ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಮಾಲರಿಗೆ ಪಾಸ್‌ ವಿತರಿಸಿ: ಡಿ.ಸಿ

ಲಾಕ್‌ಡೌನ್‌ ಹಿನ್ನೆಲೆ: ಎಪಿಎಂಸಿಗೆ ಬರಲು ಸಮಸ್ಯೆ ಸಾಧ್ಯತೆ
Last Updated 9 ಮೇ 2021, 14:46 IST
ಅಕ್ಷರ ಗಾತ್ರ

ಕೋಲಾರ: ‘ಲಾಕ್‌ಡೌನ್‌ ಸಂದರ್ಭದಲ್ಲೂ ರೈತರ ಹಿತದೃಷ್ಟಿಯಿಂದ ಎಪಿಎಂಸಿ ತೆರೆಯಲು ಸರ್ಕಾರ ಅವಕಾಶ ನೀಡಿದ್ದು, ಕೋವಿಡ್‌ ಮಾರ್ಗಸೂಚಿ ಪಾಲನೆಯೊಂದಿಗೆ ಎಪಿಎಂಸಿಗಳಲ್ಲಿ ವಹಿವಾಟು ನಡೆಸಬೇಕು’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಶನಿವಾರ ಎಪಿಎಂಸಿ ನಿರ್ದೇಶಕರು, ವರ್ತಕರು, ಹಮಾಲಿಗಳ ಸಂಘದ ಸದಸ್ಯರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದ ಜಿಲ್ಲಾಧಿಕಾರಿ, ‘ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಪಿಎಂಸಿಗಳಲ್ಲಿ ಹಮಾಲರ ಕೆಲಸಕ್ಕೆ ಸಮಸ್ಯೆಯಾಗದಂತೆ ಅವರಿಗೆ ಶೀಘ್ರವೇ ಪಾಸ್‌ ವಿತರಣೆ ಮಾಡಿ’ ಎಂದು ತಿಳಿಸಿದರು.

‘ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದೆಲ್ಲೆಡೆ ಸೋಮವಾರದಿಂದ (ಮೇ 10) ಅನ್ವಯವಾಗುವಂತೆ ಲಾಕ್‌ಡೌನ್‌ ಜಾರಿಗೊಳಿಸಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆ ನಂತರ ಜನರ ಓಡಾಟ ನಿರ್ಬಂಧಿಸಿದ್ದು, ಪೊಲೀಸರು ರಸ್ತೆಗೆ ಬರುವ ವಾಹನಗಳು ಮತ್ತು ಜನರನ್ನು ತಪಾಸಣೆ ಮಾಡುತ್ತಾರೆ. ಇದರಿಂದ ಹಮಾಲರ ಓಡಾಟಕ್ಕೆ ಸಮಸ್ಯೆಯಾಗುವ ಸಾಧ್ಯತೆಯಿದೆ’ ಎಂದರು.

‘ಹಮಾಲರು ಕೆಲಸಕ್ಕೆ ಬಾರದಿದ್ದರೆ ಎಪಿಎಂಸಿಗಳಲ್ಲಿ ವಹಿವಾಟಿಗೆ ತೊಂದರೆಯಾಗುತ್ತದೆ. ಕೃಷಿ ಉತ್ಪನ್ನಗಳ ಮಾರಾಟವಾಗದೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ಹಮಾಲಿಗಳಿಗೆ ಪಾಸ್‌ ವಿತರಿಸಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಹಮಾಲರಿಗೆ ರಸ್ತೆಗಳಲ್ಲಿ ತೊಂದರೆ ಆಗುತ್ತಿರುವುದರಿಂದ ಅನೇಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಮಾಲರು ಬಾರದಿದ್ದರೆ ತರಕಾರಿ ಲೋಡಿಂಗ್ ಮತ್ತು ಅನ್‌ಲೋಡಿಂಗ್‌ ನಡೆಯುವುದಿಲ್ಲ. ಈಗಾಗಲೇ ಸಾಕಷ್ಟು ಹಮಾಲಿಗಳು ರಜೆ ಪಡೆದು ಮನೆಗಳಲ್ಲೇ ಉಳಿದಿದ್ದಾರೆ’ ಎಂದು ವರ್ತಕರ ಸಂಘದ ಸದಸ್ಯರು ಹೇಳಿದರು.

‘ಕೋವಿಡ್‌ ಕಾರಣಕ್ಕೆ ಮಂಡಿಗಳಿಗೆ ಬರಲು ನಮಗೂ ಭಯವಾಗುತ್ತಿದೆ. ಆದರೂ ರೈತರ ಹಿತದೃಷ್ಟಿಯಿಂದ ಬರುತ್ತಿದ್ದೇವೆ. ಈಗಾಗಲೇ ಟೊಮೆಟೊ ಸುಗ್ಗಿ ಆರಂಭವಾಗಿದ್ದು, ರಂಜಾನ್ ಬಳಿಕ ಆವಕ ಹೆಚ್ಚಳವಾಗುವ ಸಾಧ್ಯತೆಯಿದೆ. ಇದರಿಂದ ಹಮಾಲರ ಸಂಖ್ಯೆಯೂ ಹೆಚ್ಚಳವಾಗಲಿದ್ದು, ಅವರ ಓಡಾಟಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಮಾರುಕಟ್ಟೆ ವ್ಯವಸ್ಥೆ: ವರ್ತಕರ ಸಂಘದ ಸದಸ್ಯರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಹಮಾಲಿಗಳ ಓಡಾಟಕ್ಕೆ ತಡೆಯೊಡ್ಡದಂತೆ ಪೊಲೀಸರಿಗೆ ಸೂಚಿಸುತ್ತೇವೆ. ಜಿಲ್ಲೆಯ ರೈತರು ಉತ್ತಮವಾಗಿ ಬೆಳೆ ಬೆಳೆದಿದ್ದು, ಅವರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ನಮ್ಮ ಜವಾಬ್ದಾರಿ. ಸಣ್ಣಪುಟ್ಟ ಸಮಸ್ಯೆ ಬಗೆಹರಿಸೋಣ. ಮೊದಲಿಗೆ ಹಮಾಲರ ಓಡಾಟಕ್ಕೆ ಪಾಸ್‌ ನೀಡುವ ಕೆಲಸ ಎಪಿಎಂಸಿ ಅಧಿಕಾರಿಗಳು ಮಾಡಬೇಕು’ ಎಂದು ತಿಳಿಸಿದರು.

‘ಹಮಾಲಿಗಳು ಪಾಸ್‌ ದುರ್ಬಳಕೆ ಮಾಡಿಕೊಳ್ಳಬಾರದು. ಪಾಸ್ ಬಳಸಿ ಎಪಿಎಂಸಿ ಬಿಟ್ಟು ಬೇರೆಡೆಗೆ ಓಡಾಡಿ ಪೊಲೀಸರಿಗೆ ಸಿಕ್ಕಿಬಿದ್ದು ತೊಂದರೆಗೆ ಒಳಗಾಗುವುದು ಬೇಡ. ಪಾಸ್‌ಗಳನ್ನು ಮಾರುಕಟ್ಟೆಗೆ ಬರುವ ಉದ್ದೇಶಕ್ಕೆ ಮಾತ್ರ ಬಳಸಬೇಕು’ ಎಂದು ಎಚ್ಚರಿಕೆ ನೀಡಿದರು.

ಎಪಿಎಂಸಿ ಉಪಾಧ್ಯಕ್ಷ ವೆಂಕಟೇಶಪ್ಪ, ಕಾರ್ಯದರ್ಶಿ ಟಿ.ಎಸ್.ರವಿಕುಮಾರ್, ಎಪಿಎಂಸಿ ವರ್ತಕರ ಸಂಘದ ಸದಸ್ಯರಾದ ದೇವರಾಜ್, ಮಾಜಿದ್‌, ಹಮಾಲಿಗಳ ಸಂಘದ ಅಧ್ಯಕ್ಷ ಬಾಬು, ಮಂಡಿ ಮಾಲೀಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT