ಶನಿವಾರ, ಆಗಸ್ಟ್ 24, 2019
21 °C
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಕ್ರಮ: ರೈತ ಸಂಘ ಆರೋಪ

ಮಾಜಿ ಸಚಿವರ ವಿರುದ್ಧ ತನಿಖೆಗೆ ಒತ್ತಾಯ

Published:
Updated:
Prajavani

ಕೋಲಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದ್ದು, ಈ ಸಂಬಂಧ ತನಿಖೆ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ನಂಜುಂಡಸ್ವಾಮಿ ಬಣ) ಸದಸ್ಯರು ಇಲ್ಲಿ ಶುಕ್ರವಾರ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ ಅವರಿಗೆ ಮನವಿ ಸಲ್ಲಿಸಿದರು.

‘ಕಾಂಗ್ರೆಸ್‌ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥ ಪೂರೈಕೆಯಲ್ಲಿ ಅಕ್ರಮ ನಡೆದಿದೆ’ ಎಂದು ಸಂಘಟನೆ ಸದಸ್ಯರು ದೂರಿದರು.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆಯಾಗಿದ್ದ ಉಮಾಶ್ರೀಯವರು ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ಈ ಇಲಾಖೆ ಸಚಿವರಾಗಿದ್ದ ಜಯಮಾಲಾ ಅವರು ಆಹಾರ ಪದಾರ್ಥ ಗುತ್ತಿಗೆದಾರರಿಂದ ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದಾರೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮುಶಿವಣ್ಣ ಆರೋಪಿಸಿದರು.

‘ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥ ಸರಬರಾಜು ಮಾಡುವ ಗುತ್ತಿಗೆ ಪಡೆಯಲು ಎಸ್.ಆರ್.ಶಿವಕುಮಾರ್‌ ಎಂಬ ಗುತ್ತಿಗೆದಾರ ಉಮಾಶ್ರೀ, ಜಯಮಾಲಾ ಹಾಗೂ ಅಧಿಕಾರಿಗಳಿಗೆ ಲಂಚ ಕೊಟ್ಟಿದ್ದರು. ಜಯಮಾಲಾ ಅವರು ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಆದರೆ, ಶಿವಕುಮಾರ್‌ ಅಷ್ಟು ಹಣ ಕೊಡದಿದ್ದರಿಂದ ಜಯಮಾಲಾ ಅವರು ಬೇರೆಯವರಿಗೆ ಗುತ್ತಿಗೆ ನೀಡಲು ಮುಂದಾಗಿದ್ದರು’ ಎಂದು ಹೇಳಿದರು.

‘ಅಧಿಕಾರಿಗಳು ಹಾಗೂ ಸಚಿವರ ಕಿರುಕುಳದಿಂದ ಬೇಸರಗೊಂಡ ಶಿವಕುಮಾರ್‌ ಆತ್ಮಹತ್ಯೆಗೆ ಯತ್ನಿಸಿದ್ದರು. ಅಲ್ಲದೇ, ತಮ್ಮ ಸಾವಿಗೆ ಉಮಾಶ್ರೀ, ಜಯಮಾಲಾ ಹಾಗೂ ಅಧಿಕಾರಿಗಳೇ ಕಾರಣ ಎಂದು ಆರೋಪ ಮಾಡಿದ ವಿಡಿಯೋ ಚಿತ್ರೀಕರಿಸಿ ಮಾಧ್ಯಮಗಳಿಗೆ ಕೊಟ್ಟಿದ್ದರು. ಇದೀಗ ಆ ವಿಡಿಯೋ ಬಹಿರಂಗಗೊಂಡಿದ್ದು, ಉಮಾಶ್ರೀ, ಜಯಮಾಲಾ ಹಾಗೂ ಅಧಿಕಾರಿಗಳ ಭ್ರಷ್ಟಾಚಾರ ಬಯಲಾಗಿದೆ’ ಎಂದರು.

ಅಧಿಕಾರಿಗಳು ಶಾಮೀಲು: ‘ಅಂಗನವಾಡಿಗಳಿಗೆ ಆಹಾರ ಪದಾರ್ಥ ಪೂರೈಸುವ ಗುತ್ತಿಗೆಯನ್ನು ಸುಮಾರು 15 ವರ್ಷಗಳಿಂದ ಒಬ್ಬರೇ ಗುತ್ತಿಗೆದಾರರಿಗೆ ನೀಡಲಾಗುತ್ತದೆ. ಆ ಗುತ್ತಿಗೆದಾರರು ಕಳಪೆ ಆಹಾರ ಪದಾರ್ಥ ಪೂರೈಸಿ ಮಕ್ಕಳಿಗೆ ಹಾಗೂ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಇಲಾಖೆ ಅಧಿಕಾರಿಗಳೂ ಆ ಗುತ್ತಿಗೆದಾರನ ಜತೆ ಶಾಮೀಲಾಗಿದ್ದಾರೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಕಿಡಿಕಾರಿದರು.

‘ಆಹಾರ ಪದಾರ್ಥ ಸರಬರಾಜು ಪ್ರಕ್ರಿಯೆಯಲ್ಲಿನ ಅಕ್ರಮದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿ ತನಿಖೆಗೆ ಆದೇಶಿಸಬೇಕು. ಉಮಾಶ್ರೀ ಹಾಗೂ ಜಯಮಾಲಾ ಅವರ ವಿರುದ್ಧವೂ ತನಿಖೆ ನಡೆಸಬೇಕು’ ಎಂದು ಸಂಘಟನೆ ಸದಸ್ಯರು ಒತ್ತಾಯಿಸಿದರು.

ಸಂಘಟನೆಯ ಶ್ರೀನಿವಾಸಪುರ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರಪ್ಪ, ಕೋಲಾರ ನಗರ ಕಾರ್ಮಿಕ ಘಟಕದ ಸಂಚಾಲಕ ಜಬಿವುಲ್ಲಾ ಖಾನ್, ಸದಸ್ಯ ಸೈಯ್ಯದ್‌ ಫಿರ್ದೋಸ್‌ ಹಾಜರಿದ್ದರು.

Post Comments (+)