ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಕಲಿಕೆಗೆ ಬೇಕು ಕಂಪ್ಯೂಟರ್, ಬೆಳಕಿಗೆ ಯುಪಿಎಸ್

Published 23 ಡಿಸೆಂಬರ್ 2023, 6:39 IST
Last Updated 23 ಡಿಸೆಂಬರ್ 2023, 6:39 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮದ ಹೊರವಲಯದಲ್ಲಿ ಎತ್ತರ ಪ್ರದೇಶದಲ್ಲಿ 10 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಣ್ಣಪುಟ್ಟ ಸಮಸ್ಯೆಗಳ ನಡುವೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿ ವರೆಗೆ 236 ಮಕ್ಕಳು ಕಲಿಯುತ್ತಿದ್ದಾರೆ. ಆ ಪೈಕಿ ಗಂಡು ಮಕ್ಕಳ ಸಂಖ್ಯೆ 128 ಹಾಗೂ ಹೆಣ್ಣು ಮಕ್ಕಳ ಸಂಖ್ಯೆ 108. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ಹಾಸ್ಟೆಲ್‌ಗಳಿವೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಒಟ್ಟು 40ಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಕುಡಿಯುವ ನೀರಿಗೆ ಒಂದು ಫಿಲ್ಟರ್ ಅಳವಡಿಸಲಾಗಿದೆ. ಸುಸಜ್ಜಿತವಾದ ಅಡುಗೆ ಮನೆ ಹಾಗೂ ಡೈನಿಂಗ್ ಹಾಲ್ ಇದೆ. ಪ್ರತಿದಿನ ನಿಯಮಾನುಸಾರ ಮೆನು ಇರುತ್ತದೆ. ದಿನ ಬಿಟ್ಟು ದಿನ ಮೊಟ್ಟೆ, ಬಾಳೆ ಹಣ್ಣು ಹಾಗೂ ಭಾನುವಾರ ಮಾಂಸದೂಟ ನೀಡಲಾಗುತ್ತಿದೆ.

7 ಮಂದಿ ಅತಿಥಿ ಶಿಕ್ಷಕರು ಹಾಗೂ ಪ್ರಾಂಶುಪಾಲರು ಕಾರ್ಯನಿರ್ವಹಿಸುತ್ತಿದ್ದಾರೆ. 5 ಮಂದಿ ಅಡುಗೆಯವರಿದ್ದಾರೆ. ಇಬ್ಬರು ವಾಚ್‌ಮನ್‌ ಹಾಗೂ ಒಬ್ಬ ನರ್ಸ್ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಂಶುಪಾಲರ ಅನುಮತಿ ಇಲ್ಲದೆ ಯಾರನ್ನೂ ಒಳಗೆ ಬಿಡುವುದಿಲ್ಲ. ಪ್ರತಿ ಶನಿವಾರ ವಿದ್ಯಾರ್ಥಿಗಳನ್ನು ಭೇಟಿಯಾಗಲು ಪೋಷಕರಿಗೆ ಅವಕಾಶ ಕಲ್ಪಿಸಲಾಗಿದೆ.

ವಿಶಾಲವಾದ ಶಾಲಾ ಪ್ರದೇಶದ ಮೂರು ಕಡೆ ಪಕ್ಕಾ ಕಾಂಪೌಂಡ್ ನಿರ್ಮಿಸಲಾಗಿದೆ. ಪಶ್ಚಿಮ ದಿಕ್ಕಿನಲ್ಲಿ ಅರ್ಥ ಭಾಗಕ್ಕೆ ಮಾತ್ರ ಕಾಂಪೌಂಡ್ ನಿರ್ಮಿಸಲಾಗಿದೆ. ಉಳಿದ ಭಾಗಕ್ಕೆ ಮೆಷ್ ಕಾಂಪೌಂಡ್ ಇದೆ. ಪಕ್ಕಾ ಕಾಂಪೌಂಡ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

236 ಮಕ್ಕಳಿಗೆ ಒಂದು ಫಿಲ್ಟರ್‌ನಿಂದ ಕುಡಿಯುವ ನೀರು ನೀಡಲಾಗುತ್ತದೆ. ಮಕ್ಕಳ ಅನುಕೂಲದ ದೃಷ್ಟಿಯಿಂದ ಇನ್ನೊಂದು ಫಿಲ್ಟರ್ ಅಗತ್ಯವಿದೆ. ಶಾಲೆಗೆ 24 ಗಂಟೆ ವಿದ್ಯುತ್ ಪೂರೈಸುವ ಯೋಜನೆಯಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಆದರೆ ಯುಪಿಎಸ್ ಸೌಲಭ್ಯ ಇಲ್ಲ. ರಾತ್ರಿ ಹೊತ್ತು ವಿದ್ಯುತ್ ಕೈಕೊಟ್ಟರೆ ಸಮಸ್ಯೆಯಾಗುತ್ತದೆ.

ಶಾಲೆಗೆ ಒಂದು ಕೊಳವೆ ಬಾವಿ ಕೊರೆಯಲಾಗಿದ್ದು, ಹಿಂದೆ ಬತ್ತಿಹೋಗಿತ್ತು. ಈ ಮಧ್ಯೆ ಅದೇ ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿಯಾಗಿ ಒಂದು ಕೊಳವೆ ಬಾವಿ ನಿರ್ಮಿಸಬೇಕಾದ ಅಗತ್ಯವಿದೆ. ಶಾಲೆಯಲ್ಲಿ ಶಾಲಾ ಕಚೇರಿ ಬಳಕೆಗೆ ಒಂದು ಕಂಪ್ಯೂಟರ್ ಮಾತ್ರ ಇದೆ. ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ನೀಡಲು ಅಗತ್ಯ ಸಂಖ್ಯೆಯ ಕಂಪ್ಯೂಟರ್‌ಗಳ ಅಗತ್ಯವಿದೆ.

‘ಶಾಲೆಯಲ್ಲಿ ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ದಿನ ಮೆನು ಪ್ರಕಾರ ರುಚಿಯಾದ ಹಾಗೂ ಶುಚಿಯಾದ ಆಹಾರ ನೀಡಲಾಗುತ್ತಿದೆ. ಶಿಕ್ಷಕರು ಸಾಮಾನ್ಯ ತರಗತಿಗಳ ಜತೆಗೆ ವಿಶೇಷ ತರಗತಿಗಳನ್ನು ತೆಗೆದುಕೊಂಡು ಬೋಧಿಸುತ್ತಾರೆ. ನಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಯಾವುದೇ ಸಮಸ್ಯೆ ಇಲ್ಲ’ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ.

ಹೆಚ್ಚುವರಿ ಕೊಳವೆ ಬಾವಿ ನಿರ್ಮಿಸಿ

ಶಾಲೆಯಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ. ಆದರೂ ಯುಪಿಎಸ್ ಒದಗಿಸಲು ಪಕ್ಕಾ ಕಾಂಪೌಂಡ್ ನಿರ್ಮಿಸಲು ಹೆಚ್ಚುವರಿ ಕೊಳವೆ ಬಾವಿ ನಿರ್ಮಿಸಲು ಮಕ್ಕಳ ಕಲಿಕೆಗೆ ಕಂಪ್ಯೂಟರ್ ಒದಗಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಸೂಚನೆಯಂತೆ ಗ್ರಾಮ ಪಂಚಾಯಿತಿಯಿಂದ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ ಜಿ.ಸುರೇಶ್ ಬಾಬು ಪ್ರಾಂಶುಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT