ಗುರುವಾರ , ಜನವರಿ 23, 2020
21 °C

ಅಕ್ರಮ ಮದ್ಯ ಮಾರಾಟ: ಕಾವೇರಿದ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ಇಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು.

‘ಜಿಲ್ಲೆಯ ಬೇತಮಂಗಲ ಸೇರಿದಂತೆ ಬಾರ್‌ಗಳು ಇರುವೆಡೆ ಕುಡುಕರ ಕಾಟ ಹೆಚ್ಚಿದೆ. ಮದ್ಯವ್ಯಸನಿಗಳು ಯುವತಿಯನ್ನು ಚುಡಾಯಿಸುತ್ತಿದ್ದಾರೆ. ಇದರಿಂದ ತುಂಬಾ ತೊಂದರೆಯಾಗಿದ್ದು, ಪೊಲೀಸರ ಗಮನಕ್ಕೆ ತಂದರು ಕುಡುಕರ ಹಾವಳಿ ತಡೆಗೆ ಕ್ರಮ ಕೈಗೊಂಡಿಲ್ಲ’ ಎಂದು ಜಿ.ಪಂ ಸದಸ್ಯೆ ಅಶ್ವನಿ ಅಸಮಾಧಾನ ವ್ಯಕ್ತಪಡಿಸಿದರು.

‘ಸಾಕಷ್ಟು ಕಡೆ ಬಾರ್‌ಗಳು ಮುಖ್ಯರಸ್ತೆ ಮತ್ತು ಜನವಸತಿ ಪ್ರದೇಶದಲ್ಲಿವೆ. ಕೆಲ ಕಿಡಿಗೇಡಿಗಳು ಮದ್ಯ ಸೇವಿಸಿ ರಸ್ತೆಯಲ್ಲಿ ಯುವತಿಯರು ಮತ್ತು ಮಹಿಳೆಯರನ್ನು ಚುಡಾಯಿಸುತ್ತಾರೆ. ಪೊಲೀಸರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಅಬಕಾರಿ ಸಚಿವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಜಿಲ್ಲೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ವಿಷಾದಕರ’ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ‘ದಿನಕ್ಕೆ ಇಂತಿಷ್ಟು ಮದ್ಯ ಮಾರಾಟವಾಗಲೇ ಬೇಕೆಂದು ಬಾರ್‌ ಮಾಲೀಕರಿಗೆ ಸರ್ಕಾರವೇ ಗುರಿ ನೀಡಿದೆ. ಇದರಿಂದ ಮಾಲೀಕರು ಗ್ರಾಮೀಣ ಭಾಗದ ಚಿಲ್ಲರೆ ಅಂಗಡಿಯವರಿಗೆ ಮದ್ಯ ಕೊಟ್ಟು ಮಾರಾಟ ಮಾಡಿಸುತ್ತಿದ್ದಾರೆ. ಇದರಿಂದ ಜನರಿಗೆ ಎಷ್ಟು ತೊಂದರೆಯಾಗುತ್ತಿದೆ ಎಂಬ ಆಲೋಚನೆಯಿಲ್ಲ’ ಎಂದು ದೂರಿದರು.

‘ಕೇವಲ ಪಟ್ಟಣ, ನಗರ ಪ್ರದೇಶದಲ್ಲಿ ಮಾತ್ರ ಮದ್ಯ ಮಾರಾಟ ಮಾಡಿದರೆ ಬಾರ್‌ ಮಾಲೀಕರು ವಹಿವಾಟಿನ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ. ಹೀಗಾಗಿ ಗ್ರಾಮಗಳ ಮಟ್ಟಕ್ಕೂ ಮದ್ಯದ ವಹಿವಾಟು ವಿಸ್ತರಿಸಿ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ಗುಡುಗಿದರು.

‘ಅಕ್ರಮ ಮದ್ಯ ಮಾರಾಟ ತಡೆಯುವಂತೆ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದೇನೆ. ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ನಿಖರ ಮಾಹಿತಿ ನೀಡಿದರೆ ಅಕ್ರಮ ತಡೆಗೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಚಿವ ನಾಗೇಶ್ ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು