ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: 3 ದಿನಗಳಿಂದ ಮಳೆ, ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನುಗ್ಗಿದ ನೀರು

Published 8 ಮೇ 2024, 22:48 IST
Last Updated 8 ಮೇ 2024, 22:48 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ವಿವಿಧೆಡೆ ಮಂಗಳವಾರ ತಡರಾತ್ರಿಯಿಂದ ಬುಧವಾರ ಬೆಳಗಿನ ಜಾವದವರೆಗೂ ಧಾರಾಕಾರ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. 

ಮೂರು ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಕೆಜಿಎಫ್‌, ಮುಳಬಾಗಿಲು ಭಾಗದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜಮೀನುಗಳೂ ಜಲಾವೃತಗೊಂಡಿವೆ. ಇನ್ನು ಕೆಲವೆಡೆ ಬಿರುಗಾಳಿ ಸಹಿತ ಮಳೆಗೆ ಮನೆ ಹಾಗೂ ವಾಣಿಜ್ಯ ಮಳಿಗೆಗಳ ತಗಡಿನ ಚಾವಣಿ ಹಾರಿ ಹೋಗಿದ್ದು, ವಿದ್ಯುತ್‌ ಸಂಪರ್ಕ ಕಡಿದು ಹೋಗಿದೆ.  

ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿಯಲ್ಲಿ 13.4 ಸೆಂ.ಮೀ. (134 ಮಿ.ಮೀ.) ಮಳೆಯಾಗಿದ್ದು, ಜಿಲ್ಲೆಯಲ್ಲಿಯೇ ಅತ್ಯಧಿಕ ಮಳೆ ಬಿದ್ದ ಪ್ರದೇಶವಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ಕೆಜಿಎಫ್‌ ನಗರದಲ್ಲಿ ಬುಧವಾರ ಮುಂಜಾನೆ ಸುರಿದ ಧಾರಾಕಾರ ಮಳೆಯಿಂದ ನೂರಾರು
ಮನೆಗಳಿಗೆ ನೀರು ನುಗ್ಗಿದ್ದು ಭಾರಿ ಪ್ರಮಾಣದ ಹಾನಿ ಉಂಟಾಗಿದೆ.

ನಗರದ ಮೈನಿಂಗ್‌ ಪ್ರದೇಶದ ತಗ್ಗು ಪ್ರದೇಶ, ಊರಿಗಾಂಪೇಟೆ, ಫಿಶ್‌ಲೈನ್‌ನಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ದವಸ ಧಾನ್ಯ ಹಾಳಾಗಿವೆ. ರಾತ್ರಿಯಿಡೀ ನಿದ್ದೆಗೆಟ್ಟ ನಿವಾಸಿಗಳು ಮನೆಯೊಳಗೆ ನುಗ್ಗಿದ ನೀರನ್ನು ಹೊರ ಹಾಕಿದರು.  

ಊರಿಗಾಂಪೇಟೆಯ ಮುಖ್ಯರಸ್ತೆಯಲ್ಲಿ ರಾಜಕಾಲುವೆ ಒಂದು ಭಾಗ ನೆಲಕ್ಕುರಳಿದ ಕಾರಣ ಮಳೆ ನೀರು ಬಡಾವಣೆಗಳಿಗೆ ನುಗ್ಗಿದೆ. ಹಲವಾರು ಅಂಗಡಿ, ಮನೆಗಳು ನೀರಿನಲ್ಲಿ ನಿಂತಿವೆ.

8.4 ಸೆಂ.ಮೀ ಮಳೆ

ಶ್ರೀನಿವಾಸಪುರ ತಾಲ್ಲೂಕಿನ ರೋಣೂರಿನಲ್ಲಿ 8.4 ಸೆಂ.ಮೀ., ಗೌನಿಪಲ್ಲಿಯಲ್ಲಿ 7.7 ಸೆಂ.ಮೀ.,
ಕೋಲಾರ ತಾಲ್ಲೂಕಿನ ಮಣಿಘಟ್ಟದಲ್ಲಿ 8.3ಸೆಂ.ಮೀ., ಐತರಾಸನಹಳ್ಳಿಯಲ್ಲಿ
8 ಸೆಂ.ಮೀ., ಬಂಗಾರಪೇಟೆ ತಾಲ್ಲೂಕಿನ ಚಿನ್ನಕೋಟೆಯಲ್ಲಿ 7.9 ಸೆಂ.ಮೀ. ಮಳೆಯಾಗಿದೆ.

ಮುಳಬಾಗಿಲು ತಾಲ್ಲೂಕಿನ ದೇವರಾಯನಸಮುದ್ರದಲ್ಲಿ 6.1 ಸೆಂ.ಮೀ., ಹೆಬ್ಬಣಿಯಲ್ಲಿ 6.5 ಸೆಂ.ಮೀ., ಗುಮ್ಮಕಲ್ಲಿನಲ್ಲಿ 5.6 ಸೆಂ.ಮೀ., ಮಾಲೂರು ತಾಲ್ಲೂಕಿನ ದಿಣ್ಣೇಹಳ್ಳಿಯಲ್ಲಿ 5.8 ಸೆಂ.ಮೀ., ನೂಟುವೆಯಲ್ಲಿ 5.7 ಸೆಂ.ಮೀ., ಕುಡಿಯನೂರಲ್ಲಿ 5.6 ಸೆಂ.ಮೀ., ಕೇತಗನಹಳ್ಳಿ ಯಲ್ಲಿ 5.4 ಸೆಂ.ಮೀ. ಹಾಗೂ ಕೆಜಿಎಫ್‌ನ ಕ್ಯಾಸಂಬಳ್ಳಿಯಲ್ಲಿ 3.9 ಸೆಂ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT