ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆಗೆ ವೇತನ ಪಾವತಿಸಲು ಬಿಸಿಯೂಟ ನೌಕರರ ಒತ್ತಾಯ

ತಾ.ಪಂ ಎದುರು ರಾಜ್ಯ ಅಕ್ಷರ ದಾಸೋಹ ಕ್ಷೇಮಾಭಿವೃದ್ಧಿ ಸಮಿತಿ ಸದಸ್ಯರ ಧರಣಿ
Last Updated 22 ಸೆಪ್ಟೆಂಬರ್ 2020, 14:09 IST
ಅಕ್ಷರ ಗಾತ್ರ

ಕೋಲಾರ: ಮಧ್ಯಾಹ್ನದ ಬಿಸಿಯೂಟ ನೌಕರರ ವೇತನದ ಹಣವನ್ನು ಬ್ಯಾಂಕ್‌ ಖಾತೆಗೆ ಜಮಾ ಮಾಡುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಕ್ಷೇಮಾಭಿವೃದ್ಧಿ ಸಮಿತಿ ಸದಸ್ಯರು ಇಲ್ಲಿ ಮಂಗಳವಾರ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿದರು.

‘ಬಿಸಿಯೂಟ ನೌಕರರ 3 ತಿಂಗಳ ವೇತನ ಬಾಕಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ, ಅಧಿಕಾರಿಗಳು ನೌಕರರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡದೆ ಸತಾಯಿಸುತ್ತಿದ್ದಾರೆ. ಇದರಿಂದ ನೌಕರರ ಜೀವನ ನಿರ್ವಹಣೆಗೆ ಸಮಸ್ಯೆಯಾಗಿದ್ದು, ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ವೇತನ ವಿಳಂಬವಾದರೂ ಬಿಸಿಯೂಟ ನೌಕರರು ಕೋವಿಡ್‌ ಕಾರಣಕ್ಕೆ ಹೋರಾಟ ಮಾಡಿರಲಿಲ್ಲ. ಬಡ್ಡಿ ಸಾಲ ಮಾಡಿ ಜೀವನ ನಿರ್ವಹಣೆ ಮಾಡಿದ್ದಾರೆ. ಕೊನೆಗೂ ನೌಕರರ ಕಷ್ಟಕ್ಕೆ ಸ್ಪಂದಿಸಿದ ಸರ್ಕಾರ ವೇತನ ಬಿಡುಗಡೆ ಮಾಡಿದೆ. ಆದರೆ, ಕೋಲಾರ ತಾಲ್ಲೂಕಿನಲ್ಲಿ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕರು ಇಲ್ಲದ ಕಾರಣ ವೇತನದ ಹಣ ಈವರೆಗೂ ನೌಕರರ ಕೈ ಸೇರಿಲ್ಲ’ ಎಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಸಿ.ಶಿವಣ್ಣ ಹೇಳಿದರು.

‘ಯೋಜನೆಯ ಮೇಲ್ವಿಚಾರಣೆ ಹೊಣೆ ಹೊತ್ತಿರುವ ಕೆಳ ಹಂತದ ಅಧಿಕಾರಿಗಳು ವೇತನದ ಹಣ ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ಅಧಿಕಾರಿಗಳಿಗೆ ನೌಕರರ ಕಷ್ಟದ ಅರಿವಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನೌಕರರು ತೊಂದರೆ ಅನುಭವಿಸುವಂತಾಗಿದೆ’ ಎಂದು ದೂರಿದರು.

‘ಶೀಘ್ರವೇ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಬೇಕು. ಮುಂದೆ ವೇತನ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಬೇಕು. ಸರ್ಕಾರಿ ನೌಕರರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು. ಬಿಸಿಯೂಟ ನೌಕರರ ಸೇವೆ ಕಾಯಂಗೊಳಿಸಿ ವೇತನ ಪರಿಷ್ಕರಿಸಬೇಕು’ ಎಂದು ಧರಣಿನಿರತರು ಕೋರಿದರು.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷೆ ಜ್ಯೋತಿ, ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷೆ ಮಮತಾ, ಸದಸ್ಯರಾದ ಅಮರಾವತಿ, ಶೋಭಾ, ಗಾಯತ್ರಿ, ರಾಧಮ್ಮ, ರತ್ನಮ್ಮ, ವನಿತಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT