ಮಾಡಿದರೆ ಹಣ ತೆಗೆದುಕೊಳ್ಳಲು ಬರಬೇಕಿದ್ದ ವ್ಯಕ್ತಿ ಮತ್ತು ಹಣ ಹಸ್ತಾಂತರದ ಉದ್ದೇಶದ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ’ ಎಂದು ಕಾರ್ತಿಕ್‌ರೆಡ್ಡಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.