ಕೋಲಾರ: ರಾಜ್ಯ ಸರ್ಕಾರವು ಪರಿಶಿಷ್ಟ ಸಮುದಾಯದ ಎಸ್‌ಸಿಪಿ, ಟಿಎಸ್‌ಪಿ ಅನುದಾನ ₹25 ಸಾವಿರ ಕೋಟಿ ಪಲ್ಲಟ ಮಾಡಿರುವುದನ್ನು ವಿರೋಧಿಸಿ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಬಂಗಾರಪೇಟೆ ಮೀಸಲು ಕ್ಷೇತ್ರ ಹಾಗೂ ಕೆಜಿಎಫ್ ಮೀಸಲು ಕ್ಷೇತ್ರದ ಶಾಸಕರ ನಿವಾಸದ ಎದುರು ಹೋರಾಟ ಹಮ್ಮಿಕೊಂಡಿರುವುದಾಗಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅನುದಾನ ದುರ್ಬಳಕೆ ಬಗ್ಗೆ ಮೀಸಲು ಕ್ಷೇತ್ರದ ಶಾಸಕರು ಈವರೆಗೆ ಧ್ವನಿ ಎತ್ತಿಲ್ಲ ಮತ್ತು ಪ್ರಶ್ನಿಸಿಲ್ಲ. ಹೀಗಾಗಿ, ‘ಹೊತ್ತಿ ಉರಿಯುತ್ತಿದೆ ನಮ್ಮ ಮನೆ, ಚಲೊ ದಲಿತ ಶಾಸಕರ ಮನೆ’ ಹೆಸರಿನ ಹೋರಾಟವನ್ನು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ಕೋಲಾರ-ಬಂಗಾರಪೇಟೆಯ ಮುಖ್ಯರಸ್ತೆಯಲ್ಲಿರುವ ಎಸ್.ಎನ್.ಸಿಟಿ ಎದುರು ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ವಿರುದ್ಧ ಕೆಜಿಎಫ್ ನಗರದಲ್ಲಿರುವ ಅವರ ನಿವಾಸದ ಎದುರು ಏಕಕಾಲದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದರು.
‘ಬಂಗಾರಪೇಟೆ ಶಾಸಕರ ನಿವಾಸದ ಎದುರಿನ ಹೋರಾಟವು ನನ್ನ ನೇತೃತ್ವದಲ್ಲಿ ಹಾಗೂ ಕೆಜಿಎಫ್ ಶಾಸಕರ ನಿವಾಸದ ಎದುರು ಎನ್. ವೆಂಕಟೇಶ್ ನೇತೃತ್ವದಲ್ಲಿ ಹೋರಾಟ ನಡೆಯಲಿದೆ. ಜಿಲ್ಲೆಯ ದಲಿತ, ರೈತ, ಮಹಿಳಾ, ವಿದ್ಯಾರ್ಥಿ, ಯುವಜನ, ಕಾರ್ಮಿಕ ಸಂಘಟನೆಗಳು, ಬಣಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
‘ಹೋರಾಟದ ವಿಚಾರವಾಗಿ ಆರು ತಾಲ್ಲೂಕುಗಳಲ್ಲಿನ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಲಾಗಿದೆ. ಎಲ್ಲರೂ ನಮ್ಮ ಜತೆಗಿದ್ದು, ಮುಂದಿನ ದಿನಗಳಲ್ಲಿ ಬೇರೊಂದು ಹೆಜ್ಜೆ ಇಡಬೇಕು. ಸಾಂಕೇತಿಕ ಪ್ರಯತ್ನ ನಮ್ಮದಾಗಿದ್ದು, ಮುಂದೆ ಇಡೀ ರಾಜ್ಯದಲ್ಲಿ ಆರಂಭಗೊಳ್ಳಲಿದೆ. ಮುಳಬಾಗಲು ಶಾಸಕ ಸಮೃದ್ಧಿ ಮಂಜುನಾಥ್ ಈಗಾಗಲೇ ಈ ವಿಚಾರವಾಗಿ ಧ್ವನಿ ಎತ್ತಿದ್ದಾರೆ. ಹೀಗಾಗಿ, ಅವರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿಲ್ಲ’ ಎಂದರು.
‘ಪರಿಶಿಷ್ಟ ಸಮುದಾಯಗಳಿಗೆ ಮೀಸಲಿಟ್ಟ ಅನುದಾನ ಕಾಂಗ್ರೆಸ್ ಸರ್ಕಾರದಲ್ಲಿ ದುರ್ಬಳಕೆಯಾಗಿದೆ. ಹಾಗೆಯೇ ಈ ಹಿಂದೆ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕಡೆಯವರೆಗೂ ಬಳಕೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಬೇರೆ ಉದ್ದೇಶಗಳಿಗೆ ಸುಮಾರು ₹2.56 ಲಕ್ಷ ಕೋಟಿ ಬಳಕೆ ಮಾಡಿಕೊಳ್ಳಲಾಗಿದೆ. ಈಗಿನದ್ದು ಸೇರಿ ಒಟ್ಟು ₹3 ಲಕ್ಷ ಕೋಟಿಯಲ್ಲಿ ಪ್ರತ್ಯೇಕ ಬಜೆಟ್ ಮಂಡಿಸಬೇಕು. ದೆಹಲಿಯ ಎಎಪಿ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡಿರುವಂತೆ ಸ್ಮಾರ್ಟ್ ಶಿಕ್ಷಣ ಆರಂಭಿಸಬೇಕು. ಕಿಷ್ಕಿಂಧೆಯಂತಿರುವ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಿಸಬೇಕೆಂದು ಆಗ್ರಹಿಸಲಾಗುವುದು’ ಎಂದು ಹೇಳಿದರು.
ಮುಖಂಡ ಹೂಹಳ್ಳಿ ಪ್ರಕಾಶ್ ಮಾತನಾಡಿ, ‘ರಾಜ್ಯ ಸರ್ಕಾರವು ಗ್ಯಾರಂಟಿಗಳಿಗಾಗಿ ನಮ್ಮ ಸಮುದಾಯಗಳ ₹25 ಸಾವಿರ ಕೋಟಿ ದುರ್ಬಳಕೆ ಮಾಡಬೇಕೇ? ಒಂದು ಸಮುದಾಯಕ್ಕೆ ₹10 ಸಾವಿರ ಕೋಟಿ ನೀಡಿದ್ದನ್ನು ಅದನ್ನು ಗ್ಯಾರಂಟಿಗೆ ಬಳಸಿಕೊಂಡಿದ್ದೀರಾ? ಅವರಿಗೂ ಗ್ಯಾರಂಟಿ ನೀಡಲಾಗುತ್ತಿದೆಯಲ್ಲವೇ’ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ದಲಿತ್ ನಾರಾಯಣಸ್ವಾಮಿ, ಹಾರೋಹಳ್ಳಿ ರವಿ, ರೇಣುಕಾಪ್ರಸಾದ್, ಸುಬ್ಬರಾಯಪ್ಪ, ಅನಂತಕೀರ್ತಿ, ಚಂದ್ರಶೇಖರ್ ಇದ್ದರು.
‘ಬಿಜೆಪಿ ಕಾಂಗ್ರೆಸ್ ಒಂದೇ ದೇಹ ಎರಡು ತಲೆ’ ‘ಬಿಜೆಪಿ ಆರ್‌ಎಸ್‍ಎಸ್ ಬಜರಂಗದಳ ಹುಟ್ಟಲು ಕಾಂಗ್ರೆಸ್ ನೇರ ಕಾರಣವಾಗಿದ್ದು ಬಿಜೆಪಿ ಕಾಂಗ್ರೆಸ್ ಒಂದೇ ದೇಹ ಇರುವ ಎರಡು ತಲೆ ಹಾವು. ಅವರ ಹಿತಾಸಕ್ತಿಗಳು ಒಂದೇ ಆಗಿವೆ’ ಎಂದು ಎಂದು ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು. ‘ಸಿದ್ದರಾಮಯ್ಯ ಐದು ವರ್ಷ ಅಧಿಕಾರದಲ್ಲಿರಲು ನಮ್ಮ ವಿರೋಧವಿಲ್ಲ. ಹಸಿವು ಮುಕ್ತ ಕರ್ನಾಟಕ ಅಂಗನವಾಡಿಗಳ ಅಭಿವೃದ್ಧಿಗೆ ಕ್ರಮಕೈಗೊಂಡಿರುವಂತೆ ಸಾಮಾಜಿಕ ನ್ಯಾಯಕ್ಕೂ ಕ್ರಮ ಕೈಗೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.