ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಲಕ್ಷ್ಮಿ ಯೋಜನೆ: ಸಿಗದ ಸರ್ವರ್, ಕೆರಳಿದ ಮಹಿಳೆಯರು

ಕೇಂದ್ರದ ಸಿಬ್ಬಂದಿ, ನಾರಿಯರ ನಡುವೆ ವಾಗ್ವಾದ
Published 25 ಜುಲೈ 2023, 13:42 IST
Last Updated 25 ಜುಲೈ 2023, 13:42 IST
ಅಕ್ಷರ ಗಾತ್ರ

ಕೆಜಿಎಫ್‌: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಲು ಸಾವಿರಾರು ಮಹಿಳೆಯರು ನಗರದ ವಿವಿಧ ನಗರಸಭೆ ಕೇಂದ್ರದಲ್ಲಿ ಜಮಾಯಿಸಿ, ಸರ್ವರ್ ಸಿಗದೆ ನಿರಾಶರಾಗಿ ಹೋದ ಘಟನೆ ಮಂಗಳವಾರ ನಡೆದಿದೆ.

ಉಚಿತ ನೋಂದಣಿಗಾಗಿ ನಗರಸಭೆಯ ಐದು ವಾರ್ಡ್‌ಗಳಿಗೆ ಒಂದರಂತೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಒಂದು ಕೇಂದ್ರಕ್ಕೆ ಏಳು ವಾರ್ಡ್‌ ನಿವಾಸಿಗಳನ್ನು ಜೋಡಿಸಲಾಗಿತ್ತು. ಹಾಗಾಗಿ ಮುಂಜಾನೆಯಿಂದಲೇ ಕೇಂದ್ರಗಳ ಬಳಿ ಮಹಿಳೆಯರು ಜಮಾಯಿಸಿದ್ದು, ಮಧ್ಯಾಹ್ನವಾದರೂ ನೋಂದಣಿ ಮಾಡಿಸಲು ಸಾಧ್ಯವಾಗದೆ ಇದ್ದುದಕ್ಕೆ ಅಸಮಾಧಾನಗೊಂಡು ಕೇಂದ್ರದ ಸಿಬ್ಬಂದಿ ಮೇಲೆ ವಾಗ್ವಾದ ನಡೆಸಿದರು.

ಊರಿಗಾಂನ ನೆಹರು ಕಲ್ಯಾಣ ಮಂಟಪದಲ್ಲಿ ಮಹಿಳೆಯರು ಧರಣಿ ಮಾಡುವ ಮಟ್ಟಕ್ಕೆ ಹೋಗಿದ್ದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸರ್ವರ್ ಸಿಗದ ಕಾರಣ, ಮಹಿಳೆಯರ ಕಾಟ ತಪ್ಪಿಸಿಕೊಳ್ಳಲು ಸಿಬ್ಬಂದಿ ಕೇಂದ್ರ ಮುಚ್ಚಿ ವಾಪಸ್ ಹೋದರು.

ನಗರಸಭೆ ಕಚೇರಿಯಲ್ಲಿ ಕೂಡ ಬೆಳಿಗ್ಗೆಯಿಂದಲೇ ನೂರಾರು ಮಹಿಳೆಯರು ಸಭಾಂಗಣದಲ್ಲಿ ಕುಳಿತು ತಮ್ಮ ಸರದಿಗಾಗಿ ಕಾಯುತ್ತಿದ್ದರು. ನಿನ್ನೆ ಕೊಟ್ಟಿದ್ದ ಅರ್ಜಿಗಳನ್ನೇ ಇನ್ನೂ ಅಪ್ ಲೋಡ್ ಮಾಡಲು ಸಾಧ್ಯವಾಗಿಲ್ಲ. ಇಂದು ಹೊಸ ಅರ್ಜಿಗಳನ್ನು ಎಲ್ಲಿ ಅಪ್‌ ಲೋಡ್ ಮಾಡುವುದು ಎಂದು ನಗರಸಭೆ ಸಿಬ್ಬಂದಿ ಕೈ ಚೆಲ್ಲಿ ಕುಳಿತಿದ್ದರು.

ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ನಿನ್ನೆ ನಗರದ ಏಳು ಕೇಂದ್ರಗಳಲ್ಲಿ ಒಟ್ಟು 182 ಅರ್ಜಿಗಳನ್ನು ಮಾತ್ರ ಅಪ್‌ಲೋಡ್ ಮಾಡಲಾಗಿದೆ. ಒಂದು ಅರ್ಜಿ ಅಪ್‌ಲೋಡ್ ಮಾಡಲು ಕೇವಲ ಎರಡು ಅಥವಾ ಮೂರು ನಿಮಿಷ ಸಾಕು. ಆದರೆ ಸರ್ವರ್ ಸಿಗದಿರುವುದರಿಂದ ಗಂಟೆಗಟ್ಟಲೆ ಲ್ಯಾಪ್ ಟಾಪ್‌ ಮುಂದೆ ಕುಳಿತರಬೇಕಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ಪರವಾನಿಗೆ ಪಡೆದ ಸೈಬರ್ ಸೆಂಟರ್‌ಗಳಲ್ಲಿ ಕೂಡ ಅರ್ಜಿ ಹಾಕಲಾಗುತ್ತಿದ್ದು, ಒಂದು ಅರ್ಜಿ ಹಾಕಲು ₹50 ಪಡೆಯಲಾಗುತ್ತಿದೆ ಎಂಬುದು ಅರ್ಜಿದಾರರ ಮಾತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT