ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

SSLC Exams | ಕೋಲಾರ: ಐದರೊಳಗಿನ ಗುರಿ; ಕಸರತ್ತು ನೂರು!

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೆಚ್ಚಿಸಲು ವಿನೂತನ ಪ್ರಯೋಗ
Published 25 ಫೆಬ್ರುವರಿ 2024, 6:36 IST
Last Updated 25 ಫೆಬ್ರುವರಿ 2024, 6:36 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆ ಮಾಡುತ್ತಿದ್ದು, ಈ ಬಾರಿ ರಾಜ್ಯದಲ್ಲಿ ಅಗ್ರ ಐದರೊಳಗಿನ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.

ಖುದ್ದಾಗಿ ಜಿಲ್ಲಾಧಿಕಾರಿ ಅಕ್ರಂ ಪಾಷ ಹೆಚ್ಚು ಆಸಕ್ತಿ ವಹಿಸಿ ವಿವಿಧ ಇಲಾಖೆಗಳಿಂದ ನೆರವು ಪಡೆದು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಮಕ್ಕಳಿಗೆ ಅನುಕೂಲ ಮಾಡಿಕೊಡಲು ಪ್ರಯತ್ನ ಹಾಕುತ್ತಿರುವುದು ವಿಶೇಷ.

ಕಳೆದ ಸಾಲಿನಲ್ಲಿ ಜಿಲ್ಲೆಯು ಆರನೇ ಸ್ಥಾನ ಪಡೆದಿತ್ತು. ಈ ಬಾರಿ ಅದನ್ನು ಮೀರಿಸಲು ವಿನೂತನ ಪ್ರಯೋಗ ಕೈಗೊಳ್ಳಲಾಗಿದೆ. ಹೀಗಾಗಿ, ಆ ಕನಸು ನನಸಾಗಿಸಲು ಈಗ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ ಎದುರಾಗಿದೆ. 

ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಸೌಲಭ್ಯಗಳ ಕೊರತೆ ಇದ್ದರೆ ಉತ್ತಮ ಫಲಿತಾಂಶ ನಿರೀಕ್ಷೆ ಅಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಅಗತ್ಯ ಸೌಲಭ್ಯ ಪೂರೈಸಲು ಮುಂದಾಗಿದ್ದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಶೈಕ್ಷಣಿಕ ಮುಖ್ಯವಾಹಿನಿಗೆ ತರಲು ಪ್ರಯತ್ನ ನಡೆಸಲಾಗಿದೆ. ಕೋಚಿಮುಲ್, ಖನಿಜ ಪ್ರತಿಷ್ಠಾನ ಅಗತ್ಯ ಸೌಲಭ್ಯ ಒದಗಿಸಿವೆ.

ಈ ನಿಟ್ಟಿನಲ್ಲಿ ಹಿಂದುಳಿದ 68 ಸರ್ಕಾರಿ ಇಂಗ್ಲಿಷ್‌ ಪ್ರೌಢಶಾಲೆ ಮತ್ತು ವಸತಿ ಶಾಲೆಗಳನ್ನು ಗುರುತಿಸಿ ಆರು ವಿಷಯಗಳ ಕುರಿತು 4,500 ಪರೀಕ್ಷಾ ದೀವಿಕೆ ಕೈಪಿಡಿ ವಿತರಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯು ಸಂಪನ್ಮೂಲ ಶಿಕ್ಷಕರಿಂದ ಐದು ಸೆಟ್ ಮಾದರಿ ಪ್ರಶ್ನೆಪತ್ರಿಕೆ ತಯಾರಿಸಿ ಶಾಲೆಗಳಿಗೆ ನೀಡಿದೆ.

‘ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಉತ್ತಮ ಸಾಧನೆ ಕಾಯ್ದುಕೊಂಡು ಬಂದಿದೆ. ಇನ್ನೂ ಉತ್ತಮ ಸಾಧನೆ ಮಾಡಬೇಕೆಂಬುದು ನಮ್ಮ ಮಹಾದಾಸೆ. ಹೀಗಾಗಿ, ನಮ್ಮಿಂದಾದ ಎಲ್ಲಾ ಸೌಲಭ್ಯ ಒದಗಿಸಿಕೊಟ್ಟಿದ್ದೇವೆ. ವಿದ್ಯಾರ್ಥಿಗಳು ಈ ಸೌಲಭ್ಯ ಬಳಸಿಕೊಂಡು ಶೇ 100 ಸಾಧನೆಗೆ ಪ್ರಯತ್ನಿಸಬೇಕು’ ಎಂದು ಡಿಡಿಪಿಐ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇಲಾಖೆಯು ಕಳೆದ ಅಕ್ಟೋಬರ್‌ನಲ್ಲೇ ‘ನನ್ನನ್ನೊಮ್ಮೆ ಗಮನಿಸಿ’, ‘ಚಿತ್ರ ಬಿಡಿಸು ಅಂಕ ಗಳಿಸು’, ‘ಅಭ್ಯಾಸ ಹಾಳೆಗಳು’ ನೀಡಿದ್ದು, ಶಾಲೆಗಳಲ್ಲಿ ಈಗಾಗಲೇ ಬಳಸಲಾಗುತ್ತಿದೆ.

ಇದೇ ಮೊದಲ ಬಾರಿ ಎಸ್ಸೆಸ್ಸೆಲ್ಸಿ ಮೂರು ಪರೀಕ್ಷೆಗಳು ನಡೆಯಲಿದ್ದು, ಈಗಾಗಲೇ ಪೋಷಕರು ಹಾಗೂ ವಿಶೇಷವಾಗಿ ತಾಯಂದಿರ ಸಭೆ ನಡೆಸಿ ವಿದ್ಯಾರ್ಥಿಗಳ ಪರೀಕ್ಷೆ ಸಿದ್ಧತೆ ಬಗ್ಗೆ ಚರ್ಚಿಸಲಾಗಿದೆ. ಮನೆಗಳಲ್ಲೂ ಕಲಿಕಾ ವಾತಾವರಣ ಸೃಷ್ಟಿಗೆ ಸಲಹೆ ನೀಡಲಾಗಿದೆ.

‘ಶಾಲೆಗಳಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಪಠ್ಯ ಬೋಧನೆ ಮುಗಿಸಿದ್ದು, ಪುನರಾವರ್ತನೆ ಜತೆಗೆ ಗುಂಪು ಅಧ್ಯಯನದ ಮೂಲಕ ಶಿಕ್ಷಕರು ಹಿಂದುಳಿದ ವಿದ್ಯಾರ್ಥಿಗಳ ಕುರಿತು ಹೆಚ್ಚಿನ ಗಮನಹರಿಸಲು ಸೂಚಿಸಲಾಗಿದೆ. ಈಗಾಗಲೇ ಎಲ್ಲಾ ಶಾಲೆಗಳಲ್ಲಿ ಗುಂಪು ಅಧ್ಯಯನ ನಡೆಯುತ್ತಿದೆ’ ಎಂದು ಹೇಳಿದರು.

‘ಎರಡು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು ರಾಜ್ಯದಲ್ಲಿ ಆರನೇ ಸ್ಥಾನದಲ್ಲಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 6ನೇ ಸ್ಥಾನದಿಂದ ಮೊದಲನೇ ಸ್ಥಾನಕ್ಕೆ ಏರಲು ವಿದ್ಯಾರ್ಥಿಗಳು ಮತ್ತಷ್ಟು ಪರಿಶ್ರಮ ಹಾಕಬೇಕು. ಸೌಲಭ್ಯಗಳನ್ನು ಕೊಡಿಸುವ ಜವಾಬ್ದಾರಿ ನಮ್ಮದು’ ಎನ್ನುತ್ತಾರೆ ಜಿಲ್ಲಾಧಿಕಾರಿ ಅಕ್ರಂ ಪಾಷ.

ಪರೀಕ್ಷೆ ಬರೆಯಲಿರುವ 20,200 ಮಕ್ಕಳು ಕಳೆದ ಬಾರಿ ಜಿಲ್ಲೆಗೆ 6ನೇ ಸ್ಥಾನ ಫಲಿತಾಂಶ ಸುಧಾರಣೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಾಂಘಿಕ ಪ್ರಯತ್ನ

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದಾಗ ಪಟ್ಟಿಯಲ್ಲಿ ಕೊನೆ ಸ್ಥಾನದಿಂದ ಜಿಲ್ಲೆಯ ಹೆಸರನ್ನು ಹುಡಕುವ ಕಾಲವಿತ್ತು. ಆದರೆ ಈಚೆಗೆ ಕೈಗೊಂಡ ಪ್ರಯೋಗಗಳಿಂದ ಉತ್ತಮ ಫಲಿತಾಂಶ ಬರುತ್ತಿದೆ

-ಕೃಷ್ಣಮೂರ್ತಿ ಡಿಡಿಪಿಐ ಕೋಲಾರ

ಫಲಿತಾಂಶ ಸುಧಾರಣೆಗೆ ಕ್ರಮ

ಪ್ರೇರಣಾ ಸಂವಾದ ಕಾರ್ಯಕ್ರಮಗಳು ಪೋಷಕರು ತಾಯಂದಿರ ಸಭೆ ಫೋನ್ ಇನ್ ಕಾರ್ಯಕ್ರಮ ನಡೆಸಿ ಮಕ್ಕಳಲ್ಲಿನ ಗೊಂದಲ ನಿವಾರಣೆಗೆ ಒತ್ತು ನನ್ನನ್ನೊಮ್ಮೆಗಮನಿಸಿ–ಪುಸ್ತಕ ಚಿತ್ರ ಬಿಡಿಸು ಅಂಕ ಗಳಿಸು ಎಲ್ಲಾ ವಿಷಯಗಳ ವರ್ಕ್‌ ಶೀಟ್‌ ಅಭ್ಯಾಸ ಟಾಪರ್ಸ್‌ಗೆ ವಿಶೇಷ ಒತ್ತು–ಶೇ 80ಕ್ಕೆ ಅಂಕ ತೆಗೆಯುವಂತೆ ಪ್ರತಿ ಚಾಪ್ಟರ್‌ಗೆ ಐದಾರು ಪ್ರಶ್ನೆ ತಯಾರು– ಉತ್ತರವೂ ಸಿದ್ಧ ಬೆಳಿಗ್ಗೆ 9ರಿಂದ 10 ಗಂಟೆವರೆಗೆ ವಿಶೇಷ‌ ತರಗತಿ ಸಂಜೆ 4ರಿಂದ 6 ಗಂಟೆವರೆಗೆ ಗ್ರೂಪ್‌ ಸ್ಟಡಿ ಪ್ರತಿ ವಿಷಯಕ್ಕೆ ಐದು ಮಾದರಿ ಪ್ರಶ್ನೆ ಪತ್ರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT