ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್: ಅಕ್ರಮ ಕಲ್ಲು ಗಣಿಗಾರಿಕೆ ಆರೋಪ

ಕಮ್ಮಸಂದ್ರ ಗ್ರಾಮದಲ್ಲಿ ಅಕ್ರಮ ಚಟುವಟಿಕೆ l ಕಂಡೂ ಕಾಣದಂತಿರುವ ಸ್ಥಳೀಯ ಆಡಳಿತ
ಕೃಷ್ಣಮೂರ್ತಿ
Published : 11 ಸೆಪ್ಟೆಂಬರ್ 2024, 6:44 IST
Last Updated : 11 ಸೆಪ್ಟೆಂಬರ್ 2024, 6:44 IST
ಫಾಲೋ ಮಾಡಿ
Comments

ಕೆಜಿಎಫ್: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಗುಪ್ತವಾಗಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ಈಗ ಕೋಟಿಲಿಂಗೇಶ್ವರ ದೇವಸ್ಥಾನವಿರುವ ಕಮ್ಮಸಂದ್ರದ ಸುತ್ತಮುತ್ತಲಿನ ಪ್ರದೇಶಕ್ಕೂ ವಿಸ್ತರಿಸಿದೆ. 

ಕಮ್ಮಸಂದ್ರದ ಪರಿಶಿಷ್ಟ ಜಾತಿ ಸಮುದಾಯದವರೇ ಹೆಚ್ಚಾಗಿ ವಾಸಿಸುವ ಕಾಲೊನಿ ಅಕ್ಕಪಕ್ಕದಲ್ಲೇ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಬಂಡೆ ಸಿಡಿಸುವ ಪ್ರಕ್ರಿಯೆಗೆ ಜನ ಬೆಚ್ಚಿಬಿದ್ದಿದ್ದಾರೆ. ಪ್ರಭಾವಿಗಳು ಗಣಿಗಾರಿಕೆ ನಡೆಸುತ್ತಿರುವ ಕಾರಣಕ್ಕೆ ದೂರು ನೀಡಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. 

ಕಮ್ಮಸಂದ್ರದಲ್ಲಿರುವ ಗೋಮಾಳ ಜಮೀನಿನಲ್ಲಿ ಬಿಳಿ ಕಲ್ಲುಗಳು ಹೇರಳವಾಗಿದೆ. ಈ ಬಿಳಿ ಕಲ್ಲುಗಳನ್ನು ಸಿಡಿಸಿ, ದೊಡ್ಡ ಗಾತ್ರದ ಬ್ಲಾಕ್‌ಗಳನ್ನಾಗಿ ಮಾಡಲಾಗುತ್ತಿದೆ. ಈ ಅಕ್ರಮಗಳು ಗ್ರಾಮದ ಹೊರಭಾಗದಲ್ಲಿ ನಡೆಯುತ್ತಿದ್ದ ಕಾರಣ ಜನರು ಸುಮ್ಮನಿದ್ದರು. ಆದರೆ, ಈಗ ಗ್ರಾಮದ ಮಧ್ಯೆಯೇ ಸ್ಫೋಟಿಸುವ ಪರಿಸ್ಥಿತಿ ಬಂದಿರುವುದರಿಂದ ಮನೆಗಳ ಗೋಡೆ ಬಿರುಕು ಬಿಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. 

ಕಮ್ಮಸಂದ್ರ ಗ್ರಾಮ ಪಂಚಾಯಿತಿ ಕಚೇರಿ ಕೂಗಳತೆಯಲ್ಲೇ ಇಂತಹ ಅಕ್ರಮಗಳು ನಡೆಯುತ್ತಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು  ಕಂಡು ಕಾಣದಂತಿದ್ದಾರೆ ಎಂಬ ಆರೋಪವಿದೆ. ಇದು ಕಂದಾಯ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದ ವಿಷಯ ಎಂದು ಉಪೇಕ್ಷೆ ಮಾಡುತ್ತಿದ್ದಾರೆ ಎನ್ನಲಾಗಿದೆ.  

ಹಾಡುಹಗಲೇ ಕಲ್ಲು ಬಂಡೆ ಸ್ಫೋಟಿಸುವ ಕೆಲಸ ನಡೆಯುತ್ತಿತ್ತು. ಕಂದಾಯ ಇಲ್ಲವೇ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳಲೇ ಇಲ್ಲ. ಈ ಸಂಬಂಧ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಬೆಮಲ್ ಪೊಲೀಸರು ಅಕ್ರಮ ಗಣಿಗಾರಿಕೆಗೆ ತಡೆಯೊಡ್ಡಿದರು ಎಂದು ಕಾಲೊನಿಯ ನಿವಾಸಿಗಳು ಹೇಳುತ್ತಾರೆ. 

ಕಲ್ಲು ಬಂಡೆಗಳನ್ನು ಒಡೆದು ಪ್ರದೇಶವನ್ನು ಸಮತಟ್ಟು ಮಾಡಿ ಅದನ್ನು ನಿವೇಶನವಾಗಿ ಪರಿವರ್ತಿಸಿ ಮಾರಾಟ ಮಾಡುವ ಜಾಲವೂ ಸಕ್ರಿಯವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.  

ಪಂಚಾಯಿತಿ ಕಚೇರಿ ಅಧಿಕಾರಿಗಳ ಪ್ರಕಾರ ಗೋಮಾಳ ಜಮೀನಿನಲ್ಲಿ ಯಾವುದೇ ಇ–ಖಾತೆ ನೀಡಿಲ್ಲ. ಹಿಂದೆ ಕೈ ಬರಹದಲ್ಲಿ ಕೊಟ್ಟಿರುವ ದಾಖಲೆಗಳನ್ನು ಕೆಲವರು ಇಟ್ಟುಕೊಂಡಿದ್ದಾರೆ. 

ಸ್ಥಳ ಪರಿಶೀಲನೆ ನಡೆಸುತ್ತಿರುವ ಕಂದಾಯ ಅಧಿಕಾರಿಗಳು 
ಸ್ಥಳ ಪರಿಶೀಲನೆ ನಡೆಸುತ್ತಿರುವ ಕಂದಾಯ ಅಧಿಕಾರಿಗಳು 

ಭೂ ವಿಜ್ಞಾನ ಇಲಾಖೆಗೆ ತಹಶೀಲ್ದಾರ್ ಪತ್ರ

ತಾಲ್ಲೂಕಿನಲ್ಲಿ ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿರುವುದನ್ನು ಪತ್ತೆ ಹಚ್ಚಿರುವ ತಹಶೀಲ್ದಾರ್ ನಾಗವೇಣಿ ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಚೊಕ್ಕರಬಂಡೆ ನಾಚಾಂಡ್ಲಹಳ್ಲಿ ಬೀರನಕುಪ್ಪ ನೀಲಗಿರಿ ಹಳ್ಳಿಗಳ ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಕಮ್ಮಸಂದ್ರದಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸರ್ವೆ ನಂಬರ್ ಒಂದರ ದಾಖಲೆ ನೀಡುವಂತೆ ಬೇತಮಂಗಲ ನಾಡ ಕಚೇರಿಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT