ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಮೀಸಲು ಲೋಕಸಭಾ ಕ್ಷೇತ್ರ: ಯಾರೇ ಸ್ಪರ್ಧಿಸಿದರೂ ಒಳೇಟು?

ಕೋಲಾರ: 2019ರ ಚುನಾವಣೆಯ ಪರಿಸ್ಥಿತಿ ಮರುಕಳಿಸುವ ಆತಂಕದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು
Published 29 ಮಾರ್ಚ್ 2024, 21:03 IST
Last Updated 29 ಮಾರ್ಚ್ 2024, 21:03 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿನ ಸದ್ಯದ ಒಳಬೇಗುದಿ ಗಮನಿಸಿದರೆ ಅಭ್ಯರ್ಥಿಯಾಗಿ ಸ್ಥಳೀಯರೋ, ಹೊರಗಿನವರೋ, ಮೂರನೇ ವ್ಯಕ್ತಿಯೋ, ಕುಟುಂಬದವರೂ ಯಾರೇ ಸ್ಪರ್ಧಿಸಿದರೂ ಒಳೇಟು ಗ್ಯಾರಂಟಿ ಎಂಬಂಥ ಪರಿಸ್ಥಿತಿ ನೆಲೆಸಿದೆ.

2019ರ ಲೋಕಸಭೆ ಚುನಾವಣೆಯಲ್ಲಿನ ವಾತಾವರಣ ಮರುಕಳಿಸುವ ಆತಂಕದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿದ್ದಾರೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರನ್ನು ಮಾತನಾಡಿಸಿದರೂ ಅದೇ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ನಲ್ಲಿ ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಹಾಗೂ ಸಚಿವ ಕೆ.ಎಚ್‌.ಮುನಿಯಪ್ಪ ಬಣಗಳ ಕಿತ್ತಾಟ, ಎಡ–ಬಲ ಸಮುದಾಯದ ಗೊಂದಲ, ಮುಖಂಡರ ನಡುವಿನ ಅಸಹನೆ, ವೈಮನಸ್ಯ ಪಕ್ಷದ ವಿಶ್ವಾಸವನ್ನೇ ಕಿತ್ತುಕೊಂಡಿರುವಂತಿದೆ. ಅದಕ್ಕೆ ಕ್ಷೇತ್ರದ ಕೆಲ ಶಾಸಕರ ರಾಜೀನಾಮೆ ಪ್ರಹಸನ ಹಾಗೂ ಪರಸ್ಪರ ಮಾತಿನ ವಾಗ್ದಾಳಿ ಹೊಸದಾಗಿ ಸೇರ್ಪಡೆಯಾಗಿದೆ.

ಇದೇ ಕಾರಣಕ್ಕೆ ಕೆ.ಎಚ್‌.ಮುನಿಯಪ್ಪ ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ನಾನು ಹಾಗೂ ರಮೇಶ್‌ ಕುಮಾರ್ ಒಂದಾಗದೇ ಕೋಲಾರ ಕ್ಷೇತ್ರ ಗೆಲ್ಲಲಾಗದು. ಮೂರನೇ ಅಭ್ಯರ್ಥಿ ಬಂದರೂ ಗೆಲುವು ಕಷ್ಟ’ ಎಂದು ಸೂಚ್ಯವಾಗಿ ಹೇಳಿದ್ದಾರೆ.

1991ರಿಂದ ಸತತ ಏಳು ಬಾರಿ ಗೆದ್ದಿದ್ದ ಕೆ.ಎಚ್‌.ಮುನಿಯಪ್ಪ, ಕಳೆದ ಚುನಾವಣೆಯಲ್ಲಿ 2 ಲಕ್ಷ ಮತಗಳಿಂದ ಬಿಜೆಪಿಯ ಎಸ್‌.ಮುನಿಸ್ವಾಮಿ ಎದುರು ಪರಾಭವಗೊಳ್ಳಲು ಪಕ್ಷದೊಳಗಿನ ಒಳೇಟು ಕಾರಣ ಎಂಬುದು ಜಗಜ್ಜಾಹೀರಾಗಿತ್ತು.

ಆ ಚುನಾವಣೆಯಲ್ಲಿ ಡಾ.ಎಂ.ಸಿ.ಸುಧಾಕರ್‌, ಕೊತ್ತೂರು ಮಂಜುನಾಥ್‌ ಸೇರಿದಂತೆ ರಮೇಶ್‌ ಕುಮಾರ್‌ ಬಣದಲ್ಲಿ ಗುರುತಿಸಿಕೊಂಡಿದ್ದ ಹಲವರು ಬಹಿರಂಗವಾಗಿ ಮುನಿಯಪ್ಪ ವಿರುದ್ಧ ಕೆಲಸ ಮಾಡಿದ್ದರು. ‘ಮುನಿಸ್ವಾಮಿ ಗೆಲ್ಲಿಸಲು ನಾವು ಕೆಲಸ ಮಾಡಿದೆ’ ಎಂಬುದಾಗಿ ಶಾಸಕ ಕೊತ್ತೂರು ಮಂಜುನಾಥ್‌ ಈಗಲೂ ಹೇಳುತ್ತಿರುತ್ತಾರೆ. 

ಈಗಲೂ ಟಿಕೆಟ್‌ ವಿಚಾರದಲ್ಲಿ ತಿಂಗಳಿಂದ ನಡೆಯುತ್ತಿರುವ ಪ್ರಹಸನ ಮತ್ತೊಂದು ಸೋಲಿಗೆ ಮುನ್ನುಡಿ ಬರೆಯುವ ಲಕ್ಷಣಗಳನ್ನು ತೋರಿಸುತ್ತಿದೆ. ಜೆಡಿಎಸ್‌–ಬಿಜೆಪಿ ಮೈತ್ರಿಕೂಟದವರು ‘ಈ ಬಾರಿಯೂ ಗೆಲುವು ನಮ್ಮದೇ’ ಎಂದು ಬೀಗುವ ಹಂತಕ್ಕೆ ತಲುಪಿದ್ದಾರೆ. ಅದಕ್ಕೆ ತಕ್ಕತೆ ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ.

ಇತ್ತ ಕ್ಷೇತ್ರದಲ್ಲಿ ರಮೇಶ್‌ ಕುಮಾರ್‌ ಬಣದ ವಿರೋಧ ಇದ್ದರೂ ಟಿಕೆಟ್‌ ಕೊಟ್ಟರೆ ತಮ್ಮ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ ಅವರನ್ನು ಗೆಲ್ಲಿಸಿಕೊಂಡು ಬರುವ ಮಾತನ್ನು ಆಪ್ತರ ಬಳಿ ಕೆ.ಎಚ್‌.ಮುನಿಯಪ್ಪ ಹೇಳುತ್ತಲೇ ಇದ್ದಾರೆ. 

‘2019ರ ಲೋಕಸಭೆ ಚುನಾವಣೆಯಲ್ಲಿ ಹಲವರು ನನ್ನ ವಿರುದ್ಧ ಕೆಲಸ ಮಾಡಿದ್ದರೂ 5 ಲಕ್ಷಕ್ಕೂ ಅಧಿಕ ಮತ ಪಡೆದಿದ್ದೆ. ಅದಕ್ಕೂ ಮೊದಲಿನ ಚುನಾವಣೆಯಲ್ಲಿ ಗೆದ್ದಾಗ ನಾನು ಪಡೆದಿದ್ದು ನಾಲ್ಕೂವರೆ ಲಕ್ಷ ಮತ ಅಷ್ಟೆ’ ಎಂದು ಈಚೆಗೆ ಅವರು ಸುದ್ದಿಗಾರರಿಗೆ ತಿಳಿಸಿದ್ದರು.

ಮುನಿಯಪ್ಪ ಆಪ್ತರು ಹೇಳುವಂತೆ, ಕ್ಷೇತ್ರದಲ್ಲಿ ರಮೇಶ್‌ ಕುಮಾರ್‌ ಬಣದವರ ಬೆಂಬಲವೇ ಬೇಕಿಲ್ಲ. ಆದರೆ, ಅವರು ಪಕ್ಷಕ್ಕೆ ಧಕ್ಕೆಯಾಗುವ ಹೇಳಿಕೆ ನೀಡದೆ ಮೌನವಾಗಿದ್ದರೆ ಸಾಕು. ಅಳಿಯನನ್ನು ಗೆಲ್ಲಿಸಿಕೊಂಡು ಬರಲು ಮುನಿಯಪ್ಪ ಸಿದ್ಧರಿದ್ದರಿದ್ದರಂತೆ.

ಇಷ್ಟಾದರೂ ಬಣಗಳನ್ನು ಒಂದಾಗಿಸಲು ರಾಜ್ಯ ಕಾಂಗ್ರೆಸ್‌ನ ವರಿಷ್ಠರ ಮಟ್ಟದಲ್ಲಾಗಲಿ, ಹೈಕಮಾಂಡ್‌ ಮಟ್ಟದಲ್ಲಾಗಲಿ ‌ಪ್ರಯತ್ನಗಳು ನಡೆಯುತ್ತಿಲ್ಲ. ಏಕೆಂದರೆ ಬಣಗಳ ಜಗಳ ನಿನ್ನೆ ಮೊನ್ನೆಯದಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಮುಂದಾಗಿದ್ದ ಸಿದ್ದರಾಮಯ್ಯ, ಇಲ್ಲಿನ ಬಣ
ರಾಜಕೀಯ ಕಂಡು ಜಾಗ ಖಾಲಿ ಮಾಡಿದ್ದರು.

ಮುನಿಯಪ್ಪ
ಮುನಿಯಪ್ಪ
ರಮೇಶ್‌ ಕುಮಾರ್ ಬಣದವರಿಗೂ ಬೇಡ ಮುನಿಯಪ್ಪ ಬಣದವರಿಗೂ ಬೇಡವೆಂದು 3ನೇ ವ್ಯಕ್ತಿಗೆ ಟಿಕೆಟ್‌ ನೀಡಿದರೆ ಯಾರೂ ಕೆಲಸ ಮಾಡಲ್ಲ. ಬರುವ ಅಭ್ಯರ್ಥಿ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾರೆ
–ಕೆ.ಎಚ್‌.ಮುನಿಯಪ್ಪ ಆಹಾರ ಸಚಿವ
ಸಿ.ಎಂ ಡಿಸಿಎಂ ನಮ್ಮ ವಿಚಾರಗಳನ್ನು ಈಗಾಗಲೇ ತಿಳಿಸಿದ್ದೇವೆ. ಹೈಕಮಾಂಡ್‌ ಸೂಚಿಸುವ ಅಭ್ಯರ್ಥಿಯನ್ನು ಬೆಂಬಲಿಸುವ ಭರವಸೆ ನೀಡಿದ್ದೇವೆ
–ಎಂ.ಎಲ್‌.ಅನಿಲ್‌ ಕುಮಾರ್‌ ವಿಧಾನ ಪರಿಷತ್‌ ಸದಸ್ಯ ಕಾಂಗ್ರೆಸ್‌
ಕೋಲಾರದ ಕಾಂಗ್ರೆಸ್‌ನಲ್ಲಿರುವ ಬಣ ಜಗಳಕ್ಕೆ ಯಾರ ಬಳಿಯೂ ಮದ್ದು ಇಲ್ಲ. ಅದಕ್ಕೆ ದೊಡ್ಡ ಶಸ್ತ್ರಚಿಕಿತ್ಸೆಯೇ ನಡೆಯಬೇಕು. ಆಗ ಮಾತ್ರ ಸರಿ ಹೋಗಬಹುದೇನೋ?
–ಜಿ.ಸಿ.ಬಯ್ಯಾರೆಡ್ಡಿ ಸಿಪಿಎಂ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ (‘ಇಂಡಿಯಾ’ ಒಕ್ಕೂಟ)
ಕಾಂಗ್ರೆಸ್‌ನ ಒಳ ಜಗಳ ನೆಚ್ಚಿಕೊಂಡು ನಾವು ಚುನಾವಣೆ ನಡೆಸಲ್ಲ. ಮೈತ್ರಿಕೂಟದ ಕಾರ್ಯಕರ್ತರು ಮತದಾರರು ಕುಮಾರಣ್ಣ ದೇವೇಗೌಡರು ಹಾಗೂ ಪ್ರಧಾನಿ ಮೋದಿ ನಮ್ಮ ಶಕ್ತಿ
–ಇಂಚರ ಗೋವಿಂದರಾಜು ವಿಧಾನ ಪರಿಷತ್‌ ಸದಸ್ಯ ಜೆಡಿಎಸ್‌

ಮತ್ತೆ ಖರ್ಗೆ ಅಂಗಳಕ್ಕೆ ಚೆಂಡು!

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಬಣದವರನ್ನು ಈಗಾಗಲೇ ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಎಚ್‌.ಮುನಿಯಪ್ಪ ಕುಟುಂಬ ಹೊರತುಪಡಿಸಿ ಯಾರಿಗೇ ಟಿಕೆಟ್‌ ನೀಡಿದರೂ ಗೆಲ್ಲಿಸಿಕೊಂಡು ಬರುವ ಭರವಸೆಯನ್ನೂ ಈ ಬಣದ ಶಾಸಕರು ನೀಡಿದ್ದಾರೆ. ಆದರೆ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್‌ ಬೇಕೆಂದು ಪಟ್ಟು ಹಿಡಿದಿರುವ ಕೆ.ಎಚ್‌.ಮುನಿಯಪ್ಪ ಅವರನ್ನು ಸಮಾಧಾನಪಡಿಸಲು ಸಿಎಂ ಡಿಸಿಎಂಗೆ ಸಾಧ್ಯವಾಗಿಲ್ಲ. ಆ ಕೆಲಸವನ್ನು ಅವರು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಟ್ಟಿದ್ದಾರೆ ಎಂಬುದು ಗೊತ್ತಾಗಿದೆ. ಇನ್ನು ಬಾಗಲಕೋಟೆ ಕಾಂಗ್ರೆಸ್‌ನಲ್ಲಿ ಚಿತ್ರದುರ್ಗ ಹಾಗೂ ಶಿವಮೊಗ್ಗ ಬಿಜೆಪಿಯಲ್ಲಿ ಉದ್ಭವಿಸಿರುವಂತೆ ಚಿಕ್ಕಪೆದ್ದಣ್ಣ ಅವರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸಚಿವ ಮುನಿಯಪ್ಪ ಮುಂದಾಗಲಾರರು ಎಂದು ಮೂಲಗಳು ಹೇಳಿವೆ. ಈ ನಡುವೆ ಕ್ಷೇತ್ರಕ್ಕೆ ಜೆಡಿಎಸ್‌–ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಮಲ್ಲೇಶ್‌ ಬಾಬು ಹೆಸರು ಅಂತಿಮಗೊಂಡಿದ್ದರೂ ಪಕ್ಷದಿಂದ ಅಧಿಕೃತ ಘೋಷಣೆ ಆಗಿಲ್ಲ. ಆ ಪಕ್ಷದವರು ‌ಚಿಕ್ಕಪೆದ್ದಣ್ಣ ಅವರನ್ನು ಪಕ್ಷಕ್ಕೆ ಸೆಳೆಯಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಅಭ್ಯರ್ಥಿಗೆ ಹೆಣಗಾಟ ತಪ್ಪಿದ್ದಲ್ಲ!

ರಮೇಶ್‌ ಕುಮಾರ್‌ ಬಣ ಹಾಗೂ ಕೆ.ಎಚ್‌.ಮುನಿಯಪ್ಪ ಬಣಗಳ ಕಿತ್ತಾಟದಿಂದ ಮೂರನೇ ವ್ಯಕ್ತಿ ಅಥವಾ ಕ್ಷೇತ್ರದ ಹೊರಗಿನವರಿಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ ಅಭ್ಯರ್ಥಿಯಾಗಿ ಬರುವವರಿಗೆ ಹೆಣಗಾಟ ತಪ್ಪಿದ್ದಲ್ಲ ಎಂದು ಕ್ಷೇತ್ರದ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿರುವ ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ ಕೂಡ ಇದೇ ಆತಂಕದಲ್ಲಿ ಇದ್ದಾರೆ. ಆಕಸ್ಮಾತ್‌ ಹೊಸಬರಾದರೆ ಮೊದಲೇ ಕ್ಷೇತ್ರದ ಪರಿಚಯ ಇರಲ್ಲ; ಇನ್ನು ಮತದಾನಕ್ಕೆ ಕೇವಲ 28 ದಿನಗಳು ಬಾಕಿ ಇದ್ದು ಉಭಯ ಬಣಗಳನ್ನು ವಿಶ್ವಾಸಕ್ಕೆ ಪಡೆಯುವಷ್ಟರಲ್ಲಿ ಸಮಯವೇ ಮುಗಿದು ಹೋಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT