ಭಾನುವಾರ, ಜುಲೈ 25, 2021
28 °C
ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸುನಾಮಿ: ಬೆಚ್ಚಿ ಬಿದ್ದ ಜನ

ಸೋಂಕಿತ ಸಾವು: ಮತ್ತೆ 20 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸುನಾಮಿ ಎದ್ದಿದ್ದು, ಭಾನುವಾರ ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 4ಕ್ಕೆ ಏರಿದೆ. ಇದರ ಬೆನ್ನಲೇ ಭಾನುವಾರ ಒಂದೇ ದಿನ 20 ಮಂದಿಗೆ ಸೋಂಕು ಹರಡಿದ್ದು, ಜಿಲ್ಲೆಯ ಜನ ಸೋಂಕಿನ ಆಟಾಟೋಪಕ್ಕೆ ಬೆಚ್ಚಿ ಬಿದ್ದಿದ್ದಾರೆ.

ಜಿಲ್ಲಾ ಕೇಂದ್ರದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಗಾರಪೇಟೆ ಪಟ್ಟಣದ ಕೋಟೆ ರಸ್ತೆಯ ಸೋಂಕಿತ ವ್ಯಕ್ತಿ ಭಾನುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಚಿನ್ನಾಭರಣ ವ್ಯಾಪಾರಿಯಾದ ಇವರಿಗೆ ಜೂನ್‌ 27ರಂದು ಸೋಂಕು ಕಾಣಿಸಿಕೊಂಡಿತ್ತು. ಇವರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು.

ಕೋಲಾರ ತಾಲ್ಲೂಕಿನಲ್ಲಿ ಮತ್ತೆ 11 ಮಂದಿಗೆ, ಬಂಗಾರಪೇಟೆ ತಾಲ್ಲೂಕಿನಲ್ಲಿ 4 ಮಂದಿಗೆ, ಮುಳಬಾಗಿಲು ತಾಲ್ಲೂಕಿನಲ್ಲಿ 3 ಮಂದಿಗೆ, ಕೆಜಿಎಫ್‌ ತಾಲ್ಲೂಕಿನಲ್ಲಿ ಇಬ್ಬರಿಗೆ ಸೋಂಕು ತಗುಲಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 160ಕ್ಕೆ ಏರಿಕೆಯಾಗಿದೆ.

ಕೋಲಾರ ತಾಲ್ಲೂಕಿನ ಕಂಟೈನ್‌ಮೆಂಟ್‌ ವಲಯದಲ್ಲಿನ ಮೂವರಿಗೆ, ಸೋಂಕಿತ ವ್ಯಕ್ತಿಯ ಸಂಖ್ಯೆ 18,089ರ ಸಂಪರ್ಕದಿಂದ 3 ಮಂದಿಗೆ, ಸೋಂಕಿತ ವ್ಯಕ್ತಿ ಸಂಖ್ಯೆ 6,907ರ ಸಂಪರ್ಕದಿಂದ ಒಬ್ಬರಿಗೆ, ಸೋಂಕಿತ ವ್ಯಕ್ತಿ ಸಂಖ್ಯೆ 16,761ರ ಸಂಪರ್ಕದಿಂದ ಒಬ್ಬರಿಗೆ, ವಿಷಮ ಶೀತ ಜ್ವರದಿಂದ ಬಳಲುತ್ತಿರುವ ಇಬ್ಬರಿಗೆ ಹಾಗೂ ಹೊರ ಜಿಲ್ಲೆಗೆ ಹೋಗಿದ್ದ ಬಂದಿದ್ದ 52 ವರ್ಷದ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದೆ.

ಬಂಗಾರಪೇಟೆ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ 11 ವರ್ಷದ ಬಾಲಕ ಮತ್ತು 47 ವರ್ಷದ ಪುರುಷ, ಹೊರ ಜಿಲ್ಲೆಗೆ ಹೋಗಿ ಬಂದಿದ್ದ 35 ವರ್ಷದ ಪುರುಷ ಹಾಗೂ ಸೋಂಕಿತ ವ್ಯಕ್ತಿಯ ಸಂಖ್ಯೆ 14,433ರ ಸಂಪರ್ಕದಿಂದ 47 ವರ್ಷದ ಪುರುಷರೊಬ್ಬರಿಗೆ ಸೋಂಕು ಹರಡಿರುವುದು ಖಚಿತವಾಗಿದೆ.

ಮುಳಬಾಗಿಲು ತಾಲ್ಲೂಕಿನಲ್ಲಿ ಆರೋಗ್ಯ ಕಾರ್ಯಕರ್ತೆಗೆ, ಹೊರ ಜಿಲ್ಲೆಗೆ ಹೋಗಿ ಬಂದಿದ್ದ ಪುರುಷ ಮತ್ತು ವಿಷಮ ಶೀತ ಜ್ವರದಿಂದ ಬಳಲುತ್ತಿರುವ ಮಹಿಳೆಗೆ ಸೋಂಕು ತಗುಲಿದೆ. ಕೆಜಿಎಫ್‌ ತಾಲ್ಲೂಕಿನಲ್ಲಿ ಸೋಂಕಿತ ವ್ಯಕ್ತಿಯ ಸಂಖ್ಯೆ 19,796ರ ಸಂಪರ್ಕದಿಂದ ಮಹಿಳೆಗೆ ಮತ್ತು ವಿಷಮ ಶೀತ ಜ್ವರದಿಂದ ಬಳಲುತ್ತಿರುವ ಪುರುಷರೊಬ್ಬರಿಗೆ ಸೋಂಕು ಇರುವುದು ಗೊತ್ತಾಗಿದೆ. ಸೋಂಕಿತರ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ.

7 ಮಂದಿ ಗುಣಮುಖ: ಜಿಲ್ಲಾ ಕೇಂದ್ರದ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತರ ಪೈಕಿ 7 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಭಾನುವಾರ ಮನೆಗೆ ಮರಳಿದರು. ಮಾಲೂರು ಮತ್ತು ಕೆಜಿಎಫ್‌ ತಾಲ್ಲೂಕಿನ ತಲಾ ಇಬ್ಬರು, ಕೋಲಾರ, ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲ್ಲೂಕಿನ ತಲಾ ಒಬ್ಬರನ್ನು ಮನೆಗೆ ಕಳುಹಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು