ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಸೇರ್ಪಡೆ ಸತ್ಯಕ್ಕೆ ದೂರ: ಮಾಜಿ ಶಾಸಕ ವರ್ತೂರು ಪ್ರಕಾಶ್‌ ಸ್ಪಷ್ಟನೆ

Last Updated 30 ಜುಲೈ 2021, 17:23 IST
ಅಕ್ಷರ ಗಾತ್ರ

ಕೋಲಾರ: ‘ನನಗೆ ಕಾಂಗ್ರೆಸ್‌ ಮೇಲೆ ಇರುವಷ್ಟು ನಂಬಿಕೆ ಬೇರೆ ಪಕ್ಷಗಳ ಮೇಲೆ ಇಲ್ಲ. ನಾನು ಜೆಡಿಎಸ್‌ ಪಕ್ಷಕ್ಕೆ ಸೇರುತ್ತೇನೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ಸ್ಪಷ್ಟಪಡಿಸಿದರು.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಸಿದ್ಧತೆ ಸಂಬಂಧ ಇಲ್ಲಿ ಶುಕ್ರವಾರ ಬೆಂಬಲಿಗರ ಜತೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸುವ ಬಗ್ಗೆ ಇನ್ನು ನಿರ್ಧರಿಸಿಲ್ಲ. ಚುನಾವಣೆಗೆ ಸ್ಪರ್ಧಿಸಿದರೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆಯೇ ಹೊರತು ಬೇರೆ ಪಕ್ಷಗಳಿಗೆ ಹೋಗುವುದಿಲ್ಲ’ ಎಂದು ತಿಳಿಸಿದರು.

‘ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಸೇರುವ ಸಂಬಂಧ ಏಳೆಂಟು ಬಾರಿ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಚರ್ಚಿಸಲಾಗಿದ್ದು, ಅಂತಿಮ ತೀರ್ಮಾನವಾಗಿಲ್ಲ. ಮುನಿಯಪ್ಪ ಅವರು ಇಷ್ಟು ದಿನ ಸಿದ್ದರಾಮಯ್ಯ ಅವರ ಸಮ್ಮತಿ ಬೇಕೆಂದು ಹೇಳುತ್ತಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಳ್ಳಲು ಶೇ 95ರಷ್ಟು ಒಪ್ಪಿದ್ದಾರೆ. ಆದರೆ, ಮುನಿಯಪ್ಪ ಸಮ್ಮತಿಸುತ್ತಿಲ್ಲ’ ಎಂದರು.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಶಾಸಕ ರಮೇಶ್‌ಕುಮಾರ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಮತ್ತೊಮ್ಮೆ ಮುನಿಯಪ್ಪರನ್ನು ಭೇಟಿಯಾಗಿ ಚರ್ಚಿಸುತ್ತೇನೆ. ನನ್ನನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವ ವಿಶ್ವಾಸವಿದೆ. ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 4 ಜಿ.ಪಂ ಕ್ಷೇತ್ರಗಳಲ್ಲಿ ನನ್ನ ಬಣದ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನ ಬೇಸತ್ತಿದ್ದಾರೆ: ‘ಶ್ರೀನಿವಾಸಗೌಡರ ಆಡಳಿತದಿಂದ ಕ್ಷೇತ್ರದ ಜನ ಬೇಸತ್ತಿದ್ದಾರೆ. ಮೂರು ವರ್ಷದ ಆಡಳಿತದಲ್ಲಿ ಅವರ ಸಾಧನೆ ಶೂನ್ಯ. ತಾಲ್ಲೂಕಿನಲ್ಲಿ 204 ಮಂದಿ ಗ್ರಾ.ಪಂ ಸದಸ್ಯರು ನನ್ನ ಬಣದವರೇ ಆಯ್ಕೆಯಾಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಿಂದಿನ ಚುನಾವಣೆಗಿಂತ 10 ಪಟ್ಟು ಹೆಚ್ಚು ಮತ ಪಡೆಯುತ್ತೇನೆ’ ಎಂದು ಹೇಳಿದರು.

‘ನಾನು ಶಾಸಕನಾಗಿದ್ದ ಅವಧಿಯ ಹಾಗೂ ಶ್ರೀನಿವಾಸಗೌಡರು ಶಾಸಕರಾದ ನಂತರ ಮಾಡಿದ ಅಭಿವೃದ್ದಿ ಕಾರ್ಯಗಳನ್ನು ಜನ ಗಮನಿಸುತ್ತಿದ್ದಾರೆ. ಮುಂದೆ ನಮಗೆ ಒಳ್ಳೆಯ ಕಾಲ ಬರಲಿದೆ. ಕ್ಷೇತ್ರದಲ್ಲಿ ನನಗೆ ಶ್ರೀನಿವಾಸಗೌಡರು ಮಾತ್ರ ಪ್ರತಿಸ್ಪರ್ಧಿಯೇ ಹೊರತು ಬೇರೆ ಯಾರೂ ಸ್ಪರ್ಧಿಯಾಗಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಶ್ರೀನಿವಾಸಗೌಡರು ಮತ್ತು ನನ್ನ ನಡುವೆ ಮಾತ್ರ ಜಿದ್ದಾಜಿದ್ದಿನ ಸ್ಪರ್ಧೆ’ ಎಂದರು.

ಮೀಸಲಾತಿ ತಾರತಮ್ಯ: ‘ಜಿ.ಪಂ ಮತ್ತು ತಾ.ಪಂ ಚುನಾವಣೆ ಮೀಸಲಾತಿ ನಿಗದಿಯಲ್ಲಿ ಸರ್ಕಾರ ತಾರತಮ್ಯ ಮಾಡಿದೆ. ಎಲ್ಲಾ ಜಾತಿಗಳಿಗೆ ಸಮಾನತೆ ನೀಡಿಲ್ಲ, ಸಾಮಾಜಿಕ ನ್ಯಾಯ ಲ್ಪಿಸುವಂತೆ ಮೀಸಲಾತಿ ನಿಗದಿಪಡಿಸದೆ ಅನ್ಯಾಯ ಮಾಡಿದೆ’ ಎಂದು ದರಖಾಸ್ತು ಸಮಿತಿ ಮಾಜಿ ಅಧ್ಯಕ್ಷ ಬೆಗ್ಲಿ ಪ್ರಕಾಶ್ ದೂರಿದರು.

‘ವರ್ತೂರು ಪ್ರಕಾಶ್‌ ಅವರು ಮುನಿಯಪ್ಪ ಪರ ಕಳೆದ 3 ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಮುನಿಯಪ್ಪರ ಕಾರಣಕ್ಕೆ ಒಳಚರಂಡಿ ಹಾಗೂ ನೀರಾವರಿ ನಿಗಮದ ಅಧ್ಯಕ್ಷ ಸ್ಥಾನ ಕಳೆದುಕೊಂಡರೂ ಚಿಂತಿಸದೆ ಕೊಟ್ಟ ಮಾತು ಉಳಿಸಿಕೊಂಡರು. ಆದರೆ, ಮುನಿಯಪ್ಪ ಅವರು ಕಾಂಗ್ರೆಸ್‌ನಲ್ಲಿ ವರ್ತೂರು ಪ್ರಕಾಶ್‌ಗೆ ಟಿಕೆಟ್ ಸಿಗದಂತೆ ಮಾಡಿ ವಂಚಿಸಿದರು’ ಎಂದು ಆರೋಪಿಸಿದರು.

ಜಿ.ಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್‌, ಮಾಜಿ ಸದಸ್ಯ ಅರುಣ್‌ಪ್ರಸಾದ್, ತಾ.ಪಂ ಮಾಜಿ ಅಧ್ಯಕ್ಷ ಎಂ.ಆಂಜಿನಪ್ಪ ಹಾಗೂ ಬೆಂಬಲಿಗರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT