ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರು ಬಿಸಿಲು; ಸಾವಿರಾರು ಕೋಳಿ ಸಾವು

ಕುಕ್ಕುಟೋದ್ಯಮಕ್ಕೆ ಭಾರಿ ನಷ್ಟ; ಕೋಳಿ ಫಾರಂಗೆ ಸ್ಪಿಂಕ್ಲರ್‌, ಫ್ಯಾನ್‌ ಅಳವಡಿಕೆ
ಕೆ.ಓಂಕಾರ ಮೂರ್ತಿ
Published 3 ಮೇ 2024, 6:35 IST
Last Updated 3 ಮೇ 2024, 6:35 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ದಿನೇದಿನೇ ಉಷ್ಣಾಂಶ ಏರುಮುಖವಾಗುತ್ತಿದ್ದು, ಬಿರು ಬಿಸಿಲಿಗೆ ಕುಕ್ಕುಟೋದ್ಯಮ ತತ್ತರಿಸಿ ಹೋಗಿದೆ.

ವಿಪರೀತ ತಾಪಮಾನದಿಂದ ಜಿಲ್ಲೆಯ ಕೋಳಿ ಫಾರಂಗಳಲ್ಲಿ ಕಳೆದ 20 ದಿನಗಳಿಂದ ಸಾವಿರಾರು ಕೋಳಿಗಳು ಮೃತಪಟ್ಟಿವೆ. ಇದರಿಂದ ಕುಕ್ಕುಟೋದ್ಯಮಗಳು, ವ್ಯಾಪಾರಿಗಳಿಗೆ ಭಾರಿ ನಷ್ಟ ಉಂಟಾಗುತ್ತಿದೆ.

ಜಿಲ್ಲೆಯಲ್ಲಿ 43.5 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ದಾಖಲೆಯಾಗಿದೆ. ಮೇ 5ರವರೆಗೆ ಶಾಖದ ಅಲೆಯ ಮುನ್ನೆಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ನೀಡಿವೆ.

ಜಿಲ್ಲೆಯಲ್ಲಿ ನೂರಾರು ಕೋಳಿ ಫಾರಂಗಳಿವೆ. ಅತಿಯಾದ ಬಿಸಿಲಿನಿಂದ ಕೋಳಿಗಳು ಆಹಾರ ತಿನ್ನುವುದು ಕಡಿಮೆಯಾಗಿದೆ.

ಕೋಲಾರ ತಾಲ್ಲೂಕಿನ ಚೆಲುವನಹಳ್ಳಿ ಗ್ರಾಮದ ತಿಮ್ಮೇಗೌಡ ಎಂಬುವರ ಜಮೀನಿನಲ್ಲಿರುವ ಕೋಳಿ ಫಾರಂನಲ್ಲಿ ಸುಮಾರು 15 ದಿನಗಳಲ್ಲಿ ಸುಮಾರು 300ರಿಂದ 400 ಕೋಳಿಗಳು ಸತ್ತು ಹೋಗಿವೆ. ಬಂಗಾರಪೇಟೆ ತಾಲ್ಲೂಕಿನ ವಿವಿಧ ಕೋಳಿ ಫಾರಂನಲ್ಲಿ ಎರಡು ಸಾವಿರಕ್ಕೂ ಅಧಿಕ ಕೋಳಿಗಳು ಮೃತಪಟ್ಟಿವೆ.

ವಿಧಾನ ಪರಿಷತ್‌ ಸದಸ್ಯ ಹಾಗೂ ಕುಕ್ಕುಟೋದ್ಯಮಿ ಇಂಚರ ಗೋವಿಂದರಾಜು ಅವರ ಕೋಳಿ ಫಾರಂನಲ್ಲೂ 20 ದಿನಗಳಿಂದ ಕೋಳಿಗಳು ಸಾಯುತ್ತಿವೆ.

‘ಗುರುವಾರ ಒಂದೇ ದಿನ 200 ಕೋಳಿಗಳು ಮೃತಪಟ್ಟಿವೆ. ಇವೆಲ್ಲಾ ಮೊಟ್ಟೆ ಇಡುವ ಹಂತಕ್ಕೆ ಬಂದಿದ್ದ ಕೋಳಿಗಳು. ಒಂದೊಂದು ಸರಿಸುಮಾರು ನಾಲ್ಕೈದು ಕೆ.ಜಿ ತೂಗುವ ತಾಯಿ ಕೋಳಿಗಳು. 20 ದಿನಗಳಿಂದ ಸುಮಾರು 2 ಸಾವಿರ ಕೋಳಿಗಳನ್ನು ಗುಂಡಿಗೆ ಹಾಕಿದ್ದೇವೆ‌’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯ ಸರ್ಕಾರಕ್ಕೆ ಕಣ್ಣು ಕಿವಿ ಇಲ್ಲದಾಗಿದೆ. ಪಶುಪಾಲನಾ ಇಲಾಖೆ ಏನೂ ಮಾಡುತ್ತಿಲ್ಲ. ಬರಗಾಲದ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡುತ್ತಾರೆ’ ಎಂದರು.

ಕೋಳಿ ಫಾರಂಗೆ ಹವಾನಿಯಂತ್ರಿತ ವ್ಯವಸ್ಥೆ, ಫ್ಯಾನ್‌ ಅಳವಡಿಕೆ ಮಾಡುತ್ತಿದ್ದಾರೆ. ಆಗಾಗ್ಗೆ ನೀರು ಸಿಂಪಡಿಸುತ್ತಾ ತಂಪು ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಮರಿಗಳು ಕುಡಿಯುವ ನೀರು ಬಿಸಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಬಿಸಿಲ ಝಳಕ್ಕೆ ಸಿಲುಕಿ ಮೃತಪಟ್ಟ ಫಾರಂ ಕೋಳಿ
ಬಿಸಿಲ ಝಳಕ್ಕೆ ಸಿಲುಕಿ ಮೃತಪಟ್ಟ ಫಾರಂ ಕೋಳಿ
ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಅವರ ಕೋಳಿ ಫಾರಂನಲ್ಲಿ ಬಿಸಿಲಿನಿಂದ ಮೃತಪಟ್ಟ ಕೋಳಿಗಳನ್ನು ಗುಂಡಿಗೆ ಹಾಕಿರುವುದು
ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಅವರ ಕೋಳಿ ಫಾರಂನಲ್ಲಿ ಬಿಸಿಲಿನಿಂದ ಮೃತಪಟ್ಟ ಕೋಳಿಗಳನ್ನು ಗುಂಡಿಗೆ ಹಾಕಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT