ಸೋಮವಾರ, ಮೇ 17, 2021
23 °C

ಕೆ.ಸಿ.ವ್ಯಾಲಿ: ನೀರಿನ ಗುಣಮಟ್ಟದ ಪರೀಕ್ಷಾ ವರದಿಗೆ ಅರ್ಜಿದಾರರ ಅತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸುತ್ತಿರುವ ಕೆ.ಸಿ (ಕೋಲಾರ-ಚಲ್ಲಘಟ್ಟ) ವ್ಯಾಲಿಯ ಸಂಸ್ಕರಿತ ತ್ಯಾಜ್ಯ ನೀರಿನ ಗುಣಮಟ್ಟದ ಪರಿಷ್ಕೃತ ಪರೀಕ್ಷಾ ವರದಿಯನ್ನು ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಹೈಕೋರ್ಟ್‌ಗೆ ಸಲ್ಲಿಸಿದರು.

ಈ ಕುರಿತಂತೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ಮುಂದುವರಿಸಿತು.

ವರದಿ ಮೇಲೆ‌ ಕಣ್ಣಾಡಿಸಿದ ಮುಖ್ಯ ನ್ಯಾಯಮೂರ್ತಿಗಳು,‌ ‘ನಿನ್ನೆ (ಸೆ.26) ತಿಳಿಸಿದಂತೆ ನೀರಿನ ರಾಸಾಯನಿಕ ಗುಣಗಳನ್ನು 39 ಮಾನದಂಡಗಳಲ್ಲಿ ಪರಿಶೀಲಿಸಿದ್ದೀರಲ್ಲವೇ’ ಎಂದರು. 

ಇದಕ್ಕೆ ಉದಯ ಹೊಳ್ಳ ಅವರು, ‘ಅವು 39 ಅಂಶಗಳಲ್ಲ. ಬರಿ 33 ಅಂಶಗಳು’ ಎಂದು ತಿದ್ದುಪಡಿ ಮಾಡಿದರು.

ಈ ಮಾತಿಗೆ ಮಧ್ಯ ಪ್ರವೇಶಿಸಿದ ಅರ್ಜಿದಾರರ ಪರ ವಕೀಲ ಪ್ರಿನ್ಸ್ ಐಸಾಕ್, ‘ವರದಿಯು ಅಂತರ್ಜಲದ ಪರೀಕ್ಷಾ ಅಂಶಗಳನ್ನು ಒಳಗೊಂಡಿಲ್ಲ‌‌. ಕೇವಲ ಮೇಲ್ಮೈ ನೀರಿನ ಪರೀಕ್ಷಾ ವರದಿಯಾಗಿದೆ’ ಎಂದು ಆಕ್ಷೇಪಿಸಿದರು.

‘ಪ್ರಕರಣದ ಪ್ರತಿವಾದಿಗಳೇ ಎಲ್ಲ ಪುರಾವೆಗಳನ್ನು ನೀಡುತ್ತಿದ್ದಾರೆ. ಈ ನೀರಿನ ಶುದ್ಧೀಕರಣ ಸೂಕ್ಷ್ಮ ಗುಣಮಟ್ಟದಿಂದ ಕೂಡಿಲ್ಲ. ಹಲವು ಎಸ್‌ಟಿಪಿ ಘಟಕಗಳಿಗೆ ನಾನು ಖುದ್ದು ಭೇಟಿ ನೀಡಿ ಇದನ್ನು ಖಚಿತಪಡಿಸಿಕೊಂಡಿದ್ದೇನೆ’ ಎಂದರು.

‘ಬೆಂಗಳೂರಿನ ತ್ಯಾಜ್ಯಯುಕ್ತ ಮತ್ತು ಕೈಗಾರಿಕೆಗಳ ಕಲುಷಿತ ನೀರು ಕೆರೆಗಳಿಗೆ ಸೇರುತ್ತದೆ. ಅಂತೆಯೇ ಇದು ಚರಂಡಿ ನೀರು ಶುದ್ಧೀಕರಣ ಘಟಕಗಳಿಗೆ (ಎಸ್‌ಟಿಪಿ) ತಲುಪುತ್ತದೆ. ಇಲ್ಲಿಂದ ಸಂಸ್ಕರಿಸಿ ಕೆ.ಸಿ ವ್ಯಾಲಿಗೆ ಬಿಡಲಾಗುವ ನೀರಿನಲ್ಲಿ ಒಳಚರಂಡಿ ನೀರೂ ಮಿಶ್ರಣವಾಗುತ್ತದೆ’ ಎಂದು ವಿವರಿಸಿದರು.

ಈ ವಾದ ಸರಣಿಗೆ ಕೊಂಚ ಅತೃಪ್ತಿ ವ್ಯಕ್ತಪಡಿಸಿದ ದಿನೇಶ್ ಮಾಹೇಶ್ವರಿ, ‘ನಾವು ಈಗ ಕೇವಲ ಜಾಕ್‌ವೆಲ್‌ಗೆ ಸೇರುವ ನೀರಿನ ಗುಣಮಟ್ಟದ ಬಗ್ಗೆ ಪ್ರಸ್ತಾಪಿಸಿದ್ದೇವೆ. ಆದರೆ, ನೀವು ನಿಮ್ಮ ಮನವಿಯ ಮುಖ್ಯಾಂಶಕ್ಕೆ ಹೊರತಾದ ಅನವಶ್ಯಕ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದೀರಿ. ಹತ್ತಾರು ಅಂಶಗಳನ್ನು ಒಟ್ಟುಗೊಡಿಸಿ ಕಲಸು ಮೇಲೋಗರ ಮಾಡುತ್ತಿದ್ದೀರಿ. ಇವೆಲ್ಲಾ ಈ ಹಂತದಲ್ಲಿ ಅಮುಖ್ಯವಾಗಿವೆ’ ಎಂದರು.

ಇದಕ್ಕೆ ಉದಯ ಹೊಳ್ಳ ಅವರು, ‘ಕೆ.ಸಿ ವ್ಯಾಲಿಗೆ ಹರಿದು ಹೋಗುತ್ತಿರುವ ನೀರನ್ನು ಕ್ಲೋರಿನೇಷನ್ ಮುಖಾಂತರ ಶುದ್ಧೀಕರಿಸಿ ಹರಿಬಿಡಲಾಗುತ್ತಿದೆ. ಎಸ್‌.ಟಿ.ಪಿ ಘಟಕಗಳಲ್ಲಿ ನೀರಿನ‌ ಶುದ್ಧತೆಯ ಬಗ್ಗೆ ನಡೆಯುವ ಎಲ್ಲ ಹಂತದ ಪ್ರಕ್ರಿಯೆಗಳನ್ನು ಅಲ್ಲಿನ ಎಲೆಕ್ಟ್ರಾನಿಕ್ ಪರದೆಯ ಮೇಲೆ ವೀಕ್ಷಿಸಬಹುದಾಗಿದೆ’ ಎಂದು ಬಲವಾಗಿ ಸರ್ಮಥಿಸಿಕೊಂಡರು.

‘ಆದಾಗ್ಯೂ, ಎಸ್‌ಟಿಪಿ ಘಟಕಗಳ ನೀರಿನ ಶುದ್ಧೀಕರಣ ಪ್ರಕ್ರಿಯೆ ಹಾಗೂ ನೀರಿನ ಗುಣಮಟ್ಟದ ರಾಸಾಯನಿಕ ಪರೀಕ್ಷೆಯ 39 ಮಾನದಂಡಗಳ ಸಂಪೂರ್ಣ ವರದಿಯನ್ನು ನಾಳೆಯೇ ನ್ಯಾಯಪೀಠಕ್ಕೆ ಒದಗಿಸಲು ಸಿದ್ಧ’ ಎಂದರು.

ಇದನ್ನು ಮಾನ್ಯ ಮಾಡಿದ‌ ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ (ಸೆ.28) ಮುಂದೂಡಿದೆ. ಕೆರೆಗಳಿಗೆ ನೀರು ಹರಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು