ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಮಂದಿ ಗುಣಮುಖ: ಆತ್ಮೀಯ ಬೀಳ್ಕೊಡುಗೆ

ಜಿಲ್ಲೆಯಲ್ಲಿ 14ಕ್ಕೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ
Last Updated 29 ಮೇ 2020, 16:31 IST
ಅಕ್ಷರ ಗಾತ್ರ

ಕೋಲಾರ: ಕೊರೊನಾ ಸೋಂಕಿನಿಂದ ತಲ್ಲಣಗೊಂಡಿರುವ ಜಿಲ್ಲೆಯಲ್ಲಿ 5 ಮಂದಿ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ ಮನೆಗೆ ಮರಳಿದ್ದು, ಸೋಂಕಿನ ಕಾರ್ಮೋಡ ಕರಗಲಾರಂಭಿಸಿದೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಮುಳಬಾಗಿಲು ತಾಲ್ಲೂಕಿನಲ್ಲಿ ಮೇ 12ರಂದು ಪತ್ತೆಯಾಗಿದ್ದ 5 ಮಂದಿ ಸೋಂಕಿತರನ್ನು ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಇದೀಗ ಇವರೆಲ್ಲರೂ ಗುಣಮುಖರಾದ ಕಾರಣಕ್ಕೆ ಆಸ್ಪತ್ರೆಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಸೋಂಕಿನ ಕಪಿಮುಷ್ಟಿಗೆ ಸಿಲುಕಿ 18 ದಿನಗಳಿಂದ ಆಸ್ಪತ್ರೆಯಲ್ಲಿ ಬಂಧಿಯಾಗಿದ್ದ ಈ 5 ಮಂದಿಗೆ ವೈದ್ಯಕೀಯ ಸಿಬ್ಬಂದಿಯು ಪುಷ್ಪವೃಷ್ಟಿ ಸುರಿಸಿ ಅಭಿನಂದನೆ ಸಲ್ಲಿಸಿದರು. ಹಣ್ಣು ಹಾಗೂ ಗಿಡ ನೀಡಿ ಆರೋಗ್ಯವಾಗಿರಿ ಎಂದು ಆಶಿಸಿದರು. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14ಕ್ಕೆ ಇಳಿದಿದೆ. ಮುಂದಿನ 2 ದಿನದಲ್ಲಿ ಮತ್ತೆ 6 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳುವ ಸಾಧ್ಯತೆಯಿದೆ.

ಆಸ್ಪತ್ರೆಯಿಂದ ಮನೆಗೆ ಮರಳಿದವರನ್ನು ಬೀಳ್ಕೊಟ್ಟು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ‘ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮುಳಬಾಗಿಲು ತಾಲ್ಲೂಕಿನ 5 ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಬಂದಿದ್ದ ಇವರಿಗೆ ಸೋಂಕು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಆರಂಭಿಸಲಾಯಿತು’ ಎಂದು ತಿಳಿಸಿದರು.

‘ಈ 5 ಮಂದಿಗೆ ಚಿಕಿತ್ಸೆಯ ಹಂತದಲ್ಲಿ ಎರಡು ಬಾರಿ ಕಫಾ ಮಾದರಿಯ ಪರೀಕ್ಷೆ ನಡೆಸಲಾಗಿದೆ. ಇದೀಗ ಇವರೆಲ್ಲಾ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ವರದಿ ಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಕೊರೊನಾ ಸೋಂಕಿನ ಬಗ್ಗೆ ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ. ಜನರು ಮುನ್ನೆಚ್ಚರಿಕೆ ವಹಿಸಿದರೆ ಸೋಂಕಿನಿಂದ ದೂರ ಉಳಿಯಬಹುದು. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14ಕ್ಕೆ ಇಳಿದಿದ್ದು, ಉಳಿದ ಎಲ್ಲಾ ಸೋಂಕಿತರು ಶೀಘ್ರವೇ ಗುಣಮುಖರಾಗುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

14 ದಿನ ಕ್ವಾರಂಟೈನ್‌: ‘ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ 5 ಮಂದಿಯನ್ನು ಅವರ ಮನೆಗಳಲ್ಲೇ 14 ದಿನಗಳ ಕಾಲ ಪ್ರತ್ಯೇಕ ನಿಗಾದಲ್ಲಿ (ಕ್ವಾರಂಟೈನ್‌) ಇರಿಸಲಾಗುತ್ತದೆ. ಅವರ ಆರೋಗ್ಯ ಕುರಿತು ಪ್ರತಿನಿತ್ಯ ಮಾಹಿತಿ ಸಂಗ್ರಹಿಸಲಾಗುತ್ತದೆ’ ಎಂದು ಜಿಲ್ಲಾ ಸರ್ವೇಕ್ಷಣಾಕಾರಿ ಡಾ.ಚಾರಿಣಿ ಮಾಹಿತಿ ನೀಡಿದರು.

ಒಟ್ಟಾರೆ 6 ಮಂದಿ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದರಿಂದ ಅವರೆಲ್ಲರನ್ನೂ ಆಸ್ಪತ್ರೆಯಿಂದ ಮನೆಗೆ ಕಳುಹಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಒಬ್ಬರಿಗೆ ಸೋಂಕು ಇನ್ನೂ ವಾಸಿಯಾಗಿಲ್ಲ ಎಂದು ಬೆಂಗಳೂರಿನ ಪ್ರಯೋಗಾಲಯದಿಂದ ವೈದ್ಯಕೀಯ ವರದಿ ಬಂದಿತು. ಹೀಗಾಗಿ ಜಿಲ್ಲಾಡಳಿತವು ಅವರನ್ನು ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲೇ ಕ್ವಾರಂಟೈನ್‌ ಮಾಡಿ ಚಿಕಿತ್ಸೆ ಮುಂದುವರಿಸುವ ನಿರ್ಧಾರ ಕೈಗೊಂಡಿತು.

ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಸಿಇಒ ಎಚ್.ವಿ.ದರ್ಶನ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಉಪ ವಿಭಾಗಾಧಿಕಾರಿ ಸೋಮಶೇಖರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್‌ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT