ಭಾನುವಾರ, ಫೆಬ್ರವರಿ 28, 2021
29 °C
ತೋರದೇವಂಡಹಳ್ಳಿ ಗ್ರಾ.ಪಂ ಎದುರು ಧರಣಿ

ಸಮಸ್ಯೆ ಬಗೆಹರಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಾಲ್ಲೂಕಿನ ತೊರದೇವಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ನಿವಾರಣೆ ಮಾಡಲು ಅಧಿಕಾರಿಗಳು ಒತ್ತು ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪಂಚಾಯಿತಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್‌ ಮಾತನಾಡಿ, ‘ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ, ಇ ಸ್ವತ್ತು, ಬೀದಿ ದೀಪ ಸಮಸ್ಯೆಗಳಿದ್ದು, ಬಗೆಹರಿಸುವಂತೆ ಸುಮಾರು ದಿನಗಳಿಂದ ಒತ್ತಾಯಿಸುತ್ತಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ನಿವೇಶನ ರಹಿತರಿಗೆ, ವಸತಿ ರಹಿತರಿಗೆ ವಸತಿ ಹಂಚಿಕೆ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ’ ಎಂದು ದೂರಿದರು.

‘ರಾಜ್ಯದಲ್ಲಿ ಅಧಿಕಾರ ವಿಕೇಂದ್ರೀಕರಣದ ಭಾಗವಾಗಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡಿ ಗ್ರಾಮೀಣಾಭಿವೃದ್ಧೀಗೆ ಒತ್ತು ನೀಡಲಾಗಿದೆ. ಯೋಜನೆಗಳನ್ನು ಫಲಾನುಭವಿಗಳಿಗೆ ಕಲ್ಪಿಸುವ ಪ್ರಯತ್ನ ಮಾಡಬೇಕು. ಪಂಚಾಯಿತಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡದೇ ಇರುವುದರಿಂದ ಸಾರ್ವಜನಿಕ ಕೆಲಸಗಳಿಗೆ ದಿನನಿತ್ಯ ಅಲೆದಾಡುವಂತಾಗಿದೆ’ ಎಂದು ಆರೋಪಿಸಿದರು.

‘ಗ್ರಾಮಗಳಲ್ಲಿನ ಬಡವರು ಮನೆ ನಿರ್ಮಿಸಿಕೊಳ್ಳಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅಂತಹವರಿಗೆ ಮನೆ ಮಂಜೂರು ಮಾಡಿ ಸಮಯಕ್ಕೆ ಸರಿಯಾಗಿ ಜಿಪಿಎಸ್ ಮಾಡಿ ಹಂತಹಂತವಾಗಿ ಅನುದಾನ ಬಿಡುಗಡೆ ಮಾಡಬೇಕು, ಗ್ರಾಮೀಣ ಭಾಗದಲ್ಲಿ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಲು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ದಿಗೆ ಮೀಸಲಿಟ್ಟಿರುವ ಶೇ.24ರ ಹಣವನ್ನು ಸಮರ್ಪಕವಾಗಿ ಉಪಯೋಗಿಸಬೇಕು. ಕಸ ವಿಲೇವಾರಿ ಮಾಡಿ ಸಾಂಕ್ರಮಿಕ ರೋಗಗಳ ನಿರ್ಮೂಲನೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಉದ್ಯೋಗ ಖಾರತಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಾಲಕಾಲಕ್ಕೆ ವೇತನ ಪಾವತಿ ಮಾಡಬೇಕು. ಕಾರ್ಮಿಕರಿಗೆ ಕೂಲಿ ಹಣ ನೀಡದೆ ವಂಚಿಸುತ್ತಿರುವ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಬೇಕು. ಫ್ಲೋರೈಡ್ ಸಮಸ್ಯೆ ಇರುವ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ಕಡ್ಡಾಯವಾಗಿ ಅಳವಡಿಸಬೇಕು, ದುರಸ್ತಿಗೆ ಬಂದಿರುವ ಘಟಕಗಳನ್ನು ಸರಿಪಡಬೇಕು’ ಎಂದು ಒತ್ತಾಯಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎನ್.ಶ್ರೀರಾಮ್, ಗೌರವಾಧ್ಯಕ್ಷ ದೇವರಾಜ್, ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಸದಸ್ಯರಾದ ಎಸ್.ರಮೇಶ್, ಗಂಗಮ್ಮ, ರಾಮರೆಡ್ಡಿ, ವೆಂಕಟೇಶಪ್ಪ , ಎಚ್.ಎಂ.ಅಂಜಿನಪ್ಪ, ದಸ್ತಾಗರಿ, ಸುಶೀಲಮ್ಮ, ಸಿ.ನಾಗರಾಜ್ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.