ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: ನಾಟಕಗಳಲ್ಲಿ ಬದುಕು ಕಟ್ಟಿಕೊಂಡ ವೆಂಕಟೇಶಪ್ಪ

ರಾಜ್ಯದ ಮೂಲೆ ಮೂಲೆಗಳಿಗೆ ತೆರಳಿ ನೂರಾರು ಶಿಷ್ಯರಿಗೆ ಗುರುವಾಗಿ ನಾಟಕ ಅಭ್ಯಾಸ
Published 21 ಜುಲೈ 2023, 8:46 IST
Last Updated 21 ಜುಲೈ 2023, 8:46 IST
ಅಕ್ಷರ ಗಾತ್ರ

ಮುಳಬಾಗಿಲು: ಸುಮಾರು ಐವತ್ತು ವರ್ಷಗಳ ಹಿಂದೆಯೇ ಪದವಿ ಪೂರ್ವ ಶಿಕ್ಷಣ ಪಡೆದು, ಸರ್ಕಾರಿ ಕೆಲಸಕ್ಕೆ ಅಲೆದಾಡಿ ಕೊನೆಗೆ ನಾಟಕವನ್ನೇ ವೃತ್ತಿ ಪ್ರವೃತ್ತಿಯನ್ನಾಗಿ ಬದುಕು ಕಟ್ಟಿಕೊಂಡು ನೂರಾರು ಮಂದಿ ಶಿಷ್ಯರ ಗುರುವಾಗಿ ಹೆಸರುವಾಸಿಯಾಗಿದ್ದಾರೆ ಎಸ್‌.ವೆಂಕಟೇಶಪ್ಪ.

ತಾಲ್ಲೂಕಿನ ಆವಣಿ ಹೋಬಳಿಯ ಉತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನಹಳ್ಳಿ ಗ್ರಾಮದ ಎಸ್.ವೆಂಕಟೇಶಪ್ಪ ಅವರು 1970ರಲ್ಲಿ ಕೋಲಾರದಲ್ಲಿ ಪಿಯುಸಿ ಕೋಲಾರ, ಬೆಂಗಳೂರು ಕೆಲಸಕ್ಕಾಗಿ ಅಲೆದಾಡಿ ಕೊನೆಗೆ ಬನಹಳ್ಳಿ ಗ್ರಾಮದಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. 

ನಂತರ ಬಿಡುವಿನ ವೇಳೆಯಲ್ಲಿ ಪಾರಂಪರ್ಯವಾಗಿದ್ದ ಬಂದಿದ್ದ ನಾಟಕ ಹಾಗೂ ಹಾರ್ಮೋನಿಯಂ ಕಲಿಯಲು ಆರಂಭಿಸಿದ ಅವರು, ಇಂದು ರಾಜ್ಯದಲ್ಲಿಯೇ ಅತ್ಯುತ್ತಮ ನಾಟಕ ಗುರುಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಅವರು 2010ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ತಮ್ಮ ಶಾಲಾ ದಿನಗಳಲ್ಲಿಯೇ ನಾಟಕ ಮಾಡುತ್ತಾ, ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಇವರು ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದರು. ಆರು ಮಂದಿ ಗುರುಗಳಿಂದ ನಾಟಕ ಅಭ್ಯಾಸ ಮಾಡಿದ್ದರು. 40 ವರ್ಷಗಳಿಂದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ಮುಂತಾದ ಕಡೆ 400ಕ್ಕೂ ಹೆಚ್ಚು ನಾಟಕಗಳನ್ನು ಕಲಿಸಿದ್ದಾರೆ.

ವೆಂಕಟೇಶಪ್ಪ ಅವರ ತಂದೆ ನಾಟಕದಲ್ಲಿ ಅಭಿನಯಿಸುತ್ತಿದ್ದು, ಇವರು ಅವರೊಂದಿಗೆ ಅಭಿನಯಿಸಲು ಆರಂಭಿಸಿ ಎರಡು ವರ್ಷಗಳಲ್ಲಿ ತಾವೇ ನಾಟಕ ಕಲಿಸುವ ಗುರುವಾಗಿ ವೃತ್ತಿಯನ್ನಾಗಿ ಮಾಡಿಕೊಂಡು ತಮ್ಮ ಸಂಸಾರವನ್ನು ಸಾಗಿಸುತ್ತಿದ್ದಾರೆ.

ಒಂದು ನಾಟಕ ಕಲಿಯಲು 5 ರಿಂದ 6 ತಿಂಗಳು ಕಾಲಾವಕಾಶ ಬೇಕಾಗಿದ್ದು, ಒಂದು ನಾಟಕಕ್ಕೆ ₹ 60 ರಿಂದ ₹ 70 ಸಾವಿರ ಸಂಭಾವನೆ ಪಡೆಯುತ್ತಾರೆ. ಹಾಗಾಗಿ ಇವರ ಬಳಿ ನಾಟಕ ಕಲಿಯಲು ಬೇರೆ ರಾಜ್ಯಗಳಿಂದಲೂ ಬೇಡಿಕೆ ಇದೆ. ಜೊತೆಗೆ ಇವರ ಬಳಿ ಅನೇಕ ಮಂದಿ ತಂಡೋಪ ತಂಡಗಳಾಗಿ ನಾಟಕ ಕಲಿಯುತ್ತಿದ್ದಾರೆ.

ರಾಮಾಯಣ, ಮಹಾಭಾರತ, ದ್ರೌಪದಿ ವಸ್ತ್ರಾಭರಣಂ, ಸಾಸುಲು ಚಿನ್ನಮ್ಮ ಕಥೆ, ಪಾಂಡವರ ವಿಜಯಂ, ಭೀಮಾರ್ಜುನ ಯುದ್ಧ ಹೀಗೆ ಅನೇಕ ನಾಟಕಗಳನ್ನು ಕಲಿಸಿ, ತಮ್ಮ ಜೀವನವನ್ನು ಕಲೆಗಾಗಿ ಮೀಸಲಿರಿಸಿದ್ದಾರೆ.

ರಾಜ್ಯದ ಮೂಲೆ ಮೂಲೆಗಳಿಗೆ ಹೋಗಿ ನಾಟಕ ಕಲಿಸುತ್ತಿದ್ದಾರೆ. ಈ ನಾಟಕವನ್ನು ತನ್ನ ಮಕ್ಕಳು ಕಲಿತಿಲ್ಲ ಎಂಬ ಬೇಸರವಿದ್ದರೆ, ತನ್ನ ಶಿಷ್ಯರು ನಾಟಕವನ್ನು ಕಲಿಸುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂಬ ಸಂತೋಷವಿದೆ ಎಂದು ಹೆಮ್ಮೆ ಪಡುತ್ತಾರೆ.

ನಾಟಕ ಧಾರಿಯೊಬ್ಬರೊಂದಿಗೆ ಎಸ್.ವೆಂಕಟೇಶಪ್ಪ
ನಾಟಕ ಧಾರಿಯೊಬ್ಬರೊಂದಿಗೆ ಎಸ್.ವೆಂಕಟೇಶಪ್ಪ
ದೇಶೀಯ ಕಲೆಗಳಲ್ಲಿ ಒಂದಾದ ನಾಟಕ ಇಂದು ತಾಂತ್ರಿ ಮತ್ತು ಯಾಂತ್ರಿಕ ಶಕ್ತಿಯಿಂದ ನಶಿಸುತ್ತಿದೆ. ಹಾಗಾಗಿ ಇದನ್ನು ನಶಿಸಲು ಬಿಡದೆ ಎತ್ತರಕ್ಕೆ ಬೆಳಸಬೇಕು. ಹಿಂದಿನ ಕಾಲದಲ್ಲಿದ್ದ ಗತ ವೈಭವ ಮರುಕಳುಹಿಸಬೇಕೆಂಬ ಹಂಬಲ ಇದೆ.
ಎಸ್.ವೆಂಕಟೇಶಪ್ಪ ನಾಟಕ ಗುರುಗಳು

ಹಾರ್ಮೋನಿಯಂ ನುಡಿಸುವುದರಲ್ಲೂ ಎತ್ತಿದ ಕೈ ವೆಂಕಟೇಶಪ್ಪ ಅವರು ಕೇವಲ ನಾಟಕ ಮಾತ್ರವಲ್ಲದೆ ಹಾರ್ಮೋನಿಯಂ ನುಡಿಸುವುದರಲ್ಲಿಯೂ ಹೆಚ್ಚಿನ ಆಸಕ್ತಿ ಹೊಂದಿರುವವರು. ತಮ್ಮ ಅನೇಕ ನಾಟಕಗಳಿಗೆ ಸ್ವತಃ ತಾವೇ ಹಾರ್ಮೋನಿಯಂ ನುಡಿಸುತ್ತಾರೆ. ಹಾಗಾಗಿ ಅವರು ಹಾರ್ಮೋನಿಯಂ ಸಂಗೀತ ವಿದ್ವಾಂಸರಾಗಿಯೂ ಸೈ ಎನಿಸಿಕೊಂಡಿದ್ದಾರೆ. ಆದ್ದರಿಂದ ನಾಟಕಗಳು ಇಲ್ಲದ ಬಿಡುವಿನ ವೇಳೆಯಲ್ಲಿ ಹಾರ್ಮೋನಿಯಂ ನುಡಿಸಲು ಭಾರೀ ಬೇಡಿಕೆಯಲ್ಲಿರುತ್ತಾರೆ.

ಹರಸಿ ಬಂದ ಪ್ರಶಸ್ತಿಗಳು ನಲವತ್ತು - ಐವತ್ತು ವರ್ಷಗಳಿಂದ ಸಂಪೂರ್ಣವಾಗಿ ತಮ್ಮನ್ನು ನಾಟಕ ಹಾಗೂ ಹಾರ್ಮೋನಿಯಂ ನುಡಿಸುವುದರಲ್ಲಿ ತೊಡಗಿಸಿಕೊಂಡಿರುವ ವೆಂಕಟೇಶಪ್ಪ ಅವರನ್ನು ಪ್ರಶಸ್ತಿಗಳು ಹರಸಿ ಬಂದಿವೆ. ಇವರ ಕಲೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ 2010 ರಲ್ಲಿ ‘ಕರ್ನಾಟಕ ನಾಟಕ ರತ್ನ ಪ್ರಶಸ್ತಿ’ ನೀಡಿ ಗೌರವಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ‘ನಟ ರತ್ನ ಪ್ರಶಸ್ತಿ’ ಗೊರವನಹಳ್ಳಿ ಮಹಾ ಲಕ್ಷ್ಮೀ ದೇವಾಲಯದ ವತಿಯಿಂದ ‘ರಂಗ ಗೌರವ ಪ್ರಶಸ್ತಿ’ ಹರಸಿ ಬಂದಿವೆ.  ಹೀಗೆ ಸುಮಾರು 60 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT