ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ದೇಗುಲದ ₹ 45.43 ಲಕ್ಷ ದುರುಪಯೋಗ

ಕೆಜಿಎಫ್‌ ತಾಲ್ಲೂಕಿನ ಬಂಗಾರುತಿರುಪತಿ ದೇಗುಲ; ಪೇಷ್ಕಾರ್ ಶ್ರೀನಿವಾಸಶೆಟ್ಟಿ ಅಮಾನತು–ತನಿಖೆಗೆ ಆದೇಶ
Published 6 ಡಿಸೆಂಬರ್ 2023, 7:05 IST
Last Updated 6 ಡಿಸೆಂಬರ್ 2023, 7:05 IST
ಅಕ್ಷರ ಗಾತ್ರ

ಕೋಲಾರ: ಕೆಜಿಎಫ್‌ ತಾಲ್ಲೂಕಿನ ಗುಟ್ಟಹಳ್ಳಿ ಬಂಗಾರುತಿರುಪತಿ ಶ್ರೀವೆಂಕಟರಮಣಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದಂತೆ ₹ 45.43 ಲಕ್ಷ ದುರುಪಯೋಗ ಆರೋಪದ ಮೇಲೆ ಪೇಷ್ಕಾರ್‌ ಕೆ.ಜಿ.ಶ್ರೀನಿವಾಸಶೆಟ್ಟಿ ಅವರನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಅಮಾನತುಗೊಳಿಸಿದ್ದಾರೆ.

ಹಣ ದುರುಪಯೋಗ ಮಾಡಿಕೊಂಡು ಕರ್ತವ್ಯ ಲೋಪ, ನಿರ್ಲಕ್ಷತೆ ತೋರಿ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯ ಹಾಗೂ ಸರ್ಕಾರದ ಆದಾಯಕ್ಕೆ ನಷ್ಟವುಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ನ.29ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಆದೇಶದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕೈಗೊಂಡ ನಿರ್ಧಾರದ ಮೇರೆಗೆ ಅವರು ಈ ಕ್ರಮ ವಹಿಸಿದ್ದಾರೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಕಲಂ 16 ಮತ್ತು 2002ರ ನಿಯಮ 17ರನ್ವಯ ಶಿಸ್ತುಕ್ರಮ ಜರುಗಿಸಲು ಮತ್ತು ವಿಚಾರಣೆ ನಡೆಸಲು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು, ಜಿಲ್ಲಾಧಿಕಾರಿಗೆ ಶಿಫಾರಸ್ಸು ಮಾಡಿರುತ್ತಾರೆ. ಅದರಂತೆ ಜಿಲ್ಲಾಧಿಕಾರಿಯು ದೇವಾಲಯದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಮಂಡಿಸಿ ಶಿಸ್ತುಕ್ರಮ ಜರುಗಿಸಲು ಸೂಚಿಸಿದ್ದರು.

ಪೇಷ್ಕಾರ್ ಕರ್ತವ್ಯದಲ್ಲಿದ್ದ ಅವಧಿಯಲ್ಲಿ ಶ್ರೀನಿವಾಸಶೆಟ್ಟಿ 1996-1997ರಲ್ಲಿ ಹಸು, ಕರು, ಹೋರಿ, ಪಾತ್ರೆ ಸಾಮಾನು ಬಾಡಿಗೆ ಮತ್ತು ವಿದ್ಯುತ್ ದರಗಳಲ್ಲಿ ಒಟ್ಟು ₹ 1,68,614 ಅನ್ನು ಸಂಸ್ಥೆಯ ನಿಧಿಗೆ ಜಮಾ ಮಾಡದೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.

ಮತ್ತೆ ಇಲ್ಲಿಗೆ ವರ್ಗಾವಣೆಯಾಗಿ ಬಂದು 2014ನೇ ಸಾಲಿನಿಂದ 2019ರತನಕ ದೇವಾಲಯದ ವಿವಿಧ ಖಾತೆಗಳಲ್ಲಿದ್ದ ₹ 20,80,000ಅನ್ನು ಸ್ವಂತ ಖರ್ಚಿಗಾಗಿ ಸೆಲ್ಪ್ ಡ್ರಾ ಮಾಡಿದ್ದಾರೆ. ಸ್ವಯಂ ಹೆಸರಿನ ಮೇಲೆ ₹ 21,84,945 ಪಡೆದುಕೊಂಡು ಕರ್ನಾಟಕ ಸಾದಿಲ್ವಾರ್ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ದೇವಾಲಯದ ಆವರಣದಲ್ಲಿ ಭದ್ರತಾ ಕೊಠಡಿಯನ್ನು ನಿರ್ಮಾಣ ಮಾಡಲು ನಿರ್ಮಿತಿ ಕೇಂದ್ರವು ಕಾಮಗಾರಿಗೆ ತಗಲುವ ವೆಚ್ಚಕ್ಕೆ ₹ 1,10,000 ಅಂದಾಜು ಮಟ್ಟಿ ತಯಾರಿಸಿ ತಾಂತ್ರಿಕ ಮಂಜೂರಾತಿಗೆ ಜಿಲ್ಲಾಡಳಿತಕ್ಕೆ ಸಲ್ಲಿಸಿತ್ತು. ಅದರಂತೆಯೇ ಜಿಲ್ಲಾಡಳಿತವು 2017ರಲ್ಲಿ ಆಡಳಿತ ಮಂಜೂರಾತಿ ನೀಡಿತ್ತು. ಆದರೆ, ಕಾಮಗಾರಿ ಹಣವನ್ನು ನಿರ್ಮಿತಿ ಕೇಂದ್ರಕ್ಕೆ ನೀಡದೆ ಶ್ರೀನಿವಾಸಶೆಟ್ಟಿ ತಮ್ಮ ಹೆಸರಿಗೆ ಚೆಕ್ ಪಡೆದು ಹಣ ಡ್ರಾ ಮಾಡಿದ್ದಾರೆ. ಲೆಕ್ಕ ತನಿಖೆಯಲ್ಲಿ ಪ್ರಾಮಾಣೀಕರಿಸಲು ಸಾಧ್ಯವಾಗಿಲ್ಲ ಎಂದು ಕೋಲಾರ ವರ್ತುಲ ಲೆಕ್ಕ ಪರಿಶೋಧನಾ ಹಿರಿಯ ಉಪ ನಿರ್ದೇಶಕರು ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ವರದಿ ಸಲ್ಲಿಸಿದ್ದರು.

ವರದಿಯನ್ನು ಪರಿಶೀಲಿಸಿದ ನಂತರ ದೇವಾಲಯಕ್ಕೆ ಅಪಾರ ನಷ್ಟ ಉಂಟು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ನೌಕರರ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಲಯ ದತ್ತಿಗಳ ನಿಯಮ 2002ರ ನಿಯಮ17(4)ರ ಅನ್ವಯ ದೇವಾಲಯದ ನೌಕರರು ಹಾಗೂ ಅರ್ಚಕರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಅಧಿಕಾರವನ್ನು ಚಲಾಯಿಸಿ ವ್ಯವಸ್ಥಾಪನಾ ಸಮಿತಿಯು ನ.27ರಂದು ನಡೆಸಿದ ಸಭೆಯಲ್ಲಿ ತೀರ್ಮಾನಿಸಿ ವಿಚಾರಣೆಯನ್ನು ಬಾಕಿ ಇರಿಸಿ ಅಮಾನತ್ತುಪಡಿಸಲು ತೀರ್ಮಾನಿಸಿತು.

ಸಮಿತಿಯ ತೀರ್ಮಾನದ ಪತ್ರವನ್ನು ಪರಿಶೀಲಿಸಿರುವ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ವಿಚಾರಣೆಯನ್ನು ಬಾಕಿ ಇರಿಸಿ, ಶ್ರೀನಿವಾಸಶೆಟ್ಟಿಯನ್ನು ಅಮಾನತ್ತುಪಡಿಸಿ, ವಿಚಾರಣೆ ಮುಗಿಯುವ ತನಕ ಸಮಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಟ್ಟು ಹೊರಹೋಗಬಾರದು ಎಂದು ಸೂಚಿಸಿದ್ದಾರೆ. ಸದ್ಯದಲ್ಲೇ ಸಮಿತಿ ನೇಮಿಸಿ ತನಿಖೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸಭೆ ನಿರ್ಧಾರದಂತೆ ಆದೇಶ ಭಕ್ತರ ದುಡ್ಡಿಗೆ ಕನ್ನ ಆರೋಪ ಪೇಷ್ಕಾರ್‌ ಎಂದರೆ ಎಸ್‌ಡಿಎ ಸ್ವರೂಪದ ಕಾರ್ಯವೈಖರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT