ಭಾನುವಾರ, ಏಪ್ರಿಲ್ 11, 2021
32 °C

ವಕೀಲರ ಸಂರಕ್ಷಣಾ ಕಾಯ್ದೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿ ಜಿಲ್ಲಾ ವಕೀಲರ ಸಂಘದ ಸದಸ್ಯರು ಇಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ನ್ಯಾಯಾಂಗದ ಭಾಗವಾಗಿ ಸಂವಿಧಾನದ ಅಡಿ ಕಾರ್ಯ ನಿರ್ವಹಿಸುತ್ತಿರುವ ವಕೀಲರಿಗೆ ರಕ್ಷಣೆ ಇಲ್ಲವಾಗಿದೆ. ದೇಶದಲ್ಲಿ ವಕೀಲರ ಮೇಲೆ ಪದೇಪದೇ ಹಲ್ಲೆ, ದೌರ್ಜನ್ಯ ನಡೆಯುತ್ತಿದೆ. ಇದರಿಂದ ವಕೀಲರ ಜೀವ ಭಯದಲ್ಲಿ ಕೆಲಸ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಸರ್ಕಾರಗಳು ವಕೀಲರ ಸುರಕ್ಷತೆ ನಿರ್ಲಕ್ಷಿಸಿವೆ’ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದ ವಿಜಯನಗರ ಜಿಲ್ಲೆ ಮತ್ತು ತೆಲಂಗಾಣದಲ್ಲಿ ವಕೀಲರ ಹತ್ಯೆ ನಡೆದಿರುವುದು ಖಂಡನೀಯ. ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ವಕೀಲರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಇತ್ತೀಚೆಗೆ ಅಪಹರಣವಾಗಿದ್ದ ವಕೀಲರೊಬ್ಬರು ಈವರೆಗೂ ಪತ್ತೆಯಾಗಿಲ್ಲ. ಆದರೂ ಸರ್ಕಾರಗಳು ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸದಿರುವುದು ದುರಂತ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್ ಕಳವಳ ವ್ಯಕ್ತಪಡಿಸಿದರು.

‘ಎಲ್ಲಾ ವೃತ್ತಿನಿರತರಿಗೆ ರಕ್ಷಣೆ ಇದೆ. ಆದರೆ, ವಕೀಲರಿಗೆ ರಕ್ಷಣೆ ಇಲ್ಲವಾಗಿದೆ. ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಭರದಲ್ಲಿ ವಕೀಲರು ಅವರ ರಕ್ಷಣೆ ಮರೆತು ಹೋಗುತ್ತಿದ್ದಾರೆ. ಸರ್ಕಾರ ಹಾಗೂ ಪೊಲೀಸ್‌ ಇಲಾಖೆಯಿಂದ ವಕೀಲರಿಗೆ ರಕ್ಷಣೆ ಕೊಡಲು ಸಾಧ್ಯವಾಗುತ್ತಿಲ್ಲ’ ಎಂದು ಕಿಡಿಕಾರಿದರು.

ಸದನದಲ್ಲಿ ಮಂಡಿಸಿ: ‘ಕಾನೂನಿನ ಅಡಿಯಲ್ಲಿ ವಕೀಲರಿಗೆ ರಕ್ಷಣೆ ಸಿಗಬೇಕು. ಸರ್ಕಾರ ಈ ಬಗ್ಗೆ ಗಮನ ಹರಿಸಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಸದನದಲ್ಲಿ ಮಂಡಿಸಿ ಶೀಘ್ರವೇ ಕಾನೂನು ಜಾರಿಗೆ ತರಬೇಕು. ವೈದ್ಯಕೀಯ ಕ್ಷೇತ್ರದಂತೆ ವಕೀಲರ ಮಾನ, ಪ್ರಾಣ, ಆಸ್ತಿ ಹಾನಿಗೆ ಪರಿಹಾರ ಒದಗಿಸುವ ಕಾನೂನು ರೂಪಿಸಬೇಕು. ವಕೀಲರ ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಹತ್ಯೆಯಾದ ವಕೀಲರ ಕುಟುಂಬ ಸದಸ್ಯರಿಗೆ ಪರಿಹಾರ ನೀಡಬೇಕು’ ಎಂದು ಧರಣಿನಿರತರು ಒತ್ತಾಯಿಸಿದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಘುಪತಿಗೌಡ, ಜಿಲ್ಲಾ ಸರ್ಕಾರಿ ಅಭಿಯೋಜಕ ಮಾಗೇರಿ ನಾರಾಯಣಸ್ವಾಮಿ, ವಕೀಲರಾದ ಚೌಡೇಗೌಡ, ಲೋಕೇಶ್, ಸುಮನ್, ಎ.ವಿ.ಆನಂದ್, ವೆಂಕಟರೆಡ್ಡಿ, ರಮೇಶ್ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು