ಕೆ.ಸಿ ವ್ಯಾಲಿ ನೀರಿನಿಂದ ಯಾವುದೇ ತೊಂದರೆಯಿಲ್ಲ: ಶಾಸಕ ಶ್ರೀನಿವಾಸಗೌಡ ಸ್ಪಷ್ಟನೆ

7

ಕೆ.ಸಿ ವ್ಯಾಲಿ ನೀರಿನಿಂದ ಯಾವುದೇ ತೊಂದರೆಯಿಲ್ಲ: ಶಾಸಕ ಶ್ರೀನಿವಾಸಗೌಡ ಸ್ಪಷ್ಟನೆ

Published:
Updated:
Prajavani

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಯ ಕೆರೆಗಳಿಗೆ ಹರಿಸುತ್ತಿರುವ ನೀರಿನಿಂದ ಯಾವುದೇ ತೊಂದರೆಯಾಗುತ್ತಿಲ್ಲ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸ್ಪಷ್ಟಪಡಿಸಿದರು.

ತಾಲ್ಲೂಕಿನ ಸಿಂಗೇನಹಳ್ಳಿ ಕೆರೆಯಲ್ಲಿ ಭಾನುವಾರ ಕೆ.ಸಿ ವ್ಯಾಲಿ ಯೋಜನೆಯ ನೀರು ಕುಡಿದು ಮಾತನಾಡಿ, ‘ರೈತಪರ ಯೋಜನೆಗೆ ಅಡ್ಡಗಾಲು ಹಾಕುವವರು ಉದ್ಧಾರ ಆಗುವುದಿಲ್ಲ’ ಎಂದು ಶಪಿಸಿದರು.

‘ಜಿಲ್ಲೆಗೆ ಕೆ.ಸಿ ವ್ಯಾಲಿ ನೀರು ಹರಿಸದಂತೆ ಶಾಶ್ವತ ನೀರಾವರಿ ಹೋರಾಟ ವೇದಿಕೆ ಮುಖಂಡರು ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಇದಕ್ಕೂ ಮುನ್ನ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಅಲ್ಲಿ ತೀರ್ಪು ಸರ್ಕಾರದ ಪರ ಆಯಿತು’ ಎಂದರು.

‘ಸರ್ಕಾರ ಸುಪ್ರೀಂ ಕೋರ್ಟ್‌ನ ತಡೆಯಾಜ್ಞೆ ತೆರವು ಮಾಡಿಸುವ ಪ್ರಯತ್ನದಲ್ಲಿದೆ. ಅಲ್ಲಿಯೂ ರೈತರ ಪರ ತೀರ್ಪು ಬರುತ್ತದೆ. ಜನರಿಗೆ ತೊಂದರೆ ಕೊಡುವ ಹೋರಾಟಗಾರರಿಗೆ ದೇವರು ಒಳ್ಳೆಯದು ಮಾಡಲಿ’ ಎಂದು ಮಾರ್ಮಿಕವಾಗಿ ನುಡಿದರು.

 ಇದನ್ನೂ ಓದಿ: ಕೆರೆ ಸೇರುವ ನೀರಿಗೆ ವಿಷ ಸೇರಿದ್ದು ಎಲ್ಲಿ?

‘ಕೊಳಚೆ ನೀರು ಬಳಸಿಕೊಂಡು ತರಕಾರಿ ಬೆಳೆದು ಜಿಲ್ಲೆಯ ಮಾರುಕಟ್ಟೆಗೆ ತರುತ್ತಿದ್ದಾರೆ. ಅದನ್ನು ಸೇವಿಸಿದವರಿಗೆ ಏನಾದರೂ ಆಗಿದಿಯೇ? ಹೋರಾಟಗಾರರು ಸ್ಥಳಕ್ಕೆ ಬಂದು ಇಲ್ಲಿನ ಪರಿಸ್ಥಿತಿ ಗಮನಿಸಿದರೆ ಸತ್ಯದ ಅರಿವಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವ್ಯಾಲಿ ಯೋಜನೆ ಉದ್ದೇಶ ತಿಳಿದಿದ್ದರೂ ಈ ರೀತಿ ಮಾಡಿದರೆ ಹೇಗೆ? ತ್ಯಾಜ್ಯ ನೀರನ್ನು ಸಂಸ್ಕರಿಸಿ ಹರಿಸಲಾಗುತ್ತಿದೆ. ಈವರೆಗೆ 7 ಕೆರೆ ತುಂಬಿದ್ದು, ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಣೆಯಾಗಿದೆ’ ಎಂದು ವಿವರಿಸಿದರು.

ಅಪಪ್ರಚಾರ ನಿಲ್ಲಿಸಿ: ‘ಒಂದು ತಿಂಗಳಿಂದ ಕೆರೆಯ ನೀರು ಉಪಯೋಗಿಸುತ್ತಿದ್ದೇವೆ. ಜಾನುವಾರುಗಳಿಗೂ ಕುಡಿಸುತ್ತಿದ್ದೇವೆ. ಯಾವುದೇ ಸಮಸ್ಯೆ ಆಗಿಲ್ಲ. ಯೋಜನೆ ಬಗ್ಗೆ ವಿನಾಕಾರಣ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು’ ಎಂದು ಸಿಂಗೇನಹಳ್ಳಿಯ ರೈತ ಮುನಿರಾಜು ಮನವಿ ಮಾಡಿದರು.

ಇದನ್ನೂ ಓದಿ: ಕೆ.ಸಿ.ವ್ಯಾಲಿ ಯೋಜನೆ: ನೀರಿನ ಬದಲು ಹರಿದ ವಿಷ

‘ಸತತ ಬರಗಾಲದಿಂದ ರೋಸಿ ಹೋಗಿದ್ದೇವೆ. ದೇವರ ದಯೆಯಿಂದ ಕೆ.ಸಿ ವ್ಯಾಲಿ ಯೋಜನೆ ಅನುಷ್ಠಾನಗೊಂಡು ವರದಾನವಾಗಿದೆ. ನೀರು ಉಪಯೋಗಿಸುತ್ತಿರುವ ರೈತರ ಅಭಿಪ್ರಾಯ ಪಡೆಯಿರಿ, ಅವರೇ ಸತ್ಯ ಹೇಳುತ್ತಾರೆ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !