ಗುರುವಾರ , ಏಪ್ರಿಲ್ 22, 2021
24 °C
ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಹೇಳಿಕೆ

ಕೆ.ಸಿ ವ್ಯಾಲಿ: 257 ಕೆರೆ ತುಂಬಿಸುತ್ತೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯ ಅಂತರ್ಜಲ ವೃದ್ಧಿಗಾಗಿ 2ನೇ ಹಂತದಲ್ಲಿ ಕೆ.ಸಿ ವ್ಯಾಲಿ ಯೋಜನೆಯಿಂದ ₹ 450 ಕೋಟಿ ವೆಚ್ಚದಲ್ಲಿ 257 ಕೆರೆ ತುಂಬಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

ಇಲ್ಲಿ ಭಾನುವಾರ ಗಣ ರಾಜ್ಯೋತ್ಸವದಲ್ಲಿ ಮಾತನಾಡಿ, ‘ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ಕೋಲಾರಮ್ಮ ಮತ್ತು ನರಸಾಪುರ ಕೆರೆಗಳನ್ನು ಸುಂದರ ಪ್ರವಾಸಿ ತಾಣವಾಗಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಅಂಬೇಡ್ಕರ್‌ ಅವರು ನೀಡಿರುವ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದೆ. ಸಂವಿಧಾನದಿಂದ ಸಿಕ್ಕಿರುವ ಸ್ವಾತಂತ್ರ್ಯ, ಗಣರಾಜ್ಯದಿಂದ ನಾವೆಲ್ಲಾ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಜಿಲ್ಲೆಯು ಶ್ರೇಷ್ಠ ಹೋರಾಟಗಾರರನ್ನು ಕೊಡುಗೆಯಾಗಿ ನೀಡಿದೆ’ ಎಂದು ಅಭಿಪ್ರಾಯಪಟ್ಟರು.

‘ಬರದಿಂದ ಕಂಗೆಟ್ಟಿದ್ದ ಜಿಲ್ಲೆಯ ಅಂತರ್ಜಲ ಮಟ್ಟ ಹೆಚ್ಚಿಸಲು ಕೆ.ಸಿ ವ್ಯಾಲಿ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಿಂದ ಮೊದಲ ಹಂತದಲ್ಲಿ ಈಗಾಗಲೇ 48 ಕೆರೆ ಹಾಗೂ 84 ಚೆಕ್‌ಡ್ಯಾಂ ತುಂಬಿವೆ. 2ನೇ ಹಂತದ ಯೋಜನೆಗೆ ಚಾಲನೆ ಸಿಕ್ಕಿರುವುದರಿಂದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಜಲಾಮೃತ ಯೋಜನೆಯಡಿ 1,280 ಚೆಕ್‌ಡ್ಯಾಂ ನಿರ್ಮಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ರೂಪಿಸಿರುವ ಎತ್ತಿನಹೊಳೆ ಮತ್ತು ಯರಗೋಳ್ ಯೋಜನೆ ಕಾಮಗಾರಿ ಪ್ರಗತಿಯಲ್ಲಿವೆ. ಜಿಲ್ಲೆಯಲ್ಲಿ 1,081 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯ 1,14,706 ರೈತರ ಖಾತೆಗೆ ₹ 10 ಸಾವಿರ ಜಮಾ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಬೆಳೆ ಪರಿಹಾರ: ‘2018-19 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಾನಿಗೊಳಗಾದ ಕೃಷಿ ಬೆಳೆಗೆ 60,340 ರೈತರಿಗೆ ₹ 27.15 ಕೋಟಿ ಹಾಗೂ ಹಿಂಗಾರು ಹಂಗಾಮಿನಲ್ಲಿ 13,649 ರೈತರಿಗೆ ₹ 6 ಕೋಟಿ ಪರಿಹಾರ ನೀಡಲಾಗಿದೆ. ಆಲಿಕಲ್ಲು ಮಳೆಯಿಂದ ನಾಶವಾದ ತೋಟಗಾರಿಕೆ ಬೆಳೆ ನಷ್ಟಕ್ಕೆ ₹ 3 ಕೋಟಿ ಪರಿಹಾರ ನೀಡಲಾಗಿದೆ. ಹೊಸದಾಗಿ 9 ಕೃಷಿ ಯಂತ್ರಧಾರೆ ಕೇಂದ್ರ ಆರಂಭಿಸಲಾಗುವುದು’ ಎಂದರು.

‘ಆಪರೇಷನ್ ಗ್ರೀನ್ಸ್ ಯೋಜನೆಯಡಿ ಟೊಮೆಟೊ ಸಂಸ್ಕರಣೆಗೆ ಉತ್ತೇಜನ ನೀಡಲಾಗಿದೆ. ಜಿಲ್ಲೆಯಿಂದ ಅಮೆರಿಕ, ಆಸ್ಟ್ರೇಲಿಯಾ ಹಾಗೂ ಐರೋಪ್ಯ ರಾಷ್ಟ್ರಗಳಿಗೆ ಮಾವು ರಫ್ತು ಮಾಡಲು ಅಗತ್ಯವಿರುವ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ಪಿ.ನಂಬರ್ ಸಮಸ್ಯೆ: ‘ಪಿ ನಂಬರ್ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿ 48,582 ಪೈಕಿ ಪಹಣಿ ಗುರುತಿಸಿದ್ದು, ಇವುಗಳನ್ನು ತೆಗೆಯುವ ಪೋಡಿ ಮುಕ್ತ ಆಂದೋಲನ ಕೈಗೊಳ್ಳಲಾಗುತ್ತಿದೆ. ಹಿಡುವಳಿ ಜಮೀನಿನಲ್ಲಿರುವ 14,292 ಪಿ ನಂಬರ್‌ಗಳನ್ನು ಈಗಾಗಲೇ ತೆಗೆಯಲಾಗಿದೆ. ಹೋಬಳಿಗೆ ಒಂದರಂತೆ 27 ಗ್ರಾಮ ಆಯ್ಕೆ ಮಾಡಿಕೊಂಡು ಪೋಡಿಮುಕ್ತ ಗ್ರಾಮಗಳಾಗಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದು ವಿವರಿಸಿದರು.

‘ಶ್ರೀ ನರಸಿಂಹರಾಜ (ಎಸ್‌ಎನ್ಆರ್) ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನೂತನವಾಗಿ 100 ಹಾಸಿಗೆ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ದರ್ಗಾ ಮೊಹಲ್ಲಾದಲ್ಲಿ ಮತ್ತು ವೇಮಗಲ್‌ನಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ ಈ ಆಸ್ಪತ್ರೆಗಳನ್ನು ಫೆ.8ರಂದು ಉದ್ಘಾಟಿಸಲಾಗುತ್ತದೆ’ ಎಂದು ಹೇಳಿದರು.

ಅಂಕಿ ಅಂಶ

*  1,280 ಚೆಕ್‌ಡ್ಯಾಂ ನಿರ್ಮಾಣ
*  48 ಕೆರೆಗಳು ಭರ್ತಿಯಾಗಿವೆ
*  1,081 ನೀರಿನ ಘಟಕ ಸ್ಥಾಪನೆ
*  73,989 ರೈತರಿಗೆ ಬೆಳೆ ಪರಿಹಾರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು