ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೌನ್ಸಿಲರ್ ಸೀನಪ್ಪ ಬರ್ಬರ ಹತ್ಯೆ

ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಆಪ್ತ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ್
Published 23 ಅಕ್ಟೋಬರ್ 2023, 11:01 IST
Last Updated 23 ಅಕ್ಟೋಬರ್ 2023, 11:01 IST
ಅಕ್ಷರ ಗಾತ್ರ

ಶ್ರೀನಿವಾಸಪುರ (ಕೋಲಾರ): ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಆಪ್ತ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ (ಕೌನ್ಸಿಲರ್ ಸೀನಪ್ಪ) ಎಂಬುವರನ್ನು ಸೋಮವಾರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಬಾರ್ ಕಟ್ಟಡ ಕಾಮಗಾರಿ ವೀಕ್ಷಣೆಗೆ ಹೋಗಿದ್ದ ವೇಳೆ‌ ಶ್ರೀನಿವಾಸಪುರ ಪಟ್ಟಣದ ಹೊರವಲಯದ ಹೊಗಳಗೆರೆ ಬಳಿ ಆರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಶ್ರೀನಿವಾಸನ್ (62) ಅವರನ್ನು ತಕ್ಷಣ ಕೋಲಾರದ ಜಾಲಪ್ಪ ಆಸ್ಪತ್ರೆಗೆ ರವಾನಿಸಲಾಯಿತು.‌ ಆಸ್ಪತ್ರೆಯಲ್ಲಿ ಮೃತರಾದರು. ಕಾಂಗ್ರೆಸ್ ಮುಖಂಡರಾಗಿದ್ದ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಆಸ್ಪತ್ರೆಗೆ ಧಾವಿಸಿ ಬಂದ ರಮೇಶ್ ಕುಮಾರ್ ತಮ್ಮ ಆಪ್ತನನ್ನು ನೆನೆದು ಕಣ್ಣೀರಿಟ್ಟರು. ರಾಜಕೀಯ ವೈಷಮ್ಯ ಹಾಗೂ ಆಸ್ತಿ ವಿವಾದ ಹತ್ಯೆಗೆ ಕಾರಣ ಎನ್ನಲಾಗಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹಾಗೂ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗೆ ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಿದ್ದಾರೆ.

ಘಟನಾ ಸ್ಥಳಕ್ಕೆ ಶ್ವಾನ ದಳ ಕರೆಸಿ ಪರಿಶೀಲಿಸಲಾಯಿತು. ಮಾರಕಾಸ್ತ್ರ ತುಂಬಿಕೊಂಡು ಬಂದಿದ್ದ ಚೀಲ ಪತ್ತೆಯಾಗಿದೆ. ಮುಖಕ್ಕೆ ಪೆಪ್ಪರ್‌ ಸ್ಪ್ರೇ ಮಾಡಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.

ಶ್ರೀನಿವಾಸನ್ ಜೆಡಿಎಸ್ ಪಕ್ಷದಿಂದ ತಾಲ್ಲೂಕಿನ ಗೌನಪಲ್ಲಿ ಕ್ಷೇತ್ರದಿಂದ 2009ರಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಅವರು ಐದು ವರ್ಷದ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಪುರಸಭೆ ಸದಸ್ಯ, ಎಪಿಎಂಸಿ ಅಧ್ಯಕ್ಷರೂ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT