ಶನಿವಾರ, ಮಾರ್ಚ್ 25, 2023
26 °C
ಬೀದಿ ಬದಿಯಲ್ಲಿ ಸೊಪ್ಪು–ತರಕಾರಿ ವ್ಯಾಪಾರ: ರೈತ ಸಂಘ ಧರಣಿ

ಕೋಲಾರ: ಎಪಿಎಂಸಿಯಲ್ಲಿ ಅವಕಾಶಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಬೀದಿ ಬದಿಯಲ್ಲಿ ಸೊಪ್ಪು ಮತ್ತು ತರಕಾರಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಎಪಿಎಂಸಿ ಆವರಣದಲ್ಲಿ ವಹಿವಾಟು ನಡೆಸಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಮಂಗಳವಾರ ಎಪಿಎಂಸಿಯಲ್ಲಿ ಧರಣಿ ನಡೆಸಿದರು.

‘ಸಣ್ಣ ಪ್ರಮಾಣದಲ್ಲಿ ಸೊಪ್ಪು ಮತ್ತು ತರಕಾರಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನು ಎಪಿಎಂಸಿಯಿಂದ ಏಕಾಏಕಿ ಹೊರ ಹಾಕಲಾಗಿದೆ. ಎಪಿಎಂಸಿ ಆಡಳಿತ ಮಂಡಳಿಯು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಈ ಬಡ ವ್ಯಾಪಾರಿಗಳನ್ನು ಬೀದಿಪಾಲು ಮಾಡಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಬಡ ವ್ಯಾಪಾರಿಗಳು ಎಪಿಎಂಸಿ ಆರಂಭವಾದ ದಿನದಿಂದಲೂ ಮಾರುಕಟ್ಟೆ ಆವರಣದಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ, ಮಾರುಕಟ್ಟೆ ಆಡಳಿತ ಮಂಡಳಿಯು ಜಾಗದ ಸಮಸ್ಯೆ ಮತ್ತು ಸ್ವಚ್ಛತೆ ಕಾಪಾಡುವ ನೆಪದಲ್ಲಿ ಈ ವ್ಯಾಪಾರಿಗಳನ್ನು ಎಪಿಎಂಸಿಯಿಂದ ಹೊರ ಕಳುಹಿಸಿದೆ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಎಪಿಎಂಸಿಯಲ್ಲಿ ವಹಿವಾಟಿಗೆ ಅವಕಾಶವಿಲ್ಲದ ಕಾರಣ ಸಣ್ಣ ವ್ಯಾಪಾರಿಗಳು ಮಾರುಕಟ್ಟೆ ಹೊರಗೆ ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುವಂತಾಗಿದೆ. ಇದರಿಂದ ಮಾಲೂರು ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್‌ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಮತ್ತೊಂದೆಡೆ ವ್ಯಾಪಾರಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರವಾಗುತ್ತಿಲ್ಲ’ ಎಂದು ಹೇಳಿದರು.

ಕಾಳಜಿಯಿಲ್ಲ: ‘ಎಪಿಎಂಸಿ ಆಡಳಿತ ಮಂಡಳಿಯು ಮಂಡಿ ಮಾಲೀಕರ ಹಿತರಕ್ಷಣೆಗಾಗಿ ಬೀದಿ ಬದಿ ವ್ಯಾಪಾರಿಗಳನ್ನು ಮಾರುಕಟ್ಟೆಯಿಂದ ಹೊರ ಹಾಕಿದೆ. ಬೀದಿ ಬದಿ ವ್ಯಾಪಾರಿಗಳಿಗೆ ದಿಕ್ಕು ತೋಚದಂತಾಗಿದ್ದು, ಅವರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಮಂಡಿ ಮಾಲೀಕರ ಕೈಗೊಂಬೆಯಾಗಿರುವ ಆಡಳಿತ ಮಂಡಳಿಗೆ ಸಣ್ಣ ವ್ಯಾಪಾರಿಗಳ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಧರಣಿನಿರತರು ಕಿಡಿಕಾರಿದರು.

‘ಮಾರುಕಟ್ಟೆಗೆ ಬರುವ ರೈತರು ನೇರವಾಗಿ ಗ್ರಾಹಕರಿಗೆ ತರಕಾರಿ, ಸೊಪ್ಪು ಮಾರಾಟ ಮಾಡುತ್ತಿದ್ದರು. ಈಗ ಇದಕ್ಕೂ ಕಡಿವಾಣ ಹಾಕಲಾಗಿದೆ. ಶ್ರೀಮಂತ ಮಂಡಿ ಮಾಲೀಕರು ಮಾರುಕಟ್ಟೆ ನಿಯಮ ಉಲ್ಲಂಘಿಸಿದರೂ ಕ್ರಮ ಜರುಗಿಸದ ಆಡಳಿತ ಮಂಡಳಿ ಬಡ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ದೂಡಿದೆ. ಸಣ್ಣ ವ್ಯಾಪಾರಿಗಳಿಗೆ ಎಪಿಎಂಸಿ ಆವರಣದಲ್ಲೇ ವಹಿವಾಟು ನಡೆಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಳಿನಿಗೌಡ, ಸದಸ್ಯರಾದ ಮಂಜುನಾಥ್, ಹನುಮಯ್ಯ, ತಿಮ್ಮಣ್ಣ, ವೆಂಕಟೇಶ್, ಫಾರೂಕ್‌ ಪಾಷಾ, ಸಾಗರ್‌ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು