ಬುಧವಾರ, ಮೇ 18, 2022
23 °C

ದೇವರಾಜ ಅರಸು ಶಿಕ್ಷಣ ಟ್ರಸ್ಟ್‌ ಅಧ್ಯಕ್ಷಗಾದಿ ವಿವಾದಕ್ಕೆ ತಿರುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಶ್ರೀ ದೇವರಾಜ ಅರಸು ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷಗಾದಿ ವಿವಾದವು ಮಂಗಳವಾರ ಮಹತ್ವದ ತಿರುವು ಪಡೆದಿದ್ದು, ಕೇಂದ್ರದ ಮಾಜಿ ಸಚಿವ ದಿವಂಗತ ಆರ್‌.ಎಲ್‌.ಜಾಲಪ್ಪರ ಕಿರಿಯ ಪುತ್ರ ಆರ್‌.ರಾಜೇಂದ್ರ ಅವರು ಟ್ರಸ್ಟ್‌ನ ನೂತನ ಅಧ್ಯಕ್ಷ ಜಿ.ಎಚ್‌.ನಾಗರಾಜ್‌ ನೇತೃತ್ವದ ಆಡಳಿತ ಮಂಡಳಿಯಲ್ಲಿ ಗುರುತಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು.

ಜಾಲಪ್ಪರ ದೂರದ ಸಂಬಂಧಿಯಾದ ನಾಗರಾಜ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಜಾಲಪ್ಪರ ಕುಟುಂಬ ಸದಸ್ಯರು ಹಾಗೂ ಅವರ ಬೆಂಬಲಿಗರು ಇಲ್ಲಿ ಸೋಮವಾರ ಟ್ರಸ್ಟ್‌ನ ಆವರಣದಲ್ಲಿ ಬೃಹತ್‌ ಪ್ರತಿಭಟನೆ ಮಾಡಿದ್ದರು. ಜಾಲಪ್ಪರ ಹಿರಿಯ ಪುತ್ರ ಹಾಗೂ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ನೇತೃತ್ವದಲ್ಲಿ ಕುಟುಂಬ ಸದಸ್ಯರು ತುರ್ತು ಸಭೆ ನಡೆಸಿ ಟ್ರಸ್ಟ್‌ಗೆ ಹೊಸ ಆಡಳಿತ ಮಂಡಳಿ ರಚಿಸಿರುವುದಾಗಿ ಘೋಷಿಸಿದ್ದರು.

ನಾಗರಾಜ್‌ ಅವರ ನೇತೃತ್ವದ ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿರುವ ಜೆ.ರಾಜೇಂದ್ರ ಅವರು ಕುಟುಂಬ ಸದಸ್ಯರೊಂದಿಗೆ ಗುರುತಿಸಿಕೊಳ್ಳದೆ ಸೋಮವಾರದ ಬೆಳವಣಿಗೆಗಳಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ, ಮಂಗಳವಾರ ನಾಗರಾಜ್ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಶ್ರೀ ದೇವರಾಜ ಅರಸು ಟ್ರಸ್ಟ್‌ ಕುಟುಂಬದ ಟ್ರಸ್ಟ್‌ ಅಲ್ಲ. ಇದು ಹಿಂದುಳಿದ ವರ್ಗಗಳ ಚಾರಿಟಬಲ್‌ ಟ್ರಸ್ಟ್‌. ಕುಟುಂಬ ಸದಸ್ಯರು ಈ ಸಂಗತಿ ತಿಳಿಯದೆ ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನನ್ನಣ್ಣ ನರಸಿಂಹಸ್ವಾಮಿ ಅವರಿಗೆ ತಂದೆಯವರು ಟ್ರಸ್ಟ್‌ನ ಅಧ್ಯಕ್ಷ ಸ್ಥಾನದ ವಿಲ್ ಮಾಡಿದ್ದು ನಿಜ, ಆದರೆ, ಅಣ್ಣ ಬಿಜೆಪಿ ಸೇರ್ಪಡೆಯ ರಾಜಕೀಯ ನಿರ್ಧಾರ ಕೈಗೊಂಡಾಗ ಜಾತ್ಯತೀತ ಮನೋಭಾವದ ನನ್ನ ತಂದೆ ಮನನೊಂದು ವಿಲ್ ಬದಲಿಸಿದರು’ ಎಂದು ಸ್ಪಷ್ಟಪಡಿಸಿದರು.

‘ಟ್ರಸ್ಟ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಟ್ರಸ್ಟ್‌ ಮತ್ತು ನಮ್ಮ ಕುಟುಂಬದಲ್ಲಿ ಆಗುತ್ತಿರುವ ವ್ಯತ್ಯಾಸಗಳ ಬಗ್ಗೆ ಚರ್ಚಿಸಿದ್ದೆವು. ಅವರು ವಕೀಲರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸೋಣ ಎಂದಿದ್ದರು. ಬೈಲಾ ತಿದ್ದುಪಡಿ ಮೂಲಕ ನಮ್ಮ ಕುಟುಂಬದ ಇಬ್ಬರನ್ನು ಶಾಶ್ವತ ಟ್ರಸ್ಟಿಗಳಾಗಿ ತೆಗೆದುಕೊಳ್ಳಲು ಪ್ರಯತ್ನ ನಡೆಸಿದ್ದೆವು. ಅಷ್ಟರೊಳಗೆ ಅಣ್ಣ ನರಸಿಂಹಸ್ವಾಮಿ ಮತ್ತು ಸಹೋದರಿಯರು ಪ್ರತಿಭಟನೆ ಮಾಡಿರುವುದು ನೋವಿನ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.