ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಾರ್‌ ತಟದಲ್ಲಿ ಚೆಕ್‌ ಡ್ಯಾಂ ನಿರ್ಮಾಣ

ಗೆನ್ನೇರಹಳ್ಳಿ ಗ್ರಾಮದಲ್ಲಿ ಕಾಮಗಾರಿ ವೀಕ್ಷಿಸಿದ ಸಚಿವ ಕೃಷ್ಣ ಬೈರೇಗೌಡ
Last Updated 15 ಜೂನ್ 2019, 13:58 IST
ಅಕ್ಷರ ಗಾತ್ರ

ಕೆಜಿಎಫ್‌: ಪಾಲಾರ್ ನದಿ ಸಾಗುವ ಪ್ರದೇಶದಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಿ ಹೆಚ್ಚುವರಿ ನೀರು ಸಂಗ್ರಹ ಮಾಡುವ ಗುರಿ ಇದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ಸಮೀಪದ ಗೆನ್ನೇರಹಳ್ಳಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಚೆಕ್ ಡ್ಯಾಂ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ ಮಾತನಾಡಿದರು.

ಚೆಕ್ ಡ್ಯಾಂ ನಿರ್ಮಾಣ ಮಾಡಿದರೆ ಸುಮಾರು ನಾಲ್ಕರಿಂದ ಐದು ಕಿ.ಮೀ ಉದ್ದದಷ್ಟು ನೀರು ನಿಲ್ಲಬೇಕು. ಸಣ್ಣ ಕೆರೆ ರೀತಿಯಲ್ಲಿ ಚೆಕ್ ಡ್ಯಾಂ ನಿರ್ಮಾಣವಾಗಬೇಕು. ಕೋಲಾರ ತಾಲ್ಲೂಕಿನಲ್ಲಿ ಈಗಾಗಲೇ ಹಲವು ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಾಕಷ್ಟು ದೂರ ಅಂತರವಿರುವ ಬಂಗಾರಪೇಟೆ ತಾಲ್ಲೂಕಿನಲ್ಲಿ ಇಂತಹ ಚೆಕ್ ಡ್ಯಾಂಗಳ ಅವಶ್ಯಕತೆ ಇದೆ. ನರೇಗಾದಲ್ಲಿ ಇಂತಹ ಚೆಕ್ ಡ್ಯಾಂಗಳನ್ನು ಕಟ್ಟುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಸರ್ಕಾರವು ಜಲಾಮೃತ ಯೋಜನೆಯಡಿ ಬರಪೀಡಿತ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಿಸಲು ಯೋಜನೆ ಕೈಗೊಂಡಿದೆ. ರಾಜ್ಯದಾದ್ಯಂತ ₹ 500 ಕೋಟಿ ವೆಚ್ಚದಲ್ಲಿ 20 ಸಾವಿರ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುವುದು. 1,400 ಚೆಕ್‌ ಡ್ಯಾಂಗಳನ್ನು ಕೋಲಾರ ಜಿಲ್ಲೆಯಲ್ಲಿಯೇ ನಿರ್ಮಾಣ ಮಾಡುವ ಗುರಿ ಇದೆ. ಬಂಗಾರಪೇಟೆ ತಾಲ್ಲೂಕಿನಲ್ಲಿ 230 ಚೆಕ್ ಡ್ಯಾಂ ನಿರ್ಮಾಣವಾಗಿದ್ದು, 120 ಪ್ರಗತಿಯಲ್ಲಿದೆ. ಒಂದು ತಿಂಗಳೊಳಗೆ ಉಳಿದ ಚೆಕ್‌ ಡ್ಯಾಂಗಳ ನಿರ್ಮಾಣ ಕಾರ್ಯ ಮುಗಿಯಲಿದೆ. ಇವೆಲ್ಲಕ್ಕೂ ಸರ್ಕಾರದಿಂದ ಅನುದಾನ ಪಡೆಯದೆ ನರೇಗಾ ಹಣದಲ್ಲಿಯೇ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಚೆಕ್‌ ಡ್ಯಾಂ ನಿರ್ಮಾಣವಾಗುವುದರಿಂದ ಆ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಾಗುತ್ತದೆ. ಕೆರೆಗೆ ಹೋಗುವ ನೀರಿನಲ್ಲಿ ಹರಿದುಬರುವ ಹೂಳು ಚೆಕ್ ಡ್ಯಾಂನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ. ಇದರಿಂದ ಕೆರೆಗಳಲ್ಲಿ ಹೂಳು ತುಂಬುವುದು ಕಡಿಮೆಯಾಗುತ್ತದೆ. ನರೇಗಾ ಯೋಜನೆಯಡಿ ಚೆಕ್ ಡ್ಯಾಂಗಳಲ್ಲಿ ಹೂಳು ತೆಗೆಯುವುದಕ್ಕೆ ಅವಕಾಶವಿದೆ. ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಚೆಕ್ ಡ್ಯಾಂಗಳಲ್ಲಿ ಶೇ 60 ರಲ್ಲಿ ಈಗಾಗಲೇ ನೀರು ಸಂಗ್ರಹವಾಗಿದೆ ಎಂದು ತಿಳಿಸಿದರು.

ಗೆನ್ನೇರಹಳ್ಳಿ ಚೆಕ್ ಡ್ಯಾಂ ಕಾಮಗಾರಿ ಚೆನ್ನಾಗಿದೆ. ಆದರೆ ಎಂಜಿನಿಯರ್‌ಗಳು ತಲೆ ಉಪಯೋಗಿಸಿ ಕೆಲಸ ಮಾಡಿಲ್ಲ. ನೀರು ನಿಲ್ಲುವುದಕ್ಕೆ ಇನ್ನೂ ಹೆಚ್ಚಿನ ಅವಕಾಶ ನಿರ್ಮಿಸಬೇಕಾಗಿತ್ತು. ಚೆಕ್‌ ಡ್ಯಾಂ ವಿಸ್ತರಣೆಯನ್ನು ಹೆಚ್ಚು ಮಾಡಿ ಎಂದು ಅವರು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕಿ ಎಂ.ರೂಪಕಲಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ, ಸುಂದರಪಾಳ್ಯ ಗ್ರಾಮಪಂಚಾಯಿತಿ ಅಧ್ಯಕ್ಷೆ ವಾಣಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶೇಷಾದ್ರಿ, ಭಾರತಿ ಹಾಜರಿದ್ದರು.

ಜಿಲ್ಲೆಯಲ್ಲಿ ಚೆಕ್ ಡ್ಯಾಂ ಅಂಕಿ ಅಂಶಗಳು

1,000 ಚೆಕ್‌ ಡ್ಯಾಂ ಗುರಿ

400 ಕಾಮಗಾರಿ ಮುಕ್ತಾಯ

600 ಎರಡು ತಿಂಗಳಲ್ಲಿ ಮುಕ್ತಾಯ

₹ 140 ಕೋಟಿ ರೂಪಾಯಿ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT