ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರದ ಅಭಿವೃದ್ಧಿ ಸಹಿಸದೆ ತಿಕ್ಕಾಟ: ಎಚ್‌ಡಿಕೆ ವಿರುದ್ಧ ಅಶ್ವತ್ಥನಾರಾಯಣ ಟೀಕೆ

Last Updated 2 ಅಕ್ಟೋಬರ್ 2022, 12:27 IST
ಅಕ್ಷರ ಗಾತ್ರ

ಕೋಲಾರ: ‘ರಾಮನಗರ ಜಿಲ್ಲೆ ಅಭಿವೃದ್ಧಿಗೆ ರೂಪುರೇಷೆ ಹಾಕಿದ್ದೇ ಬಿಜೆಪಿ ಸರ್ಕಾರ. ಮನೆ ಮನೆಗೆ ಕಾವೇರಿ ನೀರು ನೀಡಲಾಗುತ್ತಿದೆ. ಇನ್ನು ಬೆಂಗಳೂರಿಗೇ ಪೂರ್ಣವಾಗಿ ಸಿಕ್ಕಿಲ್ಲ. ಅಭಿವೃದ್ಧಿ ಸಹಿಸಿಕೊಳ್ಳಲಾರದೆ ತಿಕ್ಕಾಟಕ್ಕೆ ಇಳಿದಿದ್ದಾರೆ. ಚುನಾವಣೆಯೇ ಬೇರೆ, ಅಭಿವೃದ್ಧಿಯೇ ಬೇರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲವೆಂದು ಕುಮಾರಸ್ವಾಮಿ ಅವರೇ ಪತ್ರ ಬರೆದಿದ್ದರು. ರಾಮನಗರ, ಚನ್ನಪಟ್ಟಣದಲ್ಲಿ ಅವರು ಕಾರ್ಯಕ್ರಮ ಮಾಡಿದಾಗ ನಾವು ತೊಂದರೆ ಕೊಟ್ಟಿದ್ದೇವೆಯೇ? ನಿರ್ಬಂಧ ಹೇರಿದ್ದೇವೆಯೇ’ ಎಂದು ಪ್ರಶ್ನಿಸಿದರು.

‘ಇಷ್ಟೊಂದು ಸಹಕಾರ ಹಾಗೂ ಗೌರವವನ್ನು ಮತ್ಯಾರೂ ಕೊಡಲು ಸಾಧ್ಯವಿಲ್ಲ. ಕುಮಾರಸ್ವಾಮಿ ಕೇಳಿದಾಗಲೆಲ್ಲಾ ನಮ್ಮ ಸರ್ಕಾರ ಅನುದಾನ ನೀಡಿದೆ, ಸಹಕಾರ ನೀಡಿದೆ. ಆದರೆ, ಕಾರ್ಯಕ್ರಮ ತಡೆಯುವುದೇ ಕುಮಾರಸ್ವಾಮಿ ಅವರ ಸ್ಪಷ್ಟ ಉದ್ದೇಶವಾಗಿತ್ತು’ ಎಂದರು.

ಕಾಂಗ್ರೆಸ್‌ಗೆ ಸವಾಲು: ‘ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಯಾವ ವಸ್ತುವಿಗೆ ಎಷ್ಟು ಬೆಲೆ ಏರಿಕೆ ಆಗಿತ್ತು. ಈಗ ಎಷ್ಟು ಏರಿಕೆ ಆಗಿದೆ ಎಂಬ ಅಂಕಿಅಂಶ ಮುಂದಿಡಲಿ’ ಎಂದು ಸವಾಲು ಹಾಕಿದರು.

40 ಪರ್ಸೆಂಟ್‌ ಸರ್ಕಾರ ಎಂಬ ಆರೋಪಕ್ಕೆ, ‘ನಮ್ಮ ಪಕ್ಷ ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನವಾಗಿದೆ. ‘ಸರ್ಕಾರ ಬಿಡುಗಡೆ ಮಾಡುವ ಅನುದಾನದಲ್ಲಿ ಶೇ 15ರಷ್ಟು ಮಾತ್ರ ಫಲಾನುವಿಗಳಿಗೆ ತಲುಪುತ್ತಿದೆ, ಇನ್ನು 85 ಪರ್ಸೆಂಟ್‌ನ ಜೇಬು ಸೇರುತ್ತಿದೆ’ ಎಂಬುದಾಗಿ ಕಾಂಗ್ರೆಸ್‌ನ ಪ್ರಧಾನಿಯಾಗಿದ್ದವರೇ ಹಿಂದೆ ಹೇಳಿದ್ದರು. ನಮ್ಮದು ಭ್ರಷ್ಟಾಚಾರ ರಹಿತ ಸರ್ಕಾರ. ಅಕ್ರಮ ಹಣ ಸಂಪಾದನೆಗೆ ಸರ್ಕಾರ ಕಾನೂನು ಮೂಲಕ ಕಡಿವಾಣ ಹಾಕಿದೆ’ ಎಂದು ಹೇಳಿದರು.

ಭಾರತ್‌ ಜೋಡೊ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ, ‘ಕಾಂಗ್ರೆಸ್‌ ಪಕ್ಷ ವಿನಾಶ ಕಾಲದಲ್ಲಿದ್ದು, ಅಸ್ತಿತ್ವ ಉಳಿಸಿಕೊಳ್ಳಲು ನಾಟಕ ಮಾಡುತ್ತಿದೆ. ಅಧಿಕಾರದಲ್ಲಿದ್ದಾಗ ದೇಶ ಒಡೆಯಲು, ಭಯೋತ್ಪಾದನೆಗೆ ಉತ್ತೇಜನ ನೀಡಲು ಅಧಿಕಾರ ಬಳಸಿಕೊಂಡರು. ದೇಶದಾದ್ಯಂತ ವಿವಿಧ ಸಮಸ್ಯೆ ಹುಟ್ಟುಹಾಕಿದರು’ ಎಂದು ಹರಿಹಾಯ್ದರು.

ಸಿಇಟಿ ಫಲಿತಾಂಶ ಕುರಿತು, ‘ಸಿಇಟಿ ಫಲಿತಾಂಶ ಸಂಬಂಧ ನಾವು ನೀಡಿದ ಪರಿಹಾರಕ್ಕೆ ನ್ಯಾಯಾಲಯ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ಬಗೆಹರಿಸಿದ್ದೇವೆ. ಬೇರೆ ಯಾರೇ ಇದ್ದರೂ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗುತಿತ್ತು’ ಎಂದರು.

ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT